

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನೇತೃತ್ವದ 14 ಮಂದಿ ಸಚಿವರ ಪ್ರಮಾಣ ವಚನ ಸ್ವೀಕಾರ ಹಾಗೂ ಮಂತ್ರಿಮಂಡಲದ ರಚನೆ ಸಂವಿಧಾನಬಾಹಿರ ಎಂದು ಘೋಷಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್ ಬರೋಬ್ಬರಿ 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ಈ ವಿಚಾರವಾಗಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ 13 ಮಂದಿ ನೂತನ ಸಚಿವರನ್ನು ಪ್ರತಿವಾದಿಗಳನ್ನಾಗಿ ಮಾಡಿ ಹುಬ್ಬಳ್ಳಿಯ ನಿವಾಸಿ ಮಂಗಳಪ್ಪ ಹುಲಿಕೇರಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.
ಕೆಲ ಕಾಲ ವಾದ ಆಲಿಸಿದ ಪೀಠವು ಇದೊಂದು ಊಹೆ ಮತ್ತು ಗ್ರಹಿಕೆಗಳ ಆಧಾರದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಸಲ್ಲಿಸಲಾಗಿರುವ ಕ್ಷುಲ್ಲಕ ಅರ್ಜಿಯಾಗಿದೆ. ಇಂತಹ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಲಯದ ಸಮಯ ಹಾಳು ಮಾಡಲಾಗಿದೆ ಎಂದು ಹೇಳಿ ಅರ್ಜಿದಾರರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು. ದಂಡದ ಮೊತ್ತವನ್ನು ಎರಡು ವಾರಗಳನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ನಿರ್ದೇಶನ ನೀಡಿತು. ಈ ಮಧ್ಯೆ, ಅರ್ಜಿಯನ್ನು ವಾಪಸ್ ಪಡೆದುಕೊಳ್ಳಲಾಗುವುದು ಎಂದು ವಕೀಲರು ಪದೇ ಪದೇ ಮನವಿ ಮಾಡಿಕೊಂಡರು. ಆದರೆ, ಅದನ್ನು ಪೀಠ ತಳ್ಳಿ ಹಾಕಿತು.
ಮುಖ್ಯಮಂತ್ರಿ ಸೇರಿ 13 ಮಂದಿ ಸಚಿವರು ಜೂನ್ 3ರಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಆ ಮೂಲಕ 14 ಮಂದಿ ಸಚಿವರ ಮಂತ್ರಿ ಮಂಡಲ ರಚನೆಯಾಗಿದೆ. ಆದರೆ, ಕರ್ನಾಟಕದ ವಿಧಾನಸಭೆಯ ಸಂಖ್ಯಾಬಲ 224 ಆಗಿದ್ದು, ಅದರಂತೆ ಸಂವಿಧಾನದ 1 64 (1ಎ)ನೇ ವಿಧಿಯ ಪ್ರಕಾರ ಕರ್ನಾಟಕದ ಸಚಿವ ಸಂಪುಟದ ಗಾತ್ರ ಶೇ. 12 ರಿಂದ 15 ಅಂದರೆ ಕನಿಷ್ಠ 24 ಅಥವಾ ಗರಿಷ್ಠ 34 ಇರಬೇಕು. ಅಷ್ಟೇ ಸಂಖ್ಯೆ ಸಚಿವರ ಪ್ರಮಾಣ ವಚನ ಸ್ವೀಕರಿಸಿ, ಮಂತ್ರಿ ಮಂಡಲ ರಚನೆಯಾಗಬೇಕು. ಆದರೆ, ಜೂನ್ 3ರಂದು 14 ಮಂದಿಯ ಮಂತ್ರಿಮಂಡಲ ರಚನೆಯಾಗಿದೆ. ಇಂದು ಸಂವಿಧಾನಬಾಹಿರ. ಹೀಗಾಗಿ, ಮಂತ್ರಿಮಂಡಲವನ್ನು ರದ್ದುಪಡಿಸಬೇಕು. ಅರ್ಜಿ ಇತ್ಯರ್ಥ ಆಗುವ ತನಕ ಮಂತ್ರಿಮಂಡಲದ ಕಾರ್ಯನಿರ್ವಹಿಸದಂತೆ ಮತ್ತು ಯಾವುದೇ ನಿರ್ಣಯಗಳನ್ನು ಕೈಗೊಳ್ಳದಂತೆ ನಿರ್ದೆಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.