ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರದ ಜಾಹೀರಾತು ತೆರವು ಸುತ್ತೋಲೆ ರದ್ದು ಕೋರಿದ್ದ ಅರ್ಜಿ ವಜಾ

ಜಾಹೀರಾತು ಏಜೆನ್ಸಿ ಮತ್ತು ಸಾರಿಗೆ ನಿಗಮಗಳ ನಡುವಿನ ವಿವಾದ ಒಪ್ಪಂದಕ್ಕೆ ಸಂಬಂಧಿಸಿದ್ದು, ಸೂಕ್ತ ಪರಿಹಾರ ಕಂಡುಕೊಳ್ಳಲು ಅರ್ಜಿದಾರರಿಗೆ ಸ್ವಾತಂತ್ರ್ಯ ಕಲ್ಪಿಸಿರುವ ನ್ಯಾಯಾಲಯ.
KSRTC Bus & HC
KSRTC Bus & HC
Published on: 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳು ಮತ್ತು ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳನ್ನು ನೇರ ಅಥವಾ ಪರೋಕ್ಷವಾಗಿ ಪ್ರಚಾರ ಮಾಡುವ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಪಡಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ.

ಸಾರಿಗೆ ನಿಗಮಗಳು ಮತ್ತು ಜಾಹೀರಾತು ಸಂಸ್ಥೆಯ ನಡುವಿನ ವಿವಾದವು ಒಪ್ಪಂದಕ್ಕೆ ಸಂಬಂಧಿಸಿದ್ದಾಗಿದ್ದು, ಈ ಅರ್ಜಿಯ ವ್ಯಾಪ್ತಿಯಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ಏಕಸದಸ್ಯ ಪೀಠ ತಿಳಿಸಿದೆ.

Justice CM Poonacha
Justice CM Poonacha

ಸುತ್ತೋಲೆಗಳಿಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರ ಸಂಸ್ಥೆಗೆ ಅವಕಾಶವಿದ್ದು, ಅದನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಾರಿಗೆ ನಿಗಮಗಳು ಸ್ವತಂತ್ರವಾಗಿವೆ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, ಒಪ್ಪಂದದ ಷರತ್ತುಗಳ ಪ್ರಕಾರ ಜಾಹೀರಾತು ಪ್ರದರ್ಶಿಸಲು ಸಾಧ್ಯವಾಗದಿದ್ದಲ್ಲಿ, ಅರ್ಜಿದಾರರು ಒಪ್ಪಂದದ ಅಡಿಯಲ್ಲಿ ಲಭ್ಯವಿರುವ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಪೀಠ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ಮೆಸರ್ಸ್‌ ಸಾಯಿ ಅಡ್ವರ್ಟೈಸರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ: ಕೆಎಸ್‌ಆರ್‌ಟಿಸಿ ಜನವರಿ 31ರಂದು ಹಾಗೂ ಬಿಎಂಟಿಸಿ ಫೆಬ್ರವರಿ 2ರಂದು ಸುತ್ತೋಲೆ ಹೊರಡಿಸಿ, ತಂಬಾಕು ಉತ್ಪನ್ನಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಚಾರ ಮಾಡುವ ಜಾಹೀರಾತು ಸ್ಟಿಕ್ಕರ್‌ಗಳು ಮತ್ತು ಗ್ಲೋ ಸೈನ್‌ (ಬೆಳಕಿನ ಫಲಕ)ಗಳನ್ನು ಬಸ್‌ಗಳು ಹಾಗೂ ಬಸ್ ನಿಲ್ದಾಣಗಳಿಂದ ತೆರವುಗೊಳಿಸುವಂತೆ ನಿರ್ದೇಶಿಸಿತ್ತು.

ಈ ಸುತ್ತೋಲೆಗಳನ್ನು ಪ್ರಶ್ನಿಸಿ ಮೆಸರ್ಸ್‌ ಸಾಯಿ ಅಡ್ವರ್ಟೈಸರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಕಳೆದ ವರ್ಷ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಯಶಸ್ವಿ ಬಿಡ್‌ದಾರರಾಗಿ ಆಯ್ಕೆಯಾಗಿದ್ದ ಸಂಸ್ಥೆಯು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಎರಡೂ ನಿಗಮಗಳೊಂದಿಗೆ ಜಾಹೀರಾತು ಪ್ರದರ್ಶನಕ್ಕೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ವಿಮಲ್ ಎಲಾಚಿ ಸೇರಿದಂತೆ ವಿವಿಧ ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸಲು ಅನುಮತಿ ನೀಡಲಾಗಿತ್ತು.

ಆದರೆ, ಒಪ್ಪಂದ ಜಾರಿಯಲ್ಲಿರುವಾಗಲೇ ಸಾರಿಗೆ ನಿಗಮಗಳು ಹೊಸ ಸುತ್ತೋಲೆಗಳನ್ನು ಹೊರಡಿಸಿರುವುದರಿಂದ ತಮ್ಮ ಜಾಹೀರಾತು ವ್ಯವಹಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಜಾಹೀರಾತು ನೀಡಲಾಗುತ್ತಿದ್ದ ಉತ್ಪನ್ನಗಳು ತಂಬಾಕು ಉತ್ಪನ್ನಗಳಲ್ಲ, ಬದಲಿಗೆ ನೈಸರ್ಗಿಕ ಉತ್ಪನ್ನಗಳಾಗಿವೆ ಎಂದು ವಾದಿಸಿದರು.

ಕಾನೂನುಬದ್ಧ ಒಪ್ಪಂದದ ಆಧಾರದಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿದ್ದು, ಸಾರಿಗೆ ನಿಗಮಗಳು ತಮ್ಮ ಒಪ್ಪಂದದ ಬದ್ಧತೆಯನ್ನು ಗೌರವಿಸಬೇಕು ಎಂದು ಮನವಿ ಮಾಡಿದರು.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸೇರಿದಂತೆ ಯಾವುದೇ ಸಕ್ಷಮ ಪ್ರಾಧಿಕಾರವು ಜಾಹೀರಾತುಗಳು ಕಾನೂನು ಉಲ್ಲಂಘಿಸಿವೆ ಎಂದು ಗುರುತಿಸಿಲ್ಲ. ಆದರೂ ಜಾಹೀರಾತು ತೆರವುಗೊಳಿಸಲು ನಿರ್ದೇಶನ ನೀಡಿರುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದರು.

ಅರ್ಜಿದಾರರ ವಾದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ತಂಬಾಕು ಉತ್ಪನ್ನಗಳ ಜಾಹೀರಾತು ಕಾನೂನುಬಾಹಿರವಾಗಿದೆ ಎಂದು ತಿಳಿಸಿದರು.

ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಹಾಗೂ ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಪೂರೈಕೆ ಮತ್ತು ವಿತರಣೆಯ ನಿಯಂತ್ರಣ ಕಾಯಿದೆ, 2003 ಅಡಿಯಲ್ಲಿ ಇಂತಹ ಜಾಹೀರಾತುಗಳನ್ನು ನಿಷೇಧಿಸಲಾಗಿದೆ ಎಂದು ಸರ್ಕಾರ ವಾದಿಸಿತು.

ಕಾಯಿದೆಯ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸಾರಿಗೆ ನಿಗಮಗಳು ಸಹ ಸಕ್ಷಮ ಪ್ರಾಧಿಕಾರಗಳಿಂದ ಕಾನೂನು ಕ್ರಮ ಹಾಗೂ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಜಾಹೀರಾತು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿತು.

ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‌, ಸಾರಿಗೆ ನಿಗಮಗಳ ಸುತ್ತೋಲೆಗಳಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿತು. ಒಪ್ಪಂದದ ಷರತ್ತುಗಳ ಅಡಿಯಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿತು.