ಕೆಪಿಎಸ್‌ಸಿ ಅಧ್ಯಕ್ಷರ ನೇಮಕಾತಿ ಪ್ರಶ್ನಿಸಿದ್ದ ಪಿಐಎಲ್‌ ಇತ್ಯರ್ಥಪಡಿಸಿದ ಹೈಕೋರ್ಟ್‌

ಪ್ರಸ್ತುತ ಷಡಕ್ಷರಿ ಸ್ವಾಮಿ ಕೆಪಿಎಸ್‌ಸಿ ಅಧ್ಯಕ್ಷರಾಗಿಲ್ಲ. ಹಾಗಾಗಿ, ಅವರ ನೇಮಕಾತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆ ಮಾನ್ಯತೆ ಕಳೆದುಕೊಂಡಿದೆ. ಅದರ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂದ ಪೀಠ.
Karnataka HC and KPSC
Karnataka HC and KPSC

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನಕ್ಕೆ ಷಡಕ್ಷರಿ ಸ್ವಾಮಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ 2019ರಲ್ಲಿ ಹೊರಡಿಸಿದ್ದ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.

ಆರ್‌ಟಿಐ ಕಾರ್ಯಕರ್ತ ಟಿ.ನರಸಿಂಹ ಮೂರ್ತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠವು ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಪ್ರಸ್ತುತ ಷಡಕ್ಷರಿ ಸ್ವಾಮಿ ಕೆಪಿಎಸ್‌ಸಿ ಅಧ್ಯಕ್ಷರಾಗಿಲ್ಲ. ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಿಸಲಾಗಿದೆ. ಇದರಿಂದ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಂಡಿದೆ ಎಂದರು. ಮುಂದುವರೆದು, ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಪ್ರಶ್ನಿಸಿ ಮತ್ತೆರಡು ಅರ್ಜಿ ಸಲ್ಲಿಕೆಯಾಗಿವೆ. ಅವರೆಡನ್ನೂ ಒಟ್ಟಿಗೆ ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.

ಅರ್ಜಿದಾರ ಪರ ವಕೀಲ ಎಸ್.ಉಮಾಪತಿ, ಷಡಕ್ಷರಿ ಸ್ವಾಮಿ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂಬುದು ಅರ್ಜಿಯ ಮೊದಲ ಮನವಿಯಾಗಿದೆ. ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ಸೂಕ್ತ ನಿಯಮ ರೂಪಿಸಲು ಈ ಹಿಂದೆ ಹೈಕೋರ್ಟ್ ಹೊರಡಿಸಿರುವ ಆದೇಶ ಪಾಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬುದು ಎರಡನೇ ಮನವಿಯಾಗಿದೆ ಎಂದು ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು, ಪ್ರಸ್ತುತ ಷಡಕ್ಷರಿ ಸ್ವಾಮಿ ಕೆಪಿಎಸ್‌ಸಿ ಅಧ್ಯಕ್ಷರಾಗಿಲ್ಲದ ಕಾರಣ ಅವರ ನೇಮಕಾತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆ ಮಾನ್ಯತೆ ಕಳೆದುಕೊಂಡಿದೆ. ಅದರ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ. ಆದರೆ, ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ನಿಯಮ ರೂಪಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ 2016ರ ಜ.21ರಂದು ಹೊರಡಿಸಿರುವ ಆದೇಶ ಜಾರಿ ಕುರಿತಂತೆ ಅರ್ಜಿದಾರರು ಪರ್ಯಾಯ ಪರಿಹಾರ ಕ್ರಮ ಕೈಗೊಳ್ಳಬಹುದು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು

ನ್ಯಾಯಾಲಯದ ಆದೇಶದ ಹೊರತಾಗಿಯೂ ಶೋಧನಾ ಸಮಿತಿ ರಚನೆ ಮಾಡದೆಯೇ ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸಲಾಗಿದೆ ಎಂದು ಆರೋಪಿಸಿ 2020ಲ್ಲಿ ಸಲ್ಲಿಸಿರುವ ಅರ್ಜಿ ಸಂಬಂಧ ಕೆಪಿಎಸ್‌ಸಿಗೆ ನ್ಯಾಯಾಲಯ ಮತ್ತೊಮ್ಮೆ ನೋಟಿಸ್ ಜಾರಿಗೊಳಿಸಿತು. ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಲಾಗಿದೆ. ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಎಸ್‌ ಸಾಹುಕಾರ್ ಅವರನ್ನು ನೇಮಿಸಿರುವ ಆದೇಶ ಪ್ರಶ್ನಿಸಿರುವ ಮತ್ತೊಂದು ಅರ್ಜಿಯನ್ನೂ ಸಹ ಫೆ.20ರಂದೇ ವಿಚಾರಣೆಗೆ ನಿಗದಿಪಡಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com