ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ನಿಗದಿಪಡಿಸಿದ್ದ ಐದು ಮತ್ತು ಮೂರು ವರ್ಷದ ಕಾನೂನು ಪದವಿಯ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
ಪರೀಕ್ಷೆ ನಡೆಸುವುದಕ್ಕೆ ತಡೆಯಾಜ್ಞೆ ನೀಡಿ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆಎಸ್‌ಎಲ್‌ಯು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
“ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯವು ಪರೀಕ್ಷೆ ನಡೆಸಬಹುದು. ಆದರೆ, ಪರೀಕ್ಷಾ ಫಲಿತಾಂಶವು ಅರ್ಜಿ ಕುರಿತು ನ್ಯಾಯಾಲಯ ನೀಡುವ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ” ಎಂದು ಆದೇಶದಲ್ಲಿ ಪೀಠ ಸ್ಪಷ್ಟಪಡಿಸಿದೆ.
ಅಲ್ಲದೇ, ಪರೀಕ್ಷೆಗೆ ವೇಳಾಪಟ್ಟಿ ನಿಗದಿಪಡಿಸಿ ಕೆಎಸ್‌ಎಲ್‌ಯು ಹೊರಡಿಸಿದ ಸುತ್ತೋಲೆ ಪ್ರಶ್ನಿಸಿ ಏಕ ಸದಸ್ಯ ಪೀಠದ ಮುಂದೆ ತಕರಾರು ಅರ್ಜಿ ಸಲ್ಲಿಸಿರುವ ಎಚ್ ಸಿ ನವೀನ್ ಕುಮಾರ್ ಹಾಗೂ ಇತರೆ ಒಂಭತ್ತು ಮಂದಿ ಅರ್ಜಿದಾರರಿಗೆ ಪೀಠ ಇದೇ ವೇಳೆ ನೋಟಿಸ್ ಜಾರಿ ಮಾಡಿತು. ಹಾಗೆಯೇ, ಮೇಲ್ಮನವಿ ಕುರಿತ ಮುಂದಿನ ವಿಚಾರಣೆಯನ್ನು 2022ರ ಮಾರ್ಚ್ 7ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಕೆಎಸ್‌ಎಲ್‌ಯು ಪರ ಹಿರಿಯ ವಕೀಲ ಉದಯ ಹೊಳ್ಳ ಅವರು “ಪರೀಕ್ಷೆ ನಡೆಯದೆ ಇದ್ದರೆ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಧೀನಕ್ಕೆ ಒಳಪಟ್ಟಿರುವ ಕಾಲೇಜು ವಿದ್ಯಾರ್ಥಿಗಳು ಮತ್ತು ರಾಜ್ಯದ ಇತರೆ ವಿಶ್ವವಿದ್ಯಾಲಯಗಳ ಅಧೀನದ ಕಾಲೇಜು ವಿದ್ಯಾರ್ಥಿಗಳ ನಡುವೆ ಅಸಮಾನತೆ ಉಂಟಾಗುತ್ತದೆ. ಈ ಅಂಶವನ್ನು ಏಕಸದಸ್ಯ ಪೀಠ ಗಂಭೀರವಾಗಿ ಪರಿಗಣಿಸಿಲ್ಲ. ಇನ್ನೂ ಪರೀಕ್ಷೆ ನಡೆಸುವ ವಿಚಾರದಲ್ಲಿ ಸರ್ಕಾರವು 2021ರ ಜುಲೈ 7ರಂದು ಹೊರಡಿಸಿರುವ ಸುತ್ತೋಲೆಯು ಕೆಎಸ್‌ಎಲ್‌ಯುಗೆ ಅನ್ವಯ ಆಗುವುದಿಲ್ಲ. ಮೇಲಾಗಿ ಭಾರತೀಯ ವಕೀಲ ಪರಿಷತ್ (ಬಿಸಿಐ) ನಿರ್ದೇಶನದ ಅನುಸಾರ ಕೆಎಸ್‌ಎಲ್‌ಯು ಪರೀಕ್ಷೆ ನಡೆಸಬೇಕಿದೆ. ಪರೀಕ್ಷೆ ನಡೆಸದೇ ಯಾವುದೇ ಕಾನೂನು ಪದವಿಯನ್ನು ಕೆಎಸ್‌ಎಲ್‌ಯು ಅನುಮೋದಿಸಲಾಗದು” ಎಂದು ಪೀಠದ ಗಮನಕ್ಕೆ ತಂದರು. ಈ ವಾದ ಪರಿಗಣಿಸಿದ ಪೀಠವು ಪರೀಕ್ಷೆ ನಡೆಸಲು ಅನುಮತಿ ನೀಡಿ ಆದೇಶಿಸಿತು.
ನವೆಂಬರ್‌ನಲ್ಲಿ ಕಾನೂನು ಪದವಿಯ ವಿವಿಧ ಸೆಮಿಸ್ಟರ್‌ಗಳ ಪರೀಕ್ಷೆ ನಡೆಸುವ ಕುರಿತು ಕೆಎಸ್‌ಎಲ್‌ಯು 2021ರ ಸೆಪ್ಟೆಂಬರ್ 17ರಂದು ಸುತ್ತೋಲೆ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ನವೀನ್ ಕುಮಾರ್ ಇನ್ನಿತರ ವಿದ್ಯಾರ್ಥಿಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ನಿರ್ದೇಶನದ ಪ್ರಕಾರ ಕೋವಿಡ್ ಸಂದರ್ಭದಲ್ಲಿ ತರಗತಿಗಳು ಸರಿಯಾಗಿ ನಡೆಯದ ಕಾರಣ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಿ, ಮುಂದಿನ ತರಗತಿಗಳಿಗೆ ಬಡ್ತಿ ನೀಡುವಂತೆ ನಿರ್ದೇಶಿಸಿತ್ತು. ಹೀಗಿದ್ದರೂ ಕೆಎಸ್‌ಎಲ್‌ಯು ಪರೀಕ್ಷೆ ನಡೆಸಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ಮಧ್ಯಪ್ರವೇಶ ಮನವಿ ಸಲ್ಲಿಸಿದ್ದ ವಿದ್ಯಾರ್ಥಿ ಶ್ರವಣ್ ಅವರಿಗೆ ಪರೀಕ್ಷೆಗೆ ತಯಾರಿ ನಡೆಸುವಂತೆ ಪೀಠವು ಸಲಹೆ ಮಾಡಿದೆ. ಬಿಸಿಐ ಅನ್ನು ವಕೀಲ ಶ್ರೀಧರ್ ಪ್ರಭು ಪ್ರತಿನಿಧಿಸಿದ್ದರು.
ಆ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ನೇತೃತ್ವದ ಏಕಸದಸ್ಯ ಪೀಠವು ಪರೀಕ್ಷೆಗಳಿಗೆ ತಡೆಯಾಜ್ಞೆ ನೀಡಿ 2021ರ ನವೆಂಬರ್ 12ರಂದು ಮಧ್ಯಂತರ ಆದೇಶ ಮಾಡಿತ್ತು. ಅದನ್ನು ಪ್ರಶ್ನಿಸಿ ಕೆಎಸ್‌ಎಲ್‌ಯು ಮೇಲ್ಮನವಿ ಸಲ್ಲಿಸಿತ್ತು.