ಬಗರ್ ಹುಕುಂ ಸಾಗುವಳಿ ಭೂಮಿ ಅಕ್ರಮ ಮಂಜೂರಾತಿ: ವಕೀಲ ಎಸ್‌ ಎನ್‌ ಲಿಂಗೇಶ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

ಬೇಲೂರು ತಾಲ್ಲೂಕಿನಲ್ಲಿ 2,750 ಎಕರೆ ಜಮೀನನ್ನು 1,430 ಮಂದಿ ನಕಲಿ ಮತ್ತು ಅಕ್ರಮ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂಬುದು ಆರೋಪವಾಗಿದೆ.
High Court of Karnataka
High Court of Karnataka
Published on

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಬಗರ್ ಹುಕುಂ ಸಾಗುವಳಿಯ ಜಮೀನಿನ ಅಕ್ರಮ ಮಂಜೂರಾತಿ ಪ್ರಕರಣದಲ್ಲಿ ಆರೋಪಿಯಾಗಿರುವ ಬಗರ್ ಹುಕುಂ ಸಾಗುವಳಿ ಸಮಿತಿಯ ಸದಸ್ಯ ಎಸ್‌ ಎನ್‌ ಲಿಂಗೇಶ್‌ ಅವರಿಗೆ ಗುರುವಾರ ಕರ್ನಾಟಕ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬೇಲೂರಿನ ಎಸ್‌ ಎನ್‌ ಲಿಂಗೇಶ್‌ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಲಿಂಗೇಶ್‌ ಅವರು ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌, ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತೆ ಒದಗಿಸಬೇಕು. ವಿಚಾರಣಾಧೀನ ನ್ಯಾಯಾಲಯ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ಸಾಕ್ಷ್ಯ ತಿರುಚಬಾರದು, ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ತನಿಖಾಧಿಕಾರಿಗೆ ಸಹಕರಿಸಬೇಕು, ಅವರು ಸೂಚಿಸಿದ ಎಲ್ಲಾ ದಾಖಲೆ ಒದಗಿಸಬೇಕು” ಎಂದು ನ್ಯಾಯಾಲಯವು ನಿರ್ದೇಶಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಉಪವಿಭಾಗಾಧಿಕಾರಿ ಅವರು ಇಡೀ ಪ್ರಕರಣದಲ್ಲಿ ತಹಶೀಲ್ದಾರ್‌ ಪಾತ್ರವಿದೆ ಎಂದಿದ್ದಾರೆ. ಲಿಂಗೇಶ್‌ ಅವರು 2016-18ರ ಅವಧಿಯಲ್ಲಿ ಸಮಿತಿಯ ಸದಸ್ಯರಾಗಿದ್ದು, ವಕೀಲರಾಗಿದ್ದಾರೆ. ಸಮಿತಿಯ ವಿರುದ್ಧ ತಾತ್ಸಾರ ಆರೋಪ ಮಾತ್ರ ಮಾಡಲಾಗಿದೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ರಾಜ್ಯ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಲಿಂಗೇಶ್‌ ಅವರು ಸಮಿತಿಯ ಸದಸ್ಯರಾಗಿದ್ದರು” ಎಂದರು. ಆಗ ಪೀಠವು ಲಿಂಗೇಶ್‌ ಅವರೇನು ಫಲಾನುಭವಿಯಾಗಿಲ್ಲ ಅಲ್ಲವೇ?” ಎಂದಿತು. ಇದಕ್ಕೆ ಜಗದೀಶ್‌ ಅವರು “ಇಲ್ಲ” ಎಂದು ಉತ್ತರಿಸಿದರು.

ಪ್ರಕರಣದ ಹಿನ್ನೆಲೆ: ಬೇಲೂರು ತಾಲ್ಲೂಕಿನಲ್ಲಿ 2,750 ಎಕರೆ ಜಮೀನನ್ನು 1,430 ಮಂದಿ ನಕಲಿ ಮತ್ತು ಅಕ್ರಮ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ ಸಿ ರಾಜಣ್ಣ ಖಾಸಗಿ ದೂರು ಸಲ್ಲಿಸಿದ್ದರು. ಈ ದೂರನ್ನು ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶಿಸಿತ್ತು. ಇದರನ್ವಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 468, 464, 465, 471, 409, 420, 120ಬಿ ಅಡಿ ಪ್ರಕರಣ ದಾಖಲಿಸಲಾಗಿದೆ.

Also Read
ಬಗರ್‌ ಹುಕುಂ ಸಾಗುವಳಿ ಭೂಮಿ ಅಕ್ರಮ ಮಂಜೂರಾತಿ: ಮಾಜಿ ಸದಸ್ಯ ಲಿಂಗೇಶ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಮಾಜಿ ಶಾಸಕ ಹಾಗೂ ತಾಲ್ಲೂಕಿನ ಬಗರ್‌ಹುಕುಂ ಸಾಗುವಳಿ ಸಮಿತಿಯ (ಭೂ ಮಂಜೂರಾತಿ) ಮಾಜಿ ಅಧ್ಯಕ್ಷ ಕೆ ಎಸ್‌ ಲಿಂಗೇಶ್‌, ಸಮಿತಿಯ ಮಾಜಿ ಸದಸ್ಯರಾದ ಕುಮಾರ್‌ ಜಿ ಕೆ ಅಲಿಯಾಸ್‌ ಕೆಂಚೇಗೌಡ, ಶೈಲಾ ಮೋಹನ್‌, ಟಿ ಆರ್‌ ರಮೇಶ್‌ ಅಲಿಯಾಸ್‌ ರುದ್ರಯ್ಯ, ಪರ್ವತಗೌಡ ಅಲಿಯಾಸ್‌ ಕಾಳೇಗೌಡ, ಚೇತನಾ, ಈಶ್ವರ ಪ್ರಸಾದ್‌, ಎಸ್‌ ಎನ್‌ ಲಿಂಗೇಶ್‌, ರಂಗತ್‌, ಭಾಗ್ಯಮ್ಮ, ಸಮಿತಿಯ ಕಾರ್ಯದರ್ಶಿಗಳು ಹಾಗೂ ತಹಶೀಲ್ದಾರ್‌ಗಳಾದ ಬಿ ಎ ಜಗದೀಶ್‌, ಎಚ್‌ ಎಸ್‌ ಪರಮೇಶ್‌, ಜೆ ಉಮೇಶ್‌, ಬಿ ಎಸ್‌ ಪುಟ್ಟಶೆಟ್ಟಿ, ಯು ಮೋಹನ್‌ ಕುಮಾರ್‌ ಅವರು ಕ್ರಮವಾಗಿ 1-15 ಆರೋಪಿಗಳಾಗಿದ್ದಾರೆ. ಹಾಸನದ ಅನಾಮಧೇಯ ವ್ಯಕ್ತಿಯನ್ನು 16ನೇ ಆರೋಪಿಯನ್ನಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

Kannada Bar & Bench
kannada.barandbench.com