ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಮೌಲ್ಯವುಳ್ಳ ತಿಮಿಂಗಿಲದ ವಾಂತಿಯನ್ನು ಕಳ್ಳಸಾಗಣೆ ಮಾಡುತ್ತಿದ್ದ ಜಾಲವೊಂದರ ಪ್ರಮುಖ ಆರೋಪಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಪ್ರಮುಖ ಅರೋಪಿ ಎನ್ನಲಾದ ಮಡಿಕೇರಿಯ ರಿಯಾಜ್ ಸಲ್ಲಿಸಿದ್ದ ಕ್ರಿಮಿನಲ್ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್ ನೇತೃತ್ವದ ಏಕಸದಸ್ಯ ಪೀಠವು ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತೆ ಒದಗಿಸುವಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ನಂಬಲರ್ಹ ಮಾಹಿತಿ ಆಧರಿಸಿ ಆಗಸ್ಟ್ 5ರಂದು ಶಂಕಾಸ್ಪದ ಕಾರ್ ಅನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದಾಗ ಅದರಲ್ಲಿ ಸುಮಾರು 8.25 ಕೆ ಜಿಯಷ್ಟು ತಿಮಿಂಗಲ ವಾಂತಿ ದೊರೆತಿತ್ತು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ರಿಯಾಜ್ ಪರವಾಗಿ ತಿಮಿಂಗಲದ ವಾಂತಿ ಖರೀದಿಸಿದ್ದಾಗಿ ಹೇಳಿಕೆ ನೀಡಿದ್ದರು. ಇದನ್ನು ಆಧರಿಸಿ ಪ್ರಕರಣದಲ್ಲಿ ರಿಯಾಜ್ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿತ್ತು.
ಇದರಿಂದ ಆತಂಕಗೊಂಡ ರಿಯಾಜ್ ಅವರು ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ಮನವಿ ಸಲ್ಲಿಸಿದ್ದರು. ಅಲ್ಲಿ ಮನವಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ರಿಯಾಜ್ ಹೈಕೋರ್ಟ್‌ನಲ್ಲಿ ಜಾಮೀನು ಕೋರಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಸ್ಟ್ 5ರಂದು ಬಂಧಿಸಿದ್ದ ಇತರ ನಾಲ್ವರು ಆರೋಪಿಗಳಿಗೆ ಸಿಆರ್‌ಪಿಸಿ ಸೆಕ್ಷನ್ 167ರ ಅಡಿ ಅಕ್ಟೋಬರ್ 5ರಂದು ಜಾಮೀನು ನೀಡಲಾಗಿದೆ ಎಂಬುದನ್ನು ಪರಿಗಣಿಸಿರುವ ಹೈಕೋರ್ಟ್ ಪ್ರಕರಣದ ಅರ್ಹತೆಯ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಜಾಮೀನು ನೀಡಿದೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಸೆಕ್ಷನ್‌ಗಳಾದ 2(32), 2(36), 39(ಬಿ)(ಡಿ), 40, 44, 48(ಎ), 49(ಏ), 49(ಬಿ), 50, 51 ಅಡಿ ದೂರು ದಾಖಲಿಸಲಾಗಿದೆ.