

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಗೆ ಮೂತ್ರ ವಿಸರ್ಜನೆಯ ಬಳಿಕ ತಿರುಗಿ ಗುಪ್ತಾಂಗ ತೋರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನ ವಿರುದ್ದ ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಚಿಕ್ಕಮಗಳೂರಿನ 26 ವರ್ಷದ ಯುವಕ ತನ್ನ ವಿರುದ್ಧ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ವಜಾಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.
“ಬಸ್‌ನಿಂದ ಇಳಿದ ಅರ್ಜಿದಾರ ಯುವಕನು ಶೌಚಾಲಯ ತಡಕಾಡಿ ಆನಂತರ ಬಯಲಿನಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದು, ಆನಂತರ ತಿರುಗಿದ್ದಾನೆ. ಈ ಸಂದರ್ಭದಲ್ಲಿ ದೂರುದಾರೆಯು ಅಲ್ಲಿಗೆ ಬಂದಿದ್ದಾರೆ. ಇಲ್ಲಿ ಮಹಿಳೆಯ ಘನತೆಗೆ ಚ್ಯುತಿಯಾಗುವಂಥ ಯಾವುದೇ ಕೃತ್ಯವನ್ನು ಆತ ಎಸಗಿಲ್ಲ. ಈ ಪ್ರಕರಣದಲ್ಲಿ ವಿಚಾರಣೆ ಮುಂದುವರಿಯಲು ಅನುಮತಿಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ” ಎಂದು ಪೀಠವು ಪ್ರಕರಣ ರದ್ದುಪಡಿಸಿದೆ.
ಇದಕ್ಕೂ ಮುನ್ನ ಅರ್ಜಿದಾರ ಯುವಕನ ಪರ ವಕೀಲ ಎಚ್ ಎಸ್ ಅಭಿಲಾಷ್ ಅವರು “ಅರ್ಜಿದಾರ ಧರ್ಮಶಾಸ್ತ್ರದ ವಿದ್ಯಾರ್ಥಿಯಾಗಿದ್ದು, ದೆಹಲಿಯಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾನೆ. ಆತ ಮೂತ್ರ ವಿಸರ್ಜನೆ ಹೋಗಿದ್ದನು ಅಷ್ಟೆ. ದೂರಿನಲ್ಲಿ ಏನೂ ಇಲ್ಲ. ಈಗ ಪ್ರಕರಣವನ್ನು ಪರಿಣಾಮಕಾರಿಯಾಗಿಸಲು ಯತ್ನಿಸುತ್ತಿದ್ದಾರೆ” ಎಂದರು.
ದೂರುದಾರರ ಪರ ವಕೀಲೆ ಸ್ವಾತಿ ಗೋಪಾಲಕೃಷ್ಣ ಅವರು “ಅರ್ಜಿದಾರ ಆರೋಪಿಯು ಗುಪ್ತಾಂಗ ತೋರಿಸುವುದಲ್ಲದೇ ಅಸಭ್ಯ ಸಂಜ್ಞೇಯನ್ನು ಮಾಡಿದ್ದಾನೆ” ಎಂದರು.
ಇದನ್ನು ಆಲಿಸಿದ ಪೀಠವು “ಯುವಕ ಪಾಪ ಮೂತ್ರ ವಿಸರ್ಜನೆಗೆ ಹೋಗಿದ್ದಾನೆ. ಆ ಸಂದರ್ಭದಲ್ಲಿ ದೂರುದಾರೆ ಅಲ್ಲಿ ಹೋಗಿದ್ದಾರೆ. ಇದಕ್ಕೆ ಲೈಂಗಿಕ ಕಿರುಕುಳ ಆರೋಪ ಮಾಡಲಾಗಿದೆ. ಏನಿದೆಲ್ಲಾ..” ಎಂದಿತು. ಆನಂತರ ಪ್ರಕರಣ ರದ್ದುಪಡಿಸಿ, ಆದೇಶಿಸಿತು.
ಪ್ರಕರಣದ ಹಿನ್ನೆಲೆ: 2026ರ ಜನವರಿ 24ರಂದು ಮಧ್ಯಾಹ್ನ 3.40ರ ಸಮಯದಲ್ಲಿ ಬೆಂಗಳೂರಿನ ಹೆಬ್ಬಾಳ ರಿಂಗ್ ರಸ್ತೆಯ ಬಳಿ ಬಸ್ ಇಳಿದು ಮನೆಗೆ ಹೋಗಲು ರೈಲ್ವೆ ಟ್ರ್ಯಾಕ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿಗೆ ಬಂದ ಅಪರಿಚಿತ ವ್ಯಕ್ತಿ ತನ್ನ ಬಳಿಗ ಬಂದು ಆತನ ಗುಪ್ತಾಂಗವನ್ನು ತೆಗೆದು ಸನ್ನೆ ಮಾಡಿದ್ದು, ಆಗ ನಾನು ಸ್ವಲ್ಪ ಮುಂದೆ ಬಂದು ನಂತರ ಮತ್ತೆ ಹೋಗಿ ಆತನನ್ನು ಹಿಡಿದುಕೊಂಡೆ. ಆತ ನನ್ನಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಕೂಗಿಕೊಂಡಿದ್ದು, ಅಲ್ಲಿದ್ದ ಜನರು ಆತನನ್ನು ಹಿಡಿದುಕೊಂಡರು ಎಂದು ಯುವತಿ ನೀಡಿದ ದೂರಿನ ಅನ್ವಯ ಕೊಡಿಗೆಹಳ್ಳಿ ಪೊಲೀಸರು ಬಿಎನ್‌ಎಸ್ ಸೆಕ್ಷನ್ 75(2)ರ ಅಡಿ ಪ್ರಕರಣ ದಾಖಲಿಸಿದ್ದರು.