ಭೂವಿವಾದಕ್ಕೆ ಸಂಬಂಧಿಸಿದಂತೆ ಲೋಕ ಅದಾಲತ್‌ನಲ್ಲಿ ಸಂಧಾನದ ಬಳಿಕ ಅದನ್ನು ಮೂರು ವರ್ಷಗಳ ಬಳಿಕ ಪ್ರಶ್ನಿಸಿದ್ದ ಅರ್ಜಿದಾರರೊಬ್ಬರಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ₹25 ಸಾವಿರ ದಂಡ ವಿಧಿಸಿದೆ.
ಲೋಕ ಅದಾಲತ್‌ನಲ್ಲಿ ಇತ್ಯರ್ಥವಾಗಿದೆ ಎಂದು ಸಂಧಾನ ಅರ್ಜಿಯನ್ನು ಪುರಸ್ಕರಿಸಿ ಸಿವಿಲ್ ದಾವೆ ವಜಾಗೊಳಿಸಿ 14.08.2021ರಂದು ಚಿಕ್ಕಮಗಳೂರಿನ ತರೀಕೆರೆಯ ಹಿರಿಯ ಸಿವಿಲ್ ನ್ಯಾಯಾಲಯ ಮಾಡಿರುವ ಆದೇಶ ವಜಾಗೊಳಿಸುವಂತೆ ಕೋರಿ ಚೇತನ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
ಸಂಧಾನ ಅರ್ಜಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಕೆ ಮಾಡಿದಾಗ ಅದೇ ನ್ಯಾಯಾಲಯ ಅದನ್ನು ದಾಖಲಿಸಿಕೊಳ್ಳಬೇಕೆ ವಿನಾ ಅದನ್ನು ಲೋಕ ಅದಾಲತ್‌ಗೆ ವರ್ಗಾಯಿಸಬಾರದು ಎಂದು ರೇಣುಕಾ ಪ್ರಕರಣದಲ್ಲಿ ಹೈಕೋರ್ಟ್ ಆದೇಶಿಸಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಆದರೆ, ರೇಣುಕಾ ಪ್ರಕರಣದ ತೀರ್ಪು 2022ರಲ್ಲಿ ಬಂದಿದ್ದು, ಹಾಲಿ ಪ್ರಕರಣದ ಸಂಧಾನವು 2021ರಲ್ಲಿ ನಡೆದಿದೆ. ಹೀಗಾಗಿ, ರೇಣುಕಾ ಪ್ರಕರಣದ ತೀರ್ಪು ಇಲ್ಲಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಂಧಾನದ ಪತ್ರದಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರಲ್ಲಿ ವಿಚಾರಿಸಲಾಗಿದೆ. ಆಗ ಅರ್ಜಿದಾರರು ವಕೀಲರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ, ಇಲ್ಲಿ ಹಾಲಿ ಅರ್ಜಿಯು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಿದೆ. ಅರ್ಜಿದಾರರು ಸಂಧಾನ ಅರ್ಜಿಗೆ ಸಹಿ ಹಾಕಿದ್ದು, ಆನಂತರ ಅದರ ಫಲವನ್ನೂ ಪಡೆದಿದ್ದಾರೆ. ಈಗ ಮೂರು ವರ್ಷಗಳ ಬಳಿಕ ಸಂಧಾನವನ್ನು ಪ್ರಶ್ನಿಸಿದ್ದಾರೆ. ಹೀಗಾಗಿ, 25 ಸಾವಿರ ದಂಡ ವಿಧಿಸಿ ಅರ್ಜಿ ವಜಾಗೊಳಿಸಲಾಗಿದೆ. ನಾಲ್ಕು ವಾರಗಳಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ದಂಡದ ಮೊತ್ತ ಪಾವತಿಸಬೇಕು. ಜುಲೈ 14ರೊಳಗೆ ದಂಡದ ಮೊತ್ತ ಪಾವತಿಸದಿದ್ದರೆ ಕೆಎಸ್‌ಎಲ್‌ಎಸ್‌ಎಯು ಭೂಕಂದಾಯ ಹಿಂಬಾಕಿ ಎಂದು ಅದನ್ನು ವಸೂಲಿ ಮಾಡಬಹುದಾಗಿದೆ ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಲೋಕ ಅದಾಲತ್‌ಗೆ ಹೋಗಿ ಸಹಿ ಮಾಡಿ, ಆನಂತರ ಸಂಧಾನ ಪತ್ರದಲ್ಲಿ ವಿಚಾರ ಗೊತ್ತಿರಲಿಲ್ಲ ಎಂದರೆ ಹೇಗೆ? ಕಾನೂನು ಪ್ರಕ್ರಿಯೆ ಆರಂಭಿಸಲು ನ್ಯಾಯಾಲಯ ಮುಂದಾಗಬೇಕೆ? ಈ ಪ್ರಕರಣವನ್ನು ಬಾರ್ ಕೌನ್ಸಿಲ್‌ಗೆ ಕಳುಹಿಸಲಾಗುವುದು. ವಕೀಲರು ಸಂಧಾನದ ಬಗ್ಗೆ ನಿಮಗೆ ಮಾಹಿತಿ ನೀಡಿರಲಿಲ್ಲ ಎನ್ನುವ ವಿಚಾರದ ಕುರಿತು ತನಿಖೆಗೆ ಪ್ರಕರಣವನ್ನು ಕಳುಹಿಸಲಾಗುವುದು. ರಾಜೀ ಮಾಡಿಕೊಂಡು ಇಲ್ಲಿ ಈ ರೀತಿ ವಾದಿಸುತ್ತಾರಲ್ಲಾ? ಅವರಿಗೆ ಏನೆಂದುಕೊಂಡಿದ್ದಾರೆ? ಇದು ಅನ್ಯಾಯವಲ್ಲ. ನ್ಯಾಯಾಲಯವನ್ನು ಮೀರುವ ಯತ್ನವನ್ನಾಗಿದೆ ಎಂದು ಕಟುವಾಗಿ ನುಡಿಯಿತು.