ಮನೋಸಾಮಾಜಿಕ ಮಹಿಳೆಯರು, ಪುರುಷರಿಗೆ ಅಂಗವಿಕಲರ ಗುರುತಿನ ಚೀಟಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್‌ ನೋಟಿಸ್‌

“ಮನೋರೋಗ ಸಂಸ್ಥೆಗಳಲ್ಲಿರುವವರಿಗೆ ಅಂಗವಿಕಲರ ಹಕ್ಕುಗಳ ಕಾಯಿದೆ ಸೆಕ್ಷನ್‌ 58ರ ಅಡಿ ಅಂಗವಿಕಲತೆ ಪ್ರಮಾಣಪತ್ರ ನೀಡುವುದು ಶಾಸನಬದ್ಧ. ಹಲವರು ನಿರ್ಗತಿಕರಾಗಿದ್ದು, ಸರ್ಕಾರದ ಕಲ್ಯಾಣ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ” ಎಂದ ವಕೀಲರು.
Chief Justice Vibhu Bhakhru & Justice CM Poonacha
Chief Justice Vibhu Bhakhru & Justice CM Poonacha
Published on

ಬೆಂಗಳೂರಿನ ದೊಡ್ಡಗುಬ್ಡಿ ಗ್ರಾಮದಲ್ಲಿರುವ ‘ನ್ಯೂ ಆರ್ಕ್‌ ಮಿಷನ್‌ ಆಫ್‌ ಇಂಡಿಯಾ’ ಸಂಸ್ಥೆಯಲ್ಲಿರುವ ಸುಮಾರು 900 ಮನೋಸಾಮಾಜಿಕ (ಸೈಕೋಸೋಸಿಯಲ್‌) ಮಹಿಳೆಯರು, ಅಂಗವಿಕಲರಿಗೆ ಗುರುತಿನ ಚೀಟಿ ಹಾಗೂ ವಿಶಿಷ್ಟ ಅಂಗವೈಕಲ್ಯತೆಯ ಗುರುತಿನ ಚೀಟಿ ವಿತರಿಸುವ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

ಸುಪ್ರೀಂ ಕೋರ್ಟ್‌ ವಕೀಲರಾದ ಉತ್ತರ ಪ್ರದೇಶದ ಚಂದ್ರಿಕಾ ಉಪಾಧ್ಯಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲರು “ನಿರ್ದಿಷ್ಟವಾಗಿ ಮನೋರೋಗ ಸಂಸ್ಥೆಗಳಲ್ಲಿರುವವರಿಗೆ ಅಂಗವಿಕಲರ ಹಕ್ಕುಗಳ ಕಾಯಿದೆ ಸೆಕ್ಷನ್‌ 58ರ ಅಡಿ ಅಂಗವಿಕಲತೆ ಪ್ರಮಾಣಪತ್ರ ನೀಡುವುದು ಶಾಸನಬದ್ಧವಾಗಿ ಕಡ್ಡಾಯ. ಹಲವರು ನಿರ್ಗತಿಕರಾಗಿದ್ದು, ಸರ್ಕಾರ ಕಲ್ಯಾಣ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ” ಎಂದರು.

ಆಗ ಪೀಠವು “ಇಂಥದ್ದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಬಾಖಿ ಇದೆ. ಇದರಲ್ಲಿ ವಸ್ತುಸ್ಥಿತಿ ವರದಿ ಕೇಳಲಾಗಿದೆ” ಎಂದಿತು.

ಅಂತಿಮವಾಗಿ ಕೇಂದ್ರ, ರಾಜ್ಯ ಸರ್ಕಾರ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಮತ್ತು ಬೆಂಗಳೂರಿನ ನ್ಯೂ ಆರ್ಕ್‌ ಮಿಷನ್‌ಗೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಆಗಸ್ಟ್‌ 11ಕ್ಕೆ ಮುಂದೂಡಿತು.

ಅಂಗವಿಕಲರ ಅಧಿನಿಯಯಮ-2017 ಸೆಕ್ಷನ್‌ 17ರ ಪ್ರಕಾರ ಅಂಗವೈಕಲ್ಯ ಪ್ರಮಾಣಪತ್ರ ವಿತರಿಸಲು ಕಡ್ಡಾಯವಾಗಿ ಗುರುತಿನ ಮತ್ತು ನಿವಾಸ ದೃಢೀಕರಣ ಪತ್ರ ಒದಗಿಸಬೇಕು. ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಹಲವು ಸಂಸ್ಥೆಗಳಲ್ಲಿರುವ ಅಂಗವಿಕಲರಿಗೆ ಆಧಾರ್‌ ಕಾರ್ಡ್‌ ಇಲ್ಲದ ಕಾರಣ ಅಂಗವೈಕಲ್ಯ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ವಿತರಣೆಯಾಗದಿರುವುದನ್ನು ಸುಪ್ರೀಂ ಕೋರ್ಟ್‌ ಗಮನಿಸಿತ್ತು. ಅಲ್ಲದೆ, ಈ ಸಮಸ್ಯೆ ಪರಿಹರಿಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳಿಗೆ 2021ರಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅಲ್ಲದೆ, ನ್ಯಾಯಾಲಯ ಆದೇಶದ ಹೊರತಾಗಿಯೂ ಕರ್ನಾಟಕದಲ್ಲಿ ಪರಿಸ್ಥಿತಿ ಬದಲಾಗಿಲ್ಲ. ಬೆಂಗಳೂರಿನ ದೊಡ್ಡಗುಬ್ಬಿ ಗ್ರಾಮದ ನ್ಯೂ ಆರ್ಕ್‌ ಮಿಷನ್‌ ಆಫ್‌ ಇಂಡಿಯಾ ಸಂಸ್ಥೆಯಲ್ಲಿ ಮನೋಸಾಮಾಜಿಕ (ಸೈಕೋಸೋಸಿಯಲ್‌) ಮತ್ತು ಅಂಗವೈಕ್ಯಲತೆ ಎದುರಿಸುತ್ತಿರುವ 900ಕ್ಕೂ ಅಧಿಕ ಮಹಿಳೆಯರು ಮತ್ತು ವ್ಯಕ್ತಿಗಳಿದ್ದಾರೆ. ಅವರ ಪೈಕಿ ಅನೇಕರಿಗೆ ಅಂಗೈಕಲ್ಯತೆಯ ಪ್ರಮಾಣ ಪತ್ರ ಮತ್ತು ಮೂಲ ಗುರುತಿನ ಚೀಟಿಗಳೇ ಇಲ್ಲ. ಈ ಕುರಿತು ಸರ್ಕಾರದ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ, ಕಾಲಮಿತಿಯಲ್ಲಿ ನ್ಯೂ ಆರ್ಕ್‌ ಮಿಷನ್‌ ಆಫ್‌ ಇಂಡಿಯಾ ಸಂಸ್ಥೆಯಲ್ಲಿರುವ ಮಹಿಳೆಯರು, ಅಂಗವಿಕಲರಿಗೆ ಗುರುತಿನ ಚೀಟಿ ಹಾಗೂ ಅಂಗೈಕಲ್ಯತೆಯ ಪ್ರಮಾಣ ಪತ್ರ ವಿತರಿಸಲು ಕೇಂದ್ರ ಹಾಗೂ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com