ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಆಕ್ಷೇಪ: ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನೋಟಿಸ್‌

ಹಾಲಿ ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಶಿಕ್ಷಣ ಸಂಸ್ಥೆಗಳ ಪೂರ್ಣ ವಿಳಾಸ ಇಲ್ಲ. ಇದರಿಂದ ಅರ್ಹ ಮತ್ತು ಬೋಗಸ್ ಮತದಾರರ ಗುರುತಿಸುವಿಕೆ ಕಷ್ಟವಾಗಿದೆ. ಇದು ನಕಲಿ ಮತದಾರರ ಸೇರ್ಪಡೆ ಮತ್ತು ಚುನಾವಣಾ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಲಿದೆ.
ECI
ECI
Published on

ಕರ್ನಾಟಕ ವಿಧಾನ ಪರಿಷತ್‌ಗೆ ನಡೆಯಬೇಕಿರುವ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಶೇ 100ರಷ್ಟು ಅರ್ಹ ಮತದಾರರ ಸೇರ್ಪಡೆ ಮಾಡಲು, ಮತಪಟ್ಟಿ ನೋಂದಣಿ ಅಧಿಕಾರಿಗೆ ನಿರ್ದೇಶನ ನೀಡಬೇಕು ಎಂಬ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎನ್ ಲಕ್ಷ್ಮಣ ಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್ ಕೃಷ್ಣಕುಮಾರ್ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಆದಿನಾರಾಯಣ ಅವರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಕೇಂದ್ರ ಚುನಾವಣಾ ಆಯೋಗ, ಮುಖ್ಯ ಚುನಾವಣಾ ಅಧಿಕಾರಿ ಹಾಗೂ ಮತಪಟ್ಟಿ ನೋಂದಣಿ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಕೇಂದ್ರ ಚುನಾವಣಾ ಆಯೋಗದ ಪರ ಎಸ್‌ ಆರ್‌ ದೊಡವಾಡ ಹಾಜರಿದ್ದರು.

ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಅರ್ಹ ಮತದಾರರ ಹೆಸರನ್ನು ಸೇರ್ಪಡೆ ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಲಾಗಿದೆ. ವಾಸ್ತವದಲ್ಲಿ ಸದ್ಯದ ಮತದಾರರ ಪಟ್ಟಿ ಅಪೂರ್ಣ ಮತದಾರರ ಪಟ್ಟಿಯಾಗಿದೆ. ಇದು ಸಂವಿಧಾನದ 14 ಮತ್ತು 326ರ ಮತದಾನದ ಹಕ್ಕನ್ನು ಪ್ರತಿಪಾದಿಸುವ ವಿಧಿಗಳು ಹಾಗೂ ಜನತಾ ಪ್ರಾತಿನಿಧ್ಯ ಕಾಯಿದೆ–1951ರ ಸೆಕ್ಷನ್‌ 32ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಈಗ ಸಿದ್ಧಪಡಿಸಲಾಗಿರುವ ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಶಿಕ್ಷಣ ಸಂಸ್ಥೆಗಳ ಪೂರ್ಣ ವಿಳಾಸ ಇಲ್ಲ. ಇದರಿಂದ ಅರ್ಹ ಮತ್ತು ಬೋಗಸ್ ಮತದಾರರ ಗುರುತಿಸುವಿಕೆ ಕಷ್ಟವಾಗಿದೆ. ಇದು ನಕಲಿ ಮತದಾರರ ಸೇರ್ಪಡೆ ಮತ್ತು ಚುನಾವಣಾ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಲಿದೆ. ಮತದಾರರ ಪಟ್ಟಿಯಲ್ಲಿ ಯಾರೆಲ್ಲಾ ಶಿಕ್ಷಕರು ಇದ್ದಾರೆ ಎಂಬ ಬಗ್ಗೆಯೇ ಆಯಾ ಶಿಕ್ಷಣ ಸಂಸ್ಥೆಗಳಿಗೆ ಸರಿಯಾದ ಅರಿವಿಲ್ಲ. ಶಿಕ್ಷಕರು ಕೆಲಸ ಮಾಡುವ ಸ್ಥಳ ಮತ್ತು ಅವರ ನಿವಾಸಗಳ ನಿಖರತೆಯನ್ನು ಚುನಾವಣಾ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ ಖಚಿತಪಡಿಸಿಲ್ಲ ಎಂದು ಆಕ್ಷೇಪಿಸಿದ್ದಾರೆ. 

ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ 2026ರಲ್ಲಿ ನಡೆಯಬೇಕಿರುವ ಚುನಾವಣೆಯಲ್ಲಿ; ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಶೇ 100ರಷ್ಟು ಅರ್ಹ ಮತದಾರರ ಸೇರ್ಪಡೆ ಮಾಡುವಂತೆ ನಿರ್ದೇಶಿಸಬೇಕು. ಪ್ರಕಟಿತ ಪಟ್ಟಿಯಲ್ಲಿನ ಕಾಲಂ ನಂ 4ರಲ್ಲಿ ಮತದಾರ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳ ಪೂರ್ಣ ವಿಳಾಸ ನಮೂದಾಗುವಂತೆ ನೋಡಿಕೊಳ್ಳಬೇಕು. ಈ ಸಂಬಂಧ ಹೆಚ್ಚುವರಿ ಪಟ್ಟಿ ಬಿಡುಗಡೆ ಮಾಡಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com