

ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರ ವಿರುದ್ಧ ಕೃತಕ ಬುದ್ದಿಮತ್ತೆ (ಎ ಐ) ಬಳಕೆ ಮಾಡಿ ಮಾನಹಾನಿ ಉಂಟು ಮಾಡುವ ಫೋಟೊ ಮತ್ತು ಕಂಟೆಂಟ್ ಸೃಷ್ಟಿಸಿ ಹಂಚಿಕೆ ಮಾಡುವುದನ್ನು ನಿರ್ಬಂಧಿಸುವಂತೆ ಕೋರಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಗೂಗಲ್, ಮೆಟಾ (ಫೇಸ್‌ಬುಕ್), ವಾಟ್ಸಾಪ್, ಇನ್‌ಸ್ಟಾಗ್ರಾಂಗಳಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ಶೀನಪ್ಪ, ನಂದೀಶ್ ಕುಮಾರ್ ಜೈನ್, ವೀರೇಂದ್ರ ಹೆಗ್ಗಡೆ ಸಹೋದರ ಪುತ್ರ ಡಿ ನಿಶ್ಚಲ್ ಮತ್ತು ಪಿ ಸುನೀಲ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ನಡೆಸಿತು.
ಕೃತಕ ಬುದ್ದಿಮತ್ತೆ ಬಳಕೆ ಮಾಡಿ ಸೃಷ್ಟಿಸಲಾಗುವ ತಿರುಚಿದ ಚಿತ್ರ, ವಿಡಿಯೊದಲ್ಲಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರನ್ನು ತುಚ್ಛವಾಗಿ ಚಿತ್ರಿಸಿ ಪ್ರಸಾರ, ಹಂಚಿಕೆ, ಪ್ರಕಟ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡದಂತೆ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಮತ್ತು ಬೆಂಗಳೂರಿನ ಕೇಂದ್ರ ವಿಭಾಗದ ಸೆನ್ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಸ್ ರಾಜಶೇಖರ್ ಅವರು “2012ರಲ್ಲಿ ವಿದ್ಯಾರ್ಥಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆಯಾದ ಒಂದು ವರ್ಷದ ಬಳಿಕ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ, ಧರ್ಮಸ್ಥಳವನ್ನು ಕೇಂದ್ರೀಕರಿಸಿ ವ್ಯಾಪಕವಾಗಿ ನಿರಂತರವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ” ಎಂದರು.
ಹೆಗ್ಗಡೆ ಅವರ ಸಂಬಂಧಿಗಳಾದ ಧೀರಜ್, ಮಲ್ಲಿಕ್ ಮತ್ತು ಉದಯ್ ಜೈನ್ ಅವರು ಸಿಬಿಐ ತನಿಖೆಯಲ್ಲಿ ಆರೋಪಮುಕ್ತರಾಗಿ ಬಂದಿದ್ದಾರೆ. 2023ರಲ್ಲಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಸಂತೋಷ್ ರಾವ್ ಖುಲಾಸೆಯಾಗಿ ಬರುತ್ತಿದ್ದಂತೆ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ವೀರೇಂದ್ರ ಹೆಗ್ಗಡೆ ಅವರ ಮೇಲೆ ವಿವಿಧ ರೀತಿಯಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು.
ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ, ಹೈಕೋರ್ಟ್ ಹಲವು ಪ್ರತಿಬಂಧಕಾದೇಶಗಳನ್ನು ಮಾಡಿವೆ. ಅದಾಗ್ಯೂ, ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ನಿರಂತರವಾಗಿ ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಆದೇಶ ಮಾಡಬೇಕು ಎಂದು ಕೋರಲಾಗಿದೆ. ಅರ್ಜಿಯ ವಿಚಾರಣೆಯು ಗುರುವಾರ ಮುಂದುವರಿಯಲಿದೆ.