ಶೈಕ್ಷಣಿಕ ಸಾಲ ಮರುಪಾವತಿ ಮುಂದೂಡಿಕೆ ಯೋಜನೆಯ ಲಾಭ ಎಲ್ಲರಿಗೂ ವಿಸ್ತರಿಸಲು ಕೋರಿದ್ದ ಅರ್ಜಿ ಪುರಸ್ಕರಿಸಿದ ಹೈಕೋರ್ಟ್

ಹಣಕಾಸಿನ ಕೊರತೆಯಿಂದ ಯಾವುದೇ ವ್ಯಕ್ತಿ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕೇಂದ್ರ ಸರ್ಕಾರವು 2009ರಲ್ಲಿ ಕೇಂದ್ರ ವಲಯ ಬಡ್ಡಿ ಸಹಾಯಧನ ಯೋಜನೆ (ಸಿಎಸ್‌ಐಸ್) ಜಾರಿಗೆ ತಂದಿತ್ತು.
ಶೈಕ್ಷಣಿಕ ಸಾಲ ಮರುಪಾವತಿ ಮುಂದೂಡಿಕೆ ಯೋಜನೆಯ ಲಾಭ ಎಲ್ಲರಿಗೂ ವಿಸ್ತರಿಸಲು ಕೋರಿದ್ದ ಅರ್ಜಿ ಪುರಸ್ಕರಿಸಿದ ಹೈಕೋರ್ಟ್
Published on

ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಎಲ್ಲ ವರ್ಗಗಳ ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಕ್ಕಾಗಿ ಪಡೆದಿದ್ದ ಸಾಲದ ಹಣ ಮರುಪಾವತಿ ಅವಧಿಯ ಮುಂದೂಡಿಕೆಯನ್ನು (ಮೊರಟೊರಿಯಂ) ವಿಸ್ತರಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮನ್ನಿಸಿರುವ ಕರ್ನಾಟಕ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಇತ್ತೀಚೆಗೆ ನೋಟಿಸ್ ಜಾರಿಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಅಶೋಕ್ ಎಸ್ ಕಿಣಗಿ ನೇತೃತ್ವದ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿ ಆದೇಶ ಹೊರಡಿಸಿದ್ದು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ನಿಗದಿಪಡಿಸಿದೆ.

ಮಾರ್ಚ್ 1, 2020ರ ವರೆಗಿನ ಎಲ್ಲಾ ಶೈಕ್ಷಣಿಕ ಸಾಲ ಮನ್ನಾ ಅಥವಾ ಎರಡು ವರ್ಷಗಳ ಕಾಲ ಸಾಲದ ಬಡ್ಡಿ ಮನ್ನಾ ಮಾಡುವ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಕೋವಿಡ್ ಸಾಂಕ್ರಾಮಿಕತೆಯು ದೇಶದ ಆರ್ಥಿಕತೆಯನ್ನು ಸಂಪೂರ್ಣವಾಗಿ ನೆಲಕಚ್ಚುವಂತೆ ಮಾಡಿದ್ದು, ವಿದ್ಯಾರ್ಥಿ ಸಮುದಾಯಕ್ಕೂ ಭಾರಿ ಹೊಡೆತ ಬಿದ್ದಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಹಣಕಾಸಿನ ಕೊರತೆಯಿಂದ ಯಾವುದೇ ವ್ಯಕ್ತಿ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕೇಂದ್ರ ಸರ್ಕಾರವು 2009ರಲ್ಲಿ ಕೇಂದ್ರ ವಲಯ ಬಡ್ಡಿ ಸಹಾಯಧನ ಯೋಜನೆ (ಸಿಎಸ್‌ಐಎಸ್) ಜಾರಿಗೆ ತಂದಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮೂರನೇ ವ್ಯಕ್ತಿಯ ಭದ್ರತೆ ಅಥವಾ ಬೇರಾವುದೇ ಭದ್ರತೆ ಬಯಸದೇ ಪಡೆದ ಆಧುನಿಕ ಶಿಕ್ಷಣ ಸಾಲಕ್ಕೆ ಮರುಪಾವತಿ ಮುಂದೂಡಿಕೆ ಅವಧಿಯಲ್ಲಿ ಸಿಎಸ್‌ಐಎಸ್‌ ಸಂಪೂರ್ಣ ಬಡ್ಡಿ ಸಹಾಯಧನ ನೀಡುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ್ದರೆ ಮರುಪಾವತಿ ಮುಂದೂಡಿಕೆ ಅವಧಿಯಲ್ಲಿ ಬಡ್ಡಿ ಪಾವತಿಯನ್ನು ಅಂದರೆ ಕೋರ್ಸ್‌ನ ಅವಧಿ ಮತ್ತು ಹೆಚ್ಚುವರಿ ಒಂದು ವರ್ಷದ ಅವಧಿಯ ಬಡ್ಡಿಯನ್ನು ಸರ್ಕಾರವೇ ಪಾವತಿಸುವ ಅವಕಾಶವನ್ನು ಯೋಜನೆಯಡಿ ಮಾಡಿಕೊಡಲಾಗಿದೆ. ಸದ್ಯ, ವಾರ್ಷಿಕವಾಗಿ ರೂಪಾಯಿ 4.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಯೋಜನೆ ಲಾಭ ದೊರಕುತ್ತಿದೆ.

ಕೋವಿಡ್ ಸಾಂಕ್ರಾಮಿಕತೆ ಹಿನ್ನೆಲೆಯಲ್ಲಿ ಸಿಎಸ್‌ಐಎಸ್ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಾಲ ಮರುಪಾವತಿ ಮುಂದೂಡಿಕೆಗೆ ಅವಕಾಶ ಕಲ್ಪಿಸಿರುವ ಯೋಜನೆಯನ್ನು ಯಾವುದೇ ತಾರತಮ್ಯ ಅನುಸರಿಸದೇ ಕರ್ನಾಟಕದ ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು. ಈ ಸಂಬಂಧ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Kannada Bar & Bench
kannada.barandbench.com