ಹೋಮ್‌ಸ್ಟೇ ಮಾಲೀಕನಿಗೆ ₹5 ಲಕ್ಷ ಪರಿಹಾರ ಪಾವತಿಸಲು ವಿಫಲ: ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

ಜುಲೈ 15ರಂದು ಪೊನ್ನಪ್ಪ ಬಂಧನವನ್ನು ಅಕ್ರಮ ಎಂದು ಸಾರಿದ್ದ ಹೈಕೋರ್ಟ್‌, ನಾಲ್ಕು ವಾರಗಳಲ್ಲಿ ಪರಿಹಾರ ಪಾವತಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು.
High Court of Karnataka
High Court of Karnataka
Published on

ಅಮೆರಿಕಾದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿತ್ತು ಎನ್ನಲಾದ ಹೋಮ್‌ಸ್ಟೇ ಮಾಲೀಕರಾಗಿದ್ದ ಪಾಲೇಕಂಡ ಪೊನ್ನಪ್ಪ ಅಲಿಯಾಸ್‌ ವಿಶಾಲ್‌ ಅವರನ್ನು ಅಕ್ರಮವಾಗಿ ಬಂಧಿಸಿರುವುದರಿಂದ ಅವರಿಗೆ ₹5 ಲಕ್ಷ ಪರಿಹಾರ ವಿತರಿಸುವಂತೆ ನಿರ್ದೇಶಿಸಿ ಕರ್ನಾಟಕ ಹೈಕೋರ್ಟ್‌ನ ಸಮನ್ವಯ ಪೀಠ ಮಾಡಿರುವ ಆದೇಶ ಪಾಲಿಸದಿರುವುದನ್ನು ಪ್ರಶ್ನಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ನೋಟಿಸ್‌ ಜಾರಿಗೊಳಿಸಿದೆ.

ಹೈಕೋರ್ಟ್‌ ನಿರ್ದೇಶನದಂತೆ ಒಂದು ತಿಂಗಳಲ್ಲಿ ರಾಜ್ಯ ಸರ್ಕಾರವು ₹5 ಲಕ್ಷ ಪರಿಹಾರ ಪಾವತಿಸಲಿಲ್ಲ ಎಂದು ಪೊನ್ನಪ್ಪ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಯಂತ್‌ ಬ್ಯಾನರ್ಜಿ ಮತ್ತು ಕೆ ಬಿ ಗೀತಾ ಅವರ ವಿಭಾಗೀಯ ಪೀಠ ನಡೆಸಿತು.

Justice Jayant Banerji and Justice K B Geetha
Justice Jayant Banerji and Justice K B Geetha

ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಿರುವ ಪೀಠವು ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶಿಸಿದೆ.

ಪೊನ್ನಪ್ಪ ಅವರನ್ನು ಪ್ರತಿನಿಧಿಸಿದ್ದ ವಕೀಲ ಅನಗದ್‌ ಕಾಮತ್‌ ಅವರು “ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನ ಸಮನ್ವಯ ಪೀಠದ ಪ್ರಮಾಣೀಕೃತ ಆದೇಶವು ಜುಲೈ 15ರಂದು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರ ಮೂಲಕ ತಲುಪಿದೆ. ಪರಿಹಾರ ಪಾವತಿಸಲು ವಿಧಿಸಿದ್ದ ಗಡುವು ಆಗಸ್ಟ್‌ 12ಕ್ಕೆ ಮುಕ್ತಾಯವಾಗಿದೆ. ಹೈಕೋರ್ಟ್‌ ಆದೇಶವನ್ನು ಪಾಲಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಜುಲೈ 27ರಂದು ನೋಟಿಸ್‌ ನೀಡಲಾಗಿದೆ. ಆದಾಗ್ಯೂ, ಪರಿಹಾರ ಪಾವತಿಸಿಲ್ಲ ಮತ್ತು ಅದರ ಸಂಬಂಧ ವಿವರಣೆಯನ್ನೂ ನೀಡಲಾಗಿಲ್ಲ” ಎಂದರು.

Also Read
ಅತ್ಯಾಚಾರ ವರದಿ ಮಾಡದ ಆರೋಪ: ಅಕ್ರಮವಾಗಿ ಬಂಧಿಸಲ್ಪಟ್ಟ ಹೋಮ್‌ಸ್ಟೇ ಮಾಲೀಕನಿಗೆ ₹5 ಲಕ್ಷ ಪರಿಹಾರಕ್ಕೆ ಆದೇಶ

ತನ್ನ ಹೋಮ್‌ಸ್ಟೇನಲ್ಲಿ ನೆಲೆಸಿದ್ದ ಅಮೆರಿಕಾದ ಮಹಿಳೆಯ ಅತ್ಯಾಚಾರ ಪ್ರಕರಣವನ್ನು ವರದಿ ಮಾಡಿಲ್ಲ ಎಂದು ಪೊನ್ನಪ್ಪ ಅವರನ್ನು ಏಪ್ರಿಲ್‌ 19ರಂದು ಬಂಧಿಸಲಾಗಿತ್ತು. ಜುಲೈನಲ್ಲಿ ಪೊನ್ನಪ್ಪ ಬಂಧನ ಅಕ್ರಮ ಎಂದಿದ್ದ ಹೈಕೋರ್ಟ್‌ನ ಸಮನ್ವಯ ಪೀಠವು ಹೋಮ್‌ಸ್ಟೇ ಮಾಲೀಕನ ಮೂಲಭೂತ ಹಕ್ಕು ಉಲ್ಲಂಘಿಸಿದ್ದಕ್ಕಾಗಿ ₹5 ಲಕ್ಷ ಪರಿಹಾರ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆನಂತರ ಪೊನ್ನಪ್ಪ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನೂ ರದ್ದುಪಡಿಸಿತ್ತು. 

Kannada Bar & Bench
kannada.barandbench.com