ಕೋವಿಡ್‌ 3ನೇ ಅಲೆ: ಹೈಕೋರ್ಟ್‌ನಿಂದ ಪರಿಷ್ಕೃತ ಎಸ್‌ಒಪಿ ಪ್ರಕಟ; ಜ.14ರ ವರೆಗೆ ಪ್ರಧಾನ ಪೀಠದಲ್ಲಿ ವರ್ಚುವಲ್‌ ವಿಚಾರಣೆ

ಒಮಿಕ್ರಾನ್‌ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಪಾರ್ಟಿ ಇನ್‌ ಪರ್ಸನ್‌ಗಳು ಆನ್‌ಲೈನ್‌ ಮೂಲಕ ಮಾತ್ರ ವಿಚಾರಣೆಗೆ ಹಾಜರಾಗಬೇಕು. ಭೌತಿಕ ವಿಚಾರಣೆಯನ್ನು ನಿರ್ಬಂಧಿಸಲಾಗಿದೆ.
Karnataka High Court and Covid
Karnataka High Court and Covid

ಕೋವಿಡ್‌ ಮೂರನೇ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣೆ ಪ್ರಕ್ರಿಯೆಯ (ಎಸ್‌ಒಪಿ) ಮಾರ್ಗಸೂಚಿ ಹೊರಡಿಸಿದ್ದು, ಬೆಂಗಳೂರಿನ ಪ್ರಧಾನ ಪೀಠದಲ್ಲಿ ವರ್ಚುವಲ್‌ ವಿಚಾರಣೆ ಮಾತ್ರ ನಡೆಯಲಿದೆ. ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ಹೈಬ್ರಿಡ್‌ ವಿಚಾರಣೆ ಅವಕಾಶ ಮಾಡಿಕೊಡಲಾಗಿದೆ. ಇದೇ 5ರಿಂದ ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬರಲಿದ್ದು, ಜನವರಿ 14ರವರೆಗೆ ಜಾರಿಯಲ್ಲಿರಲಿದೆ.

ಒಮಿಕ್ರಾನ್‌ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಪಾರ್ಟಿ ಇನ್‌ ಪರ್ಸನ್‌ಗಳು (ತಾವೇ ಪಕ್ಷಕಾರರು ಹಾಗೂ ವಕೀಲರು ಆಗಿರುವವರು) ಆನ್‌ಲೈನ್‌ ಮೂಲಕ ಮಾತ್ರ ವಿಚಾರಣೆಗೆ ಹಾಜರಾಗಬೇಕು. ಭೌತಿಕ ವಿಚಾರಣೆಯನ್ನು ನಿರ್ಬಂಧಿಸಲಾಗಿದೆ.

“ನ್ಯಾಯಾಲಯದಿಂದ ನಿರ್ದಿಷ್ಟ ಆದೇಶ ಇಲ್ಲದ ಹೊರತು ಪಾರ್ಟಿ ಇನ್‌ ಪರ್ಸನ್ಸ್‌ ಮತ್ತು ದಾವೆದಾರರು ನ್ಯಾಯಾಲಯಕ್ಕೆ ಬರುವಂತಿಲ್ಲ. ನ್ಯಾಯಾಲಯದ ನಿರ್ದಿಷ್ಟ ಆದೇಶವನ್ನು ತೋರಿಸದಿದ್ದರೆ ಮುಂಬಾಗಿಲಿನಲ್ಲಿ ಭದ್ರತಾ ಸಿಬ್ಬಂದಿ ಅನುಮತಿಸುವುದಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿದೆ.

ನ್ಯಾಯಾಲಯದ ವ್ಯಾಪ್ತಿಗೆ ಪ್ರವೇಶಿಸುವ ಎಲ್ಲರೂ ಎರಡು ಮಾಸ್ಕ್‌ಗಳನ್ನು ಧರಿಸಬೇಕಿದ್ದು, ಅದರಲ್ಲಿ ಒಂದು ಎನ್‌ 95 ಮಾಸ್ಕ್‌ ಆಗಿರಬೇಕು. ನ್ಯಾಯಾಲಯದ ಸಿಬ್ಬಂದಿಯು ಯಾವಾಗಲೂ ಗ್ಲೌಸ್‌ ಧರಿಸಬೇಕು. ಸ್ಯಾನಿಟೈಸರ್‌ ಬಳಸುವುದು ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಸ್ವ್ಯಾಬ್‌ ಪರೀಕ್ಷೆಗೆ ಮಾದರಿ ನೀಡಿರುವವರು ಸೋಂಕು ಹರಡಲು ಕಾರಣವಾಗಬಹುದು. ಹೀಗಾಗಿ ಮಾದರಿ ಪರೀಕ್ಷೆ ಬರುವವರೆಗೆ ಅಂಥವರು ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕವಾಗಿ ಉಳಿಯಬೇಕು ಎಂದು ಸಲಹೆ ನೀಡಲಾಗಿದೆ.

ಎಲ್ಲಾ ಪೀಠಗಳಲ್ಲೂ ಕ್ಯಾಂಟೀನ್‌ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿದೆ. ನ್ಯಾಯಾಲಯದ ವ್ಯಾಪ್ತಿಯಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ವಕೀಲರ ಸಂಘಕ್ಕೆ ವಕೀಲರು ತೆರಳಬಾರದು ಎಂದು ಹೇಳಲಾಗಿದೆ. ಬೆಂಗಳೂರಿನ ಪ್ರಧಾನ ಪೀಠದಲ್ಲಿ ಸರ್ಕಾರಿ ವಕೀಲರು ವರ್ಚುವಲ್‌ ವ್ಯವಸ್ಥೆಯ ಮೂಲಕ ವಿಚಾರಣೆಗೆ ಹಾಜರಾಗ ತಕ್ಕದ್ದು ಎಂದು ಹೇಳಲಾಗಿದೆ. ಅಗತ್ಯ ಬಿದ್ದಲ್ಲಿ ಭೌತಿಕವಾಗಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಇ-ಫೈಲಿಂಗ್‌ ಮತ್ತು ಭೌತಿಕವಾಗಿ ಪ್ರಕರಣ ದಾಖಲಿಸಲು ಅನುಮತಿಸಲಾಗಿದೆ.

Attachment
PDF
HC new SOP from 512022.pdf
Preview

Related Stories

No stories found.
Kannada Bar & Bench
kannada.barandbench.com