B R Shetty and Karnataka HC
B R Shetty and Karnataka HC

ಉದ್ಯಮಿ ಬಿ ಆರ್‌ ಶೆಟ್ಟಿ ವಿದೇಶ ಪ್ರಯಾಣಕ್ಕೆ ಅನುಮತಿಸಿದ ಹೈಕೋರ್ಟ್‌; ಎಲ್‌ಒಸಿ ಅಮಾನತಿನಲ್ಲಿರಿಸಿದ ನ್ಯಾಯಾಲಯ

ಅರ್ಜಿದಾರರು ತಮ್ಮ ಒಡೆತನದ ಜಗತ್ತಿನ ಬೇರೆ ಭಾಗದಲ್ಲಿರುವ ಆಸ್ತಿಗಳನ್ನು ಮಾರಾಟ ಮಾಡುವುದಿಲ್ಲ ಎಂದು ಅಫಿಡವಿಟ್‌ ಸಲ್ಲಿಸಬೇಕು. ಕಾನೂನು ಪ್ರಕ್ರಿಯೆಗಳಿಗೆ ಅಗತ್ಯವಿದ್ದಲ್ಲಿ ಭಾರತಕ್ಕೆ ಮರಳಬೇಕು ಎಂದು ಹೇಳಿರುವ ನ್ಯಾಯಾಲಯ.

ಉಡುಪಿ ಮೂಲದ ದುಬೈ ನಿವಾಸಿ ಉದ್ಯಮಿ ಹಾಗೂ ಎನ್‌ಎಂಸಿ ಹೆಲ್ತ್‌ ಸಂಸ್ಥಾಪಕ ಬಿ ಆರ್ ಶೆಟ್ಟಿ ಅವರ ವಿರುದ್ಧ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್‌ ಆಫ್‌ ಬರೋಡಾ ಮನವಿಯ ಮೇರೆಗೆ ವಲಸೆ ಅಧಿಕಾರಿಗಳು ಹೊರಡಿಸಿದ್ದ ಲುಕ್ ಔಟ್ ಸತ್ತೋಲೆಯನ್ನು (ಎಲ್‌ಒಸಿ) ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅಮಾನತ್ತಿನಲ್ಲಿಟ್ಟಿದ್ದು, ಚಿಕಿತ್ಸೆ ಪಡೆಯಲು ಅಬುದಾಬಿಗೆ ಪ್ರಯಾಣ ಬೆಳೆಸುವುದಕ್ಕೆ ಶೆಟ್ಟಿ ಅವರಿಗೆ ಷರತ್ತಿನ ಅನುಮತಿ ನೀಡಿದೆ.

ತಮ್ಮ ವಿರುದ್ಧ ವಲಸೆ ಅಧಿಕಾರಿಗಳು ಹೊರಡಿಸಿದ್ದ ಲುಕ್ ಔಟ್ ಸುತ್ತೋಲೆಯನ್ನು ಪ್ರಶ್ನಿಸಿ ಬಿ ಆರ್ ಶೆಟ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಪೀಠವು ಪ್ರಕಟಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಅರ್ಜಿದಾರರು ತಮ್ಮ ಒಡೆತನದಲ್ಲಿ ಜಗತ್ತಿನ ಬೇರೆ ಭಾಗದಲ್ಲಿರುವ ಆಸ್ತಿಗಳನ್ನು ಮಾರಾಟ ಮಾಡುವುದಿಲ್ಲ ಎಂದು ಅಫಿಡವಿಟ್‌ ಸಲ್ಲಿಸಬೇಕು. ಕಾನೂನು ಪ್ರಕ್ರಿಯೆಗಳಿಗೆ ಅಗತ್ಯವಿದ್ದಲ್ಲಿ ಭಾರತಕ್ಕೆ ಮರಳಬೇಕು. ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ವಿದೇಶಕ್ಕೆ ತೆರಳುವುದಿಲ್ಲ ಎಂದು ಎಂದು ಅಫಿಡವಿಟ್‌ ಸಲ್ಲಿಸಬೇಕು ಎಂದು ಷರತ್ತು ವಿಧಿಸಿದೆ. ಜೊತೆಗೆ ಒಂದು ಕೋಟಿ ರೂಪಾಯಿ ಮೊತ್ತದ ಭದ್ರತೆ ಒದಗಿಸಬೇಕು ಎಂದು ಪೀಠ ಆದೇಶದಲ್ಲಿ ಹೇಳಿದೆ.

ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಬ್ರಿಟನ್ ನ್ಯಾಯಾಲಯಗಳ ತೀರ್ಪುಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಪೀಠ ಹೇಳಿದೆ. ಪ್ರತಿವಾದಿಗಳು (ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ) ಈಗಾಗಲೇ ಹಣ ಮರುಪಾವತಿಗೆ ಸಂಬಂಧಿಸಿದಂತೆ ಸಾಲಮರುಪಾವತಿ ನ್ಯಾಯಾಧಿಕರಣದಿಂದ (ಡಿಆರ್‌ಟಿ) ಡಿಕ್ರಿ ಅಥವಾ ಆದೇಶ ಪಡೆದಿದ್ದಾರೆ. ಆ ಆದೇಶ ಜಾರಿಗೊಳಿಸುವ ಕಾರ್ಯ ಮಾಡುತ್ತಿವೆ. ಅದಕ್ಕೆ ಸುತ್ತೋಲೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ ಎಂದು ಪೀಠ ಹೇಳಿದೆ.

ಅರ್ಜಿದಾರರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಅರ್ಜಿದಾರರು ಭಾರತೀಯ ಪ್ರಜೆಯಾಗಿದ್ದು, ವಿದೇಶ ಪ್ರಯಾಣಕ್ಕೆ ಅರ್ಹರಾಗಿದ್ದಾರೆ. ಅವರಿಗೆ 80 ವರ್ಷವಾಗಿದ್ದು, ಪತ್ನಿ ಮತ್ತು ಮಕ್ಕಳ ನೆರವು ಅಗತ್ಯವಿದೆ. ಆದ್ದರಿಂದ, ಅವರಿಗೆ ಯುಎಇಗೆ ಪ್ರಯಾಣ ಬೆಳೆಸಲು ಅನುಮತಿಸಬೇಕು ಎಂದು ಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಉದ್ಯಮಿ ಬಿ ಆರ್ ಶೆಟ್ಟಿ ಹಲವು ಫಾರ್ಮಸುಟಿಕಲ್ಸ್, ಶುಶ್ರೂಷೆ, ಆರೋಗ್ಯ ರಕ್ಷಣೆ ಮತ್ತು ವಿದೇಶಿ ವಿನಿಯಮ ವಹಿವಾಟು ನಡೆಸುತ್ತಿದ್ದರು. 2015 ಮತ್ತು 2017ರ ನಡುವಿನ ಅವಧಿಯಲ್ಲಿ ವ್ಯವಹಾರದ ನಿರ್ವಹಣೆಯನ್ನು ಅಧಿಕಾರಿಗಳಿಗೆ ಹಸ್ತಾಂತರ ಮಾಡಿ ಮುಖ್ಯಸ್ಥನ ಹುದ್ದೆಯನ್ನು ತ್ಯಜಿಸಿದ್ದರು. ಅವರ ಒಡೆತನದ ಕಂಪೆನಿ ಹಲವು ಬ್ಯಾಂಕ್ ಗಳಿಂದ 2,800 ಕೋಟಿ ರೂಪಾಯಿ ಸಾಲ ಪಡೆದಿತ್ತು. ಆ ಹಣ ಮರು ಪಾವತಿ ಮಾಡದ ಕಾರಣಕ್ಕೆ ಬ್ಯಾಂಕ್ ಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಈ ಹಿನ್ನೆಲೆಯಲ್ಲಿ ವಲಸೆ ಅಧಿಕಾರಿಗಳು ಅವರ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಿ, ವಿದೇಶ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com