

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪ್ರಮುಖ ಆರೋಪಿ ಬಸವರಾಜ ಕನ್ನಾಳೆಗೆ ತಮ್ಮ ಪುತ್ರಿಯ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಕ್ಟೋಬರ್ 15ರಿಂದ 20ರವರೆಗೆ ಅನುಮತಿ ನೀಡಿ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ಬಸವರಾಜ ಕನ್ನಾಳೆ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ನಡೆಸಿತು.
ಪುತ್ರಿಯ ನಾಮಕರಣ ಸೇರಿದಂತೆ ಇತರೆ ಧಾರ್ಮಿಕ ವಿಧಿ ವಿಧಾನದಲ್ಲಿ ಕನ್ನಾಳೆ ಭಾಗವಹಿಸಬಹುದು. ಅವರು ಪೋಲೀಸರ ಎಸ್ಕಾರ್ಟ್‌ನಲ್ಲಿ ಅಕ್ಟೋಬರ್ 15ರಂದು ಜೈಲಿನಿಂದ ತೆರಳಿ ಅಕ್ಟೋಬರ್ 20ರಂದು ವಾಪಸ್ ಆಗಬೇಕು. ಕನ್ನಾಳೆ ಆಸ್ಪತ್ರೆ ವಾರ್ಡ್ ಹಾಗೂ ಮನೆಯೊಳಗೆ ಹೋದ ಸಂದರ್ಭದಲ್ಲಿ ಪೊಲೀಸರು ಒಳಗಡೆ ಹೋಗದೆ ಹೊರಗಡೆ ಕಾಯಬೇಕು. ಅವಧಿ ಮುಗದಿ ನಂತರ ಅವರನ್ನು ಪೊಲೀಸರೇ ವಾಪಸ್ ಜೈಲಿಗೆ ಕರೆತರಬೇಕು.ಈ ಅವಧಿಯಲ್ಲಿ ಕನ್ನಾಳೆ ಮೊಬೈಲ್ ಬಳಸುವಂತಿಲ್ಲ ಎಂದು ನಿರ್ದೇಶಿಸಿದ ಪೀಠ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಕನ್ನಾಳೆ ಪರ ಹಿರಿಯ ವಕೀಲ ಎಂ ಅರುಣ ಶ್ಯಾಮ್ ವಾದ ಮಂಡಿಸಿ, ಕನ್ನಾಳೆ ಪತ್ನಿಯು ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 12ನೇ ದಿನ ಮಗುವಿಗೆ ನಾಮಕರಣ ಕಾರ್ಯಕ್ರಮವಿದೆ. ಮಾನವೀಯತೆಯ ಮೇಲೆ ಬೀದರ್‌ಗೆ ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬರಲು ಅರ್ಜಿದಾರರಿಗೆ ಒಂದು ವಾರ ಜಾಮೀನು ನೀಡಬೇಕು ನೀಡಬೇಕು ಎಂದು ಕೋರಿದರು.
ಅದಕ್ಕೆ ಆಕ್ಷೇಪಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್, ಹಲವು ಅಭ್ಯರ್ಥಿಗಳಿಂದ ಕನ್ನಾಳೆ ಹಣ ಸಂಗ್ರಹಿಸಿದ್ದಾನೆ. ಸಹಕಾರಿ ಬ್ಯಾಂಕ್‌ಗಳ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಲಾಗಿದೆ. ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಗಂಗ್ವಾರ್ ಭಾವಿ ಪತ್ನಿಗೆ ಕನ್ನಾಳೆಯು ಲಂಚದ ಹಣದಲ್ಲಿ ಆಭರಣ ಖರೀದಿಸಿದ್ದಾನೆ. ಪ್ರಕರಣ ಬಹಳ ಗಂಭೀರವಾಗಿದ್ದು, ಕನ್ನಾಳೆ ಒಬ್ಬರೇ ಹೋಗಲು ಅನುಮತಿ ನೀಡಬಾರದು.
ಸಿಐಡಿ ಪೊಲೀಸರೇ ಎಸ್ಕಾರ್ಟ್‌ನಲ್ಲಿ ಕನ್ನಾಳೆಯನ್ನು ಬೀದರ್‌ಗೆ ಕರೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದರು.
ಹಿರಿಯ ವಕೀಲ ಅರುಣ ಶ್ಯಾಮ್ ಅವರು, ಮಗುವಿಗೆ ನಾಮಕಾರಣ ಮಾಡಬೇಕಿದೆ. ಒಂದು ವಾರ ಜಾಮೀನು ನೀಡಬೇಕು. ಆತನ ಮೇಲೆ ಸರ್ಕಾರ ಬೇಕಿದ್ದರೆ ನಿಗಾ ಇಡಲಿ. ಪೊಲೀಸರು ಕರೆದೊಯ್ಯುವುದು ಬೇಡ ಎಂದು ಮನವಿ ಮಾಡಿದರು.
ಆಗ ಪ್ರತಿಕ್ರಿಯಿಸಿದ ಪೀಠವು ತನಿಖಾ ಸಂಸ್ಥೆಯಾದ ಸಿಐಡಿಯು ಅರ್ಜಿದಾರರ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಆತ ನಾಪತ್ತೆಯಾಗಬಹುದು ಎಂದು ಹೇಳುತ್ತಿದೆ. ಸರ್ಕಾರದ ವೆಚ್ಚದಲ್ಲಿ ಪೊಲೀಸರೇ ಆತನನ್ನು ಊರಿಗೆ ಕರೆದೊಯ್ದು ವಾಪಸ್ ಕರೆ ತರುತ್ತಾರೆ. ಹೋಗುವುದಕ್ಕೆ ಸಮಸ್ಯೆ ಏನು? ಎಂದು ಕನ್ನಾಳೆ ಪರ ವಕೀಲರನ್ನು ಪ್ರಶ್ನಿಸಿತು. ನಂತರ ಕನ್ನಾಳೆ ಅವರು ಅಕ್ಟೋಬರ್ 15ರಿಂದ 20ರವರೆಗೆ ಪೊಲೀಸರು ಎಸ್ಕಾರ್ಟ್‌ನಲ್ಲಿ ಬೀದರ್‌ಗೆ ಹೋಗಲು ಅನುಮತಿಸಿ ಮಧ್ಯಂತರ ಆದೇಶ ಮಾಡಿತು.