ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿಸಿದ ಹೈಕೋರ್ಟ್‌: ಏಕಸದಸ್ಯ ಪೀಠದ ಆದೇಶ ರದ್ದು, ರಾಜ್ಯ ಸರ್ಕಾರಕ್ಕೆ ಹಿನ್ನಡೆ

ಸಕ್ಷಮ ಪ್ರಾಧಿಕಾರವು ಪ್ರಸ್ತುತ ನಿಯಮಾವಳಿಗಳನ್ನು ಪರಿಶೀಲಿಸಬಹುದಾದರೂ, ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನ ಅಥವಾ ಕಾಂಟ್ರಾಕ್ಟ್ ಕ್ಯಾರೇಜ್ ಆಗಿ ಬಳಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಅನುಮತಿ ನಿರಾಕರಿಸುವಂತಿಲ್ಲ ಎಂದಿರುವ ಹೈಕೋರ್ಟ್‌.
ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿಸಿದ ಹೈಕೋರ್ಟ್‌: ಏಕಸದಸ್ಯ ಪೀಠದ ಆದೇಶ ರದ್ದು, ರಾಜ್ಯ ಸರ್ಕಾರಕ್ಕೆ ಹಿನ್ನಡೆ
Published on

ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿಗಳ ಕಾರ್ಯಾಚರಣೆ ನಿಷೇಧಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶವನ್ನು ಶುಕ್ರವಾರ ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಬೈಕ್‌ಗಳನ್ನು ಸಾರಿಗೆ ವಾಹನಗಳಾಗಿ (ಟ್ಯಾಕ್ಸಿ) ಬಳಸಲು ಅಗತ್ಯ ಷರತ್ತುಗಳನ್ನು ವಿಧಿಸಿ ಸರ್ಕಾರ ಅನುಮತಿ ನೀಡಬಹುದು ಎಂದು ಆದೇಶಿಸಿದೆ.

ಮೋಟಾರು ವಾಹನಗಳ ಕಾಯಿದೆ 1988ರ ಅನ್ವಯ ಮಾರ್ಗಸೂಚಿ ಮತ್ತು ನಿಯಮಗಳನ್ನು ರೂಪಿಸುವವರೆಗೆ ಬೈಕ್ ಟ್ಯಾಕ್ಸಿಗಳು ಕಾರ್ಯಾಚರಣೆ ನಡೆಸುವಂತಿಲ್ಲ ಎಂಬ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಅಗ್ರಿಗೇಟರ್ ಸಂಸ್ಥೆಗಳಾದ ಓಲಾ, ಉಬರ್‌, ರ‍್ಯಾಪಿಡೊ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

Chief Justice Vibhu Bakhru & Justice CM Joshi
Chief Justice Vibhu Bakhru & Justice CM Joshi

“ದ್ವಿಚಕ್ರ ವಾಹನ ಮಾಲೀಕರು ತಮ್ಮ ವಾಹನಗಳನ್ನು ಸಾರಿಗೆ ವಾಹನ ಎಂದು ನೋಂದಾಯಿಸಲು ಅರ್ಜಿ ಸಲ್ಲಿಸಲು ಮುಕ್ತರಾಗಿದ್ದಾರೆ. ಇಂತಹ ಅರ್ಜಿಗಳನ್ನು ಪರಿಗಣಿಸಿ, ವಾಹನ ಮಾಲೀಕರಿಗೆ ಸಾರಿಗೆ ವಾಹನವಾಗಿ ನೋಂದಣಿ ನೀಡಲು ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ಆಗಿ ಕಾರ್ಯನಿರ್ವಹಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪ್ರಸ್ತುತ ನಿಯಮಾವಳಿಗಳನ್ನು ಪರಿಶೀಲಿಸಬಹುದಾದರೂ, ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನ ಅಥವಾ ಕಾಂಟ್ರಾಕ್ಟ್ ಕ್ಯಾರೇಜ್ ಆಗಿ ಬಳಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಅನುಮತಿ ನಿರಾಕರಿಸುವಂತಿಲ್ಲ” ಎಂದು ಹೈಕೋರ್ಟ್ ಆದೇಶದಲ್ಲಿ‌ ಹೇಳಿದೆ.

“ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಮೋಟಾರು ವಾಹನ ಕಾಯಿದೆಯ ಸೆಕ್ಷನ್ 74(2)ರ ಪ್ರಕಾರ ಅಗತ್ಯ ಷರತ್ತುಗಳನ್ನು ವಿಧಿಸಬಹುದು. ಅಗ್ರಿಗೇಟರ್‌ಗಳು ಸಹ ಹೊಸದಾಗಿ ಅರ್ಜಿ ಸಲ್ಲಿಸಲು ಸ್ವತಂತ್ರರಾಗಿದ್ದು, ಅಂತಹ ಅರ್ಜಿಗಳನ್ನು ಈ ಆದೇಶದಲ್ಲಿನ ನ್ಯಾಯಾಲಯದ ಅವಲೋಕನಗಳು ಹಾಗೂ ಕಾನೂನಿನ ಚೌಕಟ್ಟಿನಡಿಯಲ್ಲಿ ಪರಿಗಣಿಸಬೇಕು” ಎಂದು ತಿಳಿಸಿರುವ ಹೈಕೋರ್ಟ್, ಏಕಸದಸ್ಯ ಪೀಠದ ಆದೇಶ ರದ್ದುಪಡಿಸಿ, ಮೇಲ್ಮನವಿಗಳನ್ನು ಮಾನ್ಯ ಮಾಡಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಪ್ರಯಾಣಿಕರನ್ನು ಸಾಗಿಸಲು ಅಥವಾ ಬಾಡಿಗೆಗೆ ಬಳಸಬಹುದು ಎಂದು ಶಾಸನದಲ್ಲಿ ವ್ಯಾಖ್ಯಾನಿಸದೇ ಇರುವುದರಿಂದ ಮೋಟಾರು ಸೈಕಲ್‌ಗಳು ಸಾರಿಗೆ ವಾಹನಗಳಾಗುವುದಿಲ್ಲ. ಮೋಟಾರು ಸೈಕಲ್‌ ವ್ಯಾಖ್ಯಾನದಲ್ಲಿ ಬೈಕ್‌ ಟ್ಯಾಕ್ಸಿಯನ್ನು ಪ್ರಯಾಣಿಕರನ್ನು ಸಾಗಿಸಲು ಇರುವ ವಾಹನ ಎಂದು ಹೇಳಿಲ್ಲ. ಮೋಟಾರು ವಾಹನಗಳ ಕಾಯಿದೆ ಅಥವಾ ನಿಯಮಗಳಲ್ಲೂ ಪ್ರಯಾಣಿಕರನ್ನು ಮೋಟಾರ್‌ ಸೈಕಲ್‌ ಒಯ್ಯಬಹುದು ಎಂದು ಹೇಳಿಲ್ಲ. ಮೋಟಾರ್‌ ಸೈಕಲ್‌, ಮೋಟಾರ್‌ ಕ್ಯಾಬ್‌ ವ್ಯಾಖ್ಯಾನದ ಅಡಿ ಬರುವುದಿಲ್ಲ” ಎಂದಿದ್ದರು.

Also Read
[ಬೈಕ್‌ ಟ್ಯಾಕ್ಸಿ ಸೇವೆಗೆ ನಿಷೇಧ] ಮೋಟಾರು ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ಬಳಕೆ ಮಾಡಲಾಗದು: ಸರ್ಕಾರದ ವಾದ

ಅರ್ಜಿದಾರರ ಪರ ವಕೀಲರು “ಒಂದು ಲಕ್ಷಕ್ಕೂ ಅಧಿಕ ಬೈಕ್‌ ಟ್ಯಾಕ್ಸಿಗಳು ಸೇವೆ ನೀಡುತ್ತಿದ್ದು, ಜನರು ಅವುಗಳನ್ನು ಬಳಕೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ನೇಮಕ ಮಾಡಿದ್ದ ಸಮಿತಿಯು ಬೆಂಗಳೂರಿಗೆ ಬೈಕ್‌ ಟ್ಯಾಕ್ಸಿ ಅಗತ್ಯವಿಲ್ಲ ಎಂದಿದೆ. ಬೈಕ್‌ ಟ್ಯಾಕ್ಸಿ ಸೇವೆ ಪಡೆಯಬೇಕು ಎನ್ನುವವರನ್ನು ನಿರ್ಬಂಧಿಸಲಾಗದು. ಪ್ರತಿಯೊಬ್ಬರಿಗೂ ಅತ್ಯಂತ ಕಡಿಮೆ ದರದಲ್ಲಿ ತುರ್ತಾಗಿ ಗುರಿ ತಲುಪಬಹುದಾದ ಸಾರಿಗೆ ಬೇಕಿದೆ. ಸರ್ಕಾರವು ಇ-ಬೈಕ್‌ ಸೇವೆ ಹಿಂಪಡೆದಿದೆ. ಇ-ಬೈಕ್‌ ನೀತಿ ಮತ್ತು ಈಗಿನ ಸರ್ಕಾರದ ನಿಲುವಿನಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಸಾರಿಗೆ ಕ್ಯಾರೇಜ್‌ಗೆ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ. ದೇಶದ 11 ರಾಜ್ಯಗಳಲ್ಲಿ ಅಲ್ಲಿನ ಕಾನೂನಿಗೆ ಅನುಗುಣವಾಗಿ ಬೈಕ್‌ ಟ್ಯಾಕ್ಸಿ ಸೇವೆಯಿದೆ” ಎಂದಿದ್ದರು.

ಬೈಕ್‌ ಟ್ಯಾಕ್ಸಿ ಸೇವೆಯನ್ನು ಹಲವರು ಜೀವನೋಪಾಯಕ್ಕಾಗಿ ಅವಲಂಬಿಸಿರುವುದರಿಂದ ಗಂಭೀರವಾಗಿ ಆಲೋಚಿಸುವಂತೆ ಸರ್ಕಾರಕ್ಕೆ ನ್ಯಾಯಾಲಯವು 2025ರ ಆಗಸ್ಟ್‌ 21ರಂದು ಸೂಚಿಸಿದ್ದನ್ನು ಇಲ್ಲಿ ನೆನೆಯಬಹುದು.

Kannada Bar & Bench
kannada.barandbench.com