

ಹಾಸನದ ವಕೀಲ ಜಿ ದೇವರಾಜೇಗೌಡಗೆ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯನ್ನು (ಅಂತಿಮ ತನಿಖಾ ವರದಿ) ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ಗುರುವಾರ ಅನುಮತಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್ ಐ ಆರ್ ರದ್ದುಪಡಿಸುವಂತೆ ಕೋರಿ ಹಾಸನದ ನಿವಾಸಿ ಜೆ ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ಅನುಮತಿ ಪಡೆಯದೆ ತನಿಖೆಯ ಅಂತಿಮ ವರದಿ ಸಲ್ಲಿಸುವಂತಿಲ್ಲ ಎಂದು ಮಧ್ಯಂತರ ಆದೇಶ ಮಾಡಲಾಗಿದೆ. ಆ ಆದೇಶ ತೆರವಿಗೆ ಕೋರಿ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ. ಪ್ರಕರಣದ ತನಿಖೆ ನಡೆಸಲಾಗಿದ್ದು, ಸದ್ಯ ಆರೋಪ ಪಟ್ಟಿ ಸಿದ್ದವಾಗಿದೆ. ಅದನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ರೋಪ ಪಟ್ಟಿ ಸಲ್ಲಿಸಲಾಗುವುದು. ಅದಕ್ಕಾಗಿ ಅನುಮತಿ ನೀಡಬೇಕು ಎಂದು ಕೋರಿದರು.
ದೇವರಾಜೇಗೌಡ ಪರ ವಕೀಲರು, ಈ ಪ್ರಕರಣವು ಕಾನೂನಿನ ದುರ್ಬಳಕೆಗೆ ಸ್ಪಷ್ಟ ಉದಾಹರಣೆಯಾಗಿದೆ. ಮೊದಲಿಗೆ ಅತ್ಯಾಚಾರ ಪ್ರಕರಣ ದಾಖಲಿಸಿರಲಿಲ್ಲ. ದೂರುದಾರೆಯ ಪತಿ ಎನ್ನಲಾದ ವ್ಯಕ್ತಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು. ಅದು ʼಬಿʼ ರಿಪೋರ್ಟ್ ನೊಂದಿಗೆ ಕೊನೆಗೊಂಡಿದ್ದಕ್ಕೆ ದೂರುದಾರೆ ಅತ್ಯಾಚಾರ ಆರೋಪ ಮಾಡಿದ್ದಾರೆ. ರಾಜಕೀಯ ಪ್ರೇರಿತವಾಗಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಪ್ರಕರಣದಲ್ಲಿನ ಆರೋಪಗಳು ಬಹಳ ಗಂಭೀರವಾಗಿದೆ. ಸದ್ಯ ಆರೋಪ ಪಟ್ಟಿ ಸಿದ್ದವಾಗಿದೆ. ಪೊಲೀಸರು ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸಲಿ. ಆ ಆರೋಪ ಪಟ್ಟಿಯನ್ನು ಪ್ರಶ್ನೆ ಮಾಡಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತು.
ಅದಕ್ಕೆ ದೇವರಾಜೇಗೌಡ ಪರ ವಕೀಲರು ಒಪ್ಪಿದ ಹಿನ್ನೆಲೆಯಲ್ಲಿ ಆರೋಪ ಪಟ್ಟಿ ಸಲ್ಲಿಸಲು ಪೊಲೀಸರಿಗೆ ಅನುಮತಿಸಿದ ಹೈಕೋರ್ಟ್, ಅದನ್ನು ಪ್ರಶ್ನಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ಕಲ್ಪಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.
ಪ್ರಕರಣದ ಹಿನ್ನೆಲೆ: ಮಹಿಳೆಯೊಬ್ಬರು ಹೊಳೆ ನರಸೀಪುರ ಠಾಣೆಗೆ 2024ರ ಏಪ್ರಿಲ್ 1ರಂದು ದೇವರಾಜೇಗೌಡ ವಿರುದ್ಧ ದೂರು ದಾಖಲಿಸಿದ್ದರು. ಹಾಸನದ ನಿಲವಾಗಿಲು ಗ್ರಾಮದ ರಸ್ತೆಯಲ್ಲಿ 30x40 ಅಡಿ ವಿಸ್ತೀರ್ಣದ ನಿವೇಶನವನ್ನು ನನ್ನ ಪತಿ ಹೊಂದಿದ್ದಾರೆ. ಅದನ್ನು ಮಾರಾಟ ಮಾಡುವ ವಿಚಾರವಾಗಿ ದೂರು ದಾಖಲಾಗುವ ದಿನದಿಂದ 10 ತಿಂಗಳ ಹಿಂದೆ ದೇವರಾಜೇಗೌಡ ಅವರನ್ನು ಭೇಟಿ ಮಾಡಿದ್ದೆ. ಅಂದಿನಿಂದ ತನ್ನೊಂದಿಗೆ ಅವರು ಮಾತನಾಡುತ್ತಿದ್ದರು. ಆ ನಿವೇಶನದಲ್ಲಿ ನಾನೇ ಮನೆಯನ್ನು ಕಟ್ಟಿಸಿಕೊಡುತ್ತೇನೆ. ಉಪ ವಿಭಾಗಾಧಿಕಾರಿ ನನಗೆ ಪರಿಚಯವಿದ್ದು, ನಿಮ್ಮ ಕೆಲಸ ಮಾಡಿಕೊಡುತ್ತೇನೆ. ನೀನು ಒಬ್ಬಳೇ ಹಾಸನಕ್ಕೆ ಬರಬೇಕು ಎಂದು ಹೇಳಿದ್ದರು.
ನಾನು ಹಾಸನಕ್ಕೆ ಹೋದಾಗ ಹೊಳೆನರಸೀಪುರ ರಸ್ತೆಗೆ ಹೊಂದಿಕೊಂಡಿರುವ ಬಿಯರ್ ತಯಾರಿಕಾ ಘಟಕದ ಹಿಂದಿರುವ ಪ್ರದೇಶಕ್ಕೆ ಕರೆದೊಯ್ದು, ಮೈ ಕೈಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆ. ನಂತರ ತಮ್ಮನ್ನು ಮನೆಗೆ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ತನ್ನನ್ನು ಹೆದರಿಸಿ ದೈಹಿಕವಾಗಿ ಬಳಸಿಕೊಂಡು ಜೀವ ಬೆದರಿಕೆ ಹಾಕಿರುತ್ತಾರೆ. ಫೆಬ್ರವರಿ 2ರಂದು ನಾನು ಹೇಳಿದ ಜಾಗಕ್ಕೆ ನೀನು ಬರಲಿಲ್ಲ ಎಂದರೆ ನಾನು ನಿನಗೆ ಕಳುಹಿಸಿರುವ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನ ಮೇರೆಗೆ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಜೀವ ಬೆದರಿಕೆ, ಅವಮಾನ ಮಾಡಿರುವುದು ಸೇರಿದಂತೆ ಇನ್ನಿತರ ಆರೋಪದ ಮೇಲೆ ಹೊಳನರಸೀಪುರ ಟೌನ್ ಠಾಣೆಯಲ್ಲಿ ದೇವರಾಜೇಗೌಡ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 354(ಎ), 354ಸಿ, 354ಡಿ, 376(1), 448, 504, 506 ಮತ್ತು 34 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66 (ಇ) ಅಡಿ ಪ್ರಕರಣ ದಾಖಲಾಗಿತ್ತು.