ಸಿಎಂ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಪತ್ರಕರ್ತ ಅರ್ನಾಬ್‌ ಗೋಸ್ವಾಮಿ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

“(ಅರ್ನಾಬ್‌) ಏನು ಅಪರಾಧ ಎಂಬುದು ನ್ಯಾಯಾಲಯಕ್ಕೆ ತಿಳಿಯಬೇಕಿದೆ? ಅಪರಾಧ ಏನೇನೂ ಇಲ್ಲ. ಇದು ಕಾನೂನಿನ ದುರ್ಬಳಕೆ” ಎಂದು ಅರ್ಜಿ ಪುರಸ್ಕರಿಸಲಾಗಿದ್ದು, ಪ್ರಕರಣ ರದ್ದುಪಡಿಸಲಾಗಿದೆ ಎಂದು ಮೌಖಿಕವಾಗಿ ಹೇಳಿದ ನ್ಯಾಯಾಲಯ.
Karnataka HC & Arnab Gowsomi
Karnataka HC & Arnab Gowsomi
Published on

ರಿಪಬ್ಲಿಕ್‌ ಟಿವಿಯ ಕನ್ನಡ ಸುದ್ದಿ ವಾಹಿನಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದ್ವೇಷ ಹರಡುವ ಸಂಬಂಧ ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಆರೋಪದ ಕುರಿತು ವಾಹಿನಿ ಕಾರ್ಯಕಾರಿ ನಿರ್ದೇಶಕ ಅರ್ನಾಬ್‌ ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ರದ್ದುಪಡಿಸಿದೆ.

ಬೆಂಗಳೂರಿನ ಎಸ್‌ ಜೆ ಪಾರ್ಕ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಆನಂತರ ನ್ಯಾಯಾಂಗ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಅರ್ನಾಬ್‌ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿತು.

Justice M Nagaprasanna
Justice M Nagaprasanna

ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಹೆಚ್ಚವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಆಗ ಪೀಠವು “ಏನು ಅಪರಾಧ ಎಂಬುದು ನ್ಯಾಯಾಲಯಕ್ಕೆ ತಿಳಿಯಬೇಕಿದೆ? ಅಪರಾಧ ಏನೇನೂ ಇಲ್ಲ. ಇದು ಕಾನೂನಿನ ದುರ್ಬಳಕೆ” ಎಂದು ಅರ್ಜಿ ಪುರಸ್ಕರಿಸಲಾಗಿದ್ದು, ಪ್ರಕರಣ ರದ್ದುಪಡಿಸಲಾಗಿದೆ ಎಂದಿತು. ಇದಕ್ಕೂ ಮುನ್ನ, ಡಿಸೆಂಬರ್‌ 17ರಂದು ಹೈಕೋರ್ಟ್‌ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿತ್ತು.

Senior Advocate Aruna Shyam
Senior Advocate Aruna Shyam

ಕಳೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು “ಕಣ್ತಪ್ಪನಿಂದ ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು. ತಕ್ಷಣ ಅದನ್ನು ಡಿಲೀಟ್‌ ಮಾಡಲಾಗಿದೆ. ಅರ್ನಾಬ್‌ ಗೋಸ್ವಾಮಿ ಅವರು ರಿಪಬ್ಲಿಕ್‌ ಕನ್ನಡ ವಾಹಿನಿಯ ಕಾರ್ಯಕಾರಿ ನಿರ್ದೇಶಕರಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್‌ 505 (2) ಪ್ರಕರಣ ದಾಖಲಿಸಲಾಗಿದೆ. ಇದನ್ನೂ ದೂರುದಾರರೆ ಸೂಚಿಸಿದ್ದಾರೆ” ಎಂದು ಆಕ್ಷೇಪಿಸಿದ್ದರು.

Also Read
ಸಿಎಂ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಅರ್ನಾಬ್‌ ಗೋಸ್ವಾಮಿ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: 2024ರ ಮಾರ್ಚ್‌ 27ರಂದು ರಿಪಬ್ಲಿಕ್‌ ಕನ್ನಡ ಸುದ್ದಿ ವಾಹಿನಿಯು ಸಂಜೆ 7.15ರ ಸುಮಾರಿಗೆ ಎಂ ಜಿ ರಸ್ತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಚರಿಸುವಾಗ ವಾಹನ ಸಂಚಾರ ತಡೆದು ಆಂಬುಲೆನ್ಸ್‌ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ಮಾಡಿದ್ದ ವಿಡಿಯೊ ತುಣುಕನ್ನು ಪ್ರಸಾರ ಮಾಡಿತ್ತು. ಅಂದು ಸಿಎಂ ಸಿದ್ದರಾಯ್ಯ ಅವರು ಮೈಸೂರಿನಲ್ಲಿದ್ದು, ಬೆಂಗಳೂರಿನಲ್ಲಿ ಪ್ರಯಾಣ ಮಾಡದಿರುವ ಸಂದರ್ಭದಲ್ಲಿ ಪರಿಶೀಲನೆ ನಡೆಸದೇ ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕರನ್ನು ಪ್ರಚೋದಿಸುವ ಸಲುವಾಗಿ ತಪ್ಪು ಮಾಹಿತಿ ಪ್ರಸಾರ ಮಾಡಿರುವ ರಿಪಬ್ಲಿಕ್‌ ಕನ್ನಡ ವಾಹಿನಿಯ ಮಾಲೀಕ ಅರ್ನಾಬ್‌ ಗೋಸ್ವಾಮಿ ಮತ್ತು ಸಂಪಾದಾಕ ನಿರಂಜನ್‌ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ಎಂ ವಿ ರವೀಂದ್ರ ದೂರು ನೀಡಿದ್ದರು. ಇದನ್ನು ಆಧರಿಸಿ ಎಸ್ ಜೆ ಪಾರ್ಕ್‌ ಪೊಲೀಸರು ಐಪಿಸಿ ಸೆಕ್ಷನ್‌ 505(2) ಅಡಿ ಪ್ರಕರಣ ದಾಖಲಿಸಿದ್ದರು.

Kannada Bar & Bench
kannada.barandbench.com