
“ರಾಹುಲ್ ಗಾಂಧಿ ಅವರ ದ್ವೇಷದ ಅಂಗಡಿ ಕರ್ನಾಟಕವನ್ನು ಮತಾಂಧರ ಗಲಭೆಯ ತೋಟವನ್ನಾಗಿ ಮಾಡಿದೆ” ಎಂಬ ಎಕ್ಸ್ (ಟ್ವಿಟರ್) ಹೇಳಿಕೆಯನ್ನು ಆಧರಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಹಾಗೂ ಈ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿನ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
ಎಫ್‌ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಕೋರಿ ಬಿ ವೈ ವಿಜಯೇಂದ್ರ ಹಾಗೂ ಬಿಜೆಪಿ ಘಟಕದ ಎಕ್ಸ್ ಖಾತೆ ನಿರ್ವಹಣೆದಾರ ಪ್ರಶಾಂತ ಮಾಕನೂರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಬುಧವಾರ ಪುರಸ್ಕರಿಸಿತು.
ವಿಜೇಯಂದ್ರ ಪರ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು “ಈ ಪ್ರಕರಣ ರಾಜಕೀಯ ದುರುದ್ದೇಶದಿಂದ ಕೂಡಿದ್ದು ಅರ್ಜಿದಾರರಿಗೆ ಕಿರುಕುಳ ನೀಡುವ ಉದ್ದೇಶದಿಂದ ದಾಖಲಿಸಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘಿಸಲಾಗಿದೆ” ಎಂದು ವಾದಿಸಿದರು.
ಇದನ್ನು ಮಾನ್ಯ ಮಾಡಿದ ಪೀಠವು ಎಫ್‌ಐಆರ್ ಮತ್ತು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ: ಬಿಜೆಪಿ ರಾಜ್ಯ ಘಟಕದ ನಿರ್ವಹಣೆಯ ಎಕ್ಸ್ ಖಾತೆಯಲ್ಲಿ ಪ್ರಕಟವಾಗಿದ್ದ ಆಕ್ಷೇಪಿತ ಪೋಸ್ಟ್ ವಿರುದ್ಧ 2024ರ ಏಪ್ರಿಲ್ 19ರಂದು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದರಲ್ಲಿ "ರಾಜ್ಯದಲ್ಲಿನ ಕಾಂಗ್ರೆಸ್ ಕರ್ನಾಟಕದ ಪಾಕಿಸ್ತಾನ್ ಸರ್ಕಾರದಿಂದ ತಾಲಿಬಾನ್ ಮಾಡೆಲ್ ಜಾರಿ, ಜೈಶ್ರೀರಾಮ್ ಎಂದರೆ ಬ್ರದರ್ಸ್‌ಗಳಿಂದ ಹಲ್ಲೆ, ಲವ್ ಜಿಹಾದ್‌ಗೆ ಒಪ್ಪದೇ ಇದ್ದರೆ ಬರ್ಬರ ಕೊಲೆ, ಒಡೆಯರ್ ಪರ ನಿಂತರೆ ಕಾರು ಹರಿಸಿ ಕೊಲೆ, ಡ್ರಾಪ್ ಕೊಟ್ಟರೆ ಮತಾಂಧರಿಂದ ಹಿಗ್ಗಾಮುಗ್ಗ ಥಳಿತ, ಕನ್ನಡ ಮಾತಾಡಿದರೆ ನಟಿ ಮೇಲೆಯೇ ಹಲ್ಲೆ ಯತ್ನ. ಚುನಾವಣೆ ಸಮಯದಲ್ಲಿ ಜಿಹಾದಿ ಮತಾಂಧ ಬ್ರದರ್ಸ್‌ಗಳನ್ನು ಸಿದ್ದರಾಮಯ್ಯ ಹಾಗೂ ಆ ದಿನಗಳ ಕೊತ್ವಾಲ್ ಶಿಷ್ಯ ಡಿ ಕೆ ಶಿವಕುಮಾರ್ ಅವರು, ಬೀದಿಗೆ ಬಿಟ್ಟು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಬೆದರಿಸುತ್ತಿದ್ದಾರೆ" ಎಂದು ಪೋಸ್ಟ್ ಮಾಡಲಾಗಿದೆ ಎಂದು ಆಕ್ಷೇಪಿಸಲಾಗಿತ್ತು.
ಇದರನ್ವಯ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 153 (ಎ), 505 (2) ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಜನಪ್ರತಿನಿಧಿಗಳ ಕಾಯಿದೆ–1951ರ ಸೆಕ್ಷನ್ 125ರ ಅನುಸಾರ, ಧರ್ಮ, ಜಾತಿ, ಭಾಷೆ, ವರ್ಗಗಳ ಆಧಾರದಲ್ಲಿ ಸಮಾಜದಲ್ಲಿ ದ್ವೇಷ ಭಾವನೆ ಉಂಟು ಮಾಡಿ ವೈರತ್ವ ಹುಟ್ಟು ಹಾಕುವುದು ಪರಸ್ಪರರ ಸೌಹಾರ್ದತೆಗೆ ಭಂಗ ತರಲು ಪ್ರಯತ್ನಿಸಿದ್ದಾರೆ ಎಂದು ವಿಜಯೇಂದ್ರ ವಿರುದ್ಧ ಆರೋಪ ಹೊರಿಸಲಾಗಿತ್ತು.