ಬಿಜೆಪಿ ನಾಯಕರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌: ಸಿಎಂ ಡಿ ಕೆ ಶಿವಕುಮಾರ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಹೈಕೋರ್ಟ್‌

“ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರು ಪೋಸ್ಟ್‌ ಅಪ್‌ಲೋಡ್‌ ಮಾಡಿದ್ದಾರೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರು ಎಂಬ ಕಾರಣಕ್ಕೆ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ” ಎಂದ ಶಿವಕುಮಾರ್‌ ಪರ ವಕೀಲರು.
D K Shivakumar and Karnataka HC
D K Shivakumar and Karnataka HC
Published on

ಆಕ್ಷೇಪಾರ್ಹ ಹೇಳಿಕೆಗಳನ್ನು ಒಳಗೊಂಡ ಬಿಜೆಪಿ ನಾಯಕರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಶಿವಕುಮಾರ್‌ ಅವರನ್ನು ಪ್ರತಿನಿಧಿಸಿದ್ದ ವಕೀಲ ಎಚ್‌ ವಿ ಪ್ರವೀಣ್‌ ಗೌಡ ಅವರು “ಶಿವಕುಮಾರ್‌ ಅವರ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಲಾಗಿದೆ ಎಂಬ ಏಕೈಕ ಕಾರಣಕ್ಕೆ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153A, 505(2), 504 ಮತ್ತು 464ರ ಅಡಿ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರು ಪೋಸ್ಟ್‌ ಅಪ್‌ಲೋಡ್‌ ಮಾಡಿದ್ದಾರೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರು ಎಂಬ ಕಾರಣಕ್ಕೆ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ” ಎಂದರು.

ಪ್ರಕರಣದ ಹಿನ್ನೆಲೆ: ಮೂರು ದಶಕಗಳ ಹಿಂದೆ ರಾಮ ಜನ್ಮಭೂಮಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶ್ರೀಕಾಂತ್ ಪೂಜಾರಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಡೆ ಖಂಡಿಸಿ ಬಿಜೆಪಿಯು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಆ ಸಂದರ್ಭದಲ್ಲಿ ಬಿಜೆಪಿ ನಾಯಕರು “ನಾನು ಕರಸೇವಕ ನನ್ನನ್ನೂ ಬಂಧಿಸಿ” ಎಂಬ ಒಕ್ಕಣೆ ಹೊಂದಿದ್ದ, ಭಿತ್ತಿಪತ್ರ ಹಿಡಿದು ಅಭಿಯಾನ ನಡೆಸಿದ್ದರು.

ಇದನ್ನು ಟೀಕಿಸುವ ಉದ್ದೇಶದಿಂದ ಕಾಂಗ್ರೆಸ್‌ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಫೋಟೊ ಬಳಸಿ “ನಾನು ಆರ್‌ಟಿಜಿಎಸ್‌ ಮೂಲಕ ಲಂಚ ಪಡೆದಿದ್ದೇನೆ. 40,000 ಕೋಟಿ ಅಕ್ರಮದಲ್ಲ ಪಾಲುದಾರ ನನ್ನನ್ನು ಬಂಧಿಸಿ”; ಶಾಸಕ ವಿ ಸುನೀಲ್‌ ಕುಮಾರ್‌ ಫೋಟೊ ಬಳಸಿ “ನಾನು ಪರಶುರಾಮ ಮೂರ್ತಿ ಕಂಚನ್ನು ಕದ್ದಿದ್ದೇನೆ; ಸಿಮೆಂಟ್‌ ಕದ್ದಿದ್ದೇನೆ ನನ್ನನ್ನು ಬಂಧಿಸಿ” ಎಂಬ ಒಕ್ಕಣೆಯ ಚಿತ್ರಗಳನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಅಂದಿನ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿಕೆ ಶಿವಕುಮಾರ್ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಬಿ ಆರ್‌ ನಾಯ್ಡು ವಿರುದ್ಧ ಬಿಜೆಪಿಯ ಕಾನೂನು ಘಟಕದ ಸಂಚಾಲಕ ಯೋಗೇಂದ್ರ ಹೊಡಘಟ್ಟ ನೀಡಿದ್ದ ಖಾಸಗಿ ದೂರು ಆಧರಿಸಿ ಹೈಗ್ರೌಂಡ್ಸ್‌ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 153(A), 504, 505(2), 464ರ ಅಡಿ ಪ್ರಕರಣ ಪ್ರಕರಣ ದಾಖಲಿಸಿದ್ದರು.

Kannada Bar & Bench
kannada.barandbench.com