ಅಮೆರಿಕಾ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ: ಹೋಮ್‌ ಸ್ಟೇ ಮಾಲೀಕನ ವಿರುದ್ಧದ ಆರೋಪ ಪಟ್ಟಿ ವಜಾಗೊಳಿಸಿದ ಹೈಕೋರ್ಟ್‌

ಅಮೆರಿಕಾ ಮಹಿಳೆ 2026ರ ಏಪ್ರಿಲ್‌ 12ರಂದು ಅರ್ಜಿದಾರರ ಮಾಲೀಕತ್ವದ ಕೊಡಗಿನ ಹೋಂ ಸ್ಟೇಗೆ ಆಗಮಿಸಿದ್ದರು. ಆಕೆಗೆ ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ, ಹೋಂ ಸ್ಟೇ ನೌಕರ (ಮೊದಲನೆ ಆರೋಪಿ) ಅತ್ಯಾಚಾರ ಎಸಗಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು.
High Court of Karnataka
High Court of Karnataka
Published on

ಕೊಡಗಿನ ಹೋಮ್‌ ಸ್ಟೇವೊಂದರಲ್ಲಿ ಅಮೆರಿಕಾ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರಿಗೆ ಮಾಹಿತಿ ನೀಡದ ಆರೋಪದ ಮೇಲೆ  ಮಾಲೀಕನ ವಿರುದ್ಧ ಕುಟ್ಟಾ ಠಾಣಾ ಪೊಲೀಸರು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ.

ಮಡಿಕೇರಿಯ ಕುಟ್ಟಾ ಠಾಣಾ ಪೊಲೀಸರು ಪೊನ್ನಂಪೇಟೆಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ 2026ರ ಜೂನ್‌ 7ರಂದು ಸಲ್ಲಿಸಿರುವ ಆರೋಪ ಪಟ್ಟಿ ರದ್ದುಪಡಿಸಬೇಕು ಎಂದು ಕೋರಿ ಹೋಮ್‌ ಸ್ಟೇ ಮಾಲೀಕ ಪಿ ಪೊನ್ನಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice M Nagaprasanna
Justice M Nagaprasanna

ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಅರ್ಜಿದಾರರ ವಿರುದ್ಧದ ಆರೋಪ ಪಟ್ಟಿ ರದ್ದುಪಡಿಸುವುದಕ್ಕೆ ಮಾತ್ರ ಸಮೀತವಾಗಿದೆ. ಇತರೆ ಆರೋಪಿಗಳ ವಿರುದ್ಧದ ಯಾವುದೇ ನ್ಯಾಯಾಲಯದಲ್ಲಿ ಬಾಕಿಯಿರುವ ವಿಚಾರಣಾ ಪ್ರಕ್ರಿಯೆಗೆ ಅನ್ವಯಿಸುವುದಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ಅಮೆರಿಕಾ ಮಹಿಳೆ 2026ರ ಏಪ್ರಿಲ್‌ 12ರಂದು ಅರ್ಜಿದಾರರ ಮಾಲೀಕತ್ವದ ಕೊಡಗಿನ ಹೋಂ ಸ್ಟೇಗೆ ಆಗಮಿಸಿದ್ದರು. ಆಕೆಗೆ ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ, ಹೋಂ ಸ್ಟೇ ನೌಕರ (ಮೊದಲನೆ ಆರೋಪಿ) ಅತ್ಯಾಚಾರ ಎಸಗಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು. ಘಟನೆ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ಮತ್ತು ಪೊಲೀಸರ ಸಹಾಯಬೇಕು ಎಂದು ಪ್ರಕರಣದ ಸಂತ್ರಸ್ತೆಯು ಅರ್ಜಿದಾರರ ಬಳಿ ಕೇಳಿದ್ದರು. ಆದರೆ, ಅರ್ಜಿದಾರರು ಆಕೆಗೆ ಯಾವುದೇ ಸಹಾಯ ಮಾಡಿಲ್ಲ. ಮೊದಲನೆ ಆರೋಪಿಯನ್ನು ರಕ್ಷಿಸಲು ಉದ್ದೇಶಿಸಿ, ಪ್ರಕರಣದ ಕುರಿತು ಪೊಲೀಸರಿಗೆ ಮಾಹಿತಿ ನೀಡಿಲ್ಲ. ವಿದೇಶಿ ಮಹಿಳೆ ಹೋಮ್‌ ಸ್ಟೇಗೆ ಬಂದು ವಾಸ್ತವ್ಯ ಹೂಡಿದಾಗ, ಆ ಬಗ್ಗೆ ವಿದೇಶಿಯರ ಕಾಯಿದೆ-1946ಯ ಸೆಕ್ಷನ್‌ 7 ಪ್ರಕಾರ ಫಾರಂ-ಸಿ ಅನ್ನು ಭರ್ತಿ ಮಾಡಿ 24 ಗಂಟೆ ಒಳಗೆ ಸ್ಥಳೀಯ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅರ್ಜಿದಾರ ಈ ನಿಯಮ ಪಾಲಿಸದಿರುವುದು  ದೃಢಪಟ್ಟಿದೆ ಎಂದು ವಿದೇಶಿಯರ ಕಾಯಿದೆ-1946ರ ಸೆಕ್ಷನ್‌ 7, 14 ಮತ್ತು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 239 ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಪೀಠ ತಿಳಿಸಿದೆ.

ಆದರೆ, ಅರ್ಜಿದಾರರ ವಿರುದ್ಧದ ಈ ಅಪರಾಧ ಕೃತ್ಯಗಳಿಗೆ ಪೂರಕ ಮತ್ತು ಸಮರ್ಪಕ ಸಾಕ್ಷ್ಯಧಾರಗಳಿಲ್ಲ. ಇನ್ನೂ ವಿದೇಶಿಯರ ಕಾಯಿದೆಯನ್ನು 2025ರ ಸೆಪ್ಟೆಂಬರ್‌ 1ರಿಂದ ರದ್ದುಪಡಿಸಲಾಗಿದೆ. ಒಮ್ಮೆ ಶಾಸನದ ಅಡಿಪಾಯವನ್ನು ಕಣ್ಮರೆಯಾದಾಗ, ಆ ಅಡಿಪಾಯದ ಮೇಲೆ ಆರೋಪ ಹೊರಿಸಲು ಅನುಮತಿಸಲಾಗುವುದಿಲ್ಲ. ಇನ್ನೂ ಅಪರಾಧದ ಬಗ್ಗೆ ತಿಳಿದಿದ್ದಕ್ಕೆ ಮತ್ತು ನಂತರ ಮೌನವಾಗಿರುವ ಮಾತ್ರಕ್ಕೆ ಬಿಎನ್‌ಎಸ್‌ ಸೆಕ್ಷನ್ 239 ಶಿಕ್ಷೆ ವಿಧಿಸುವುದಿಲ್ಲ. ಕಾನೂನುಬದ್ಧವಾಗಿ ಮಾಹಿತಿಯನ್ನು ಒದಗಿಸಲು ಬದ್ಧನಾಗಿರುವ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಲೋಪ ಎಸಗಿದ್ದಕ್ಕೆ ಇದು ಶಿಕ್ಷೆ ವಿಧಿಸುತ್ತದೆ. ಆದರೆ, ಆ ಶಾಸನಬದ್ಧ ಕರ್ತವ್ಯವನ್ನು ಖಾಸಗಿ ವ್ಯಕ್ತಿಯಾದ ಅರ್ಜಿದಾರರ ವಿರುದ್ಧ ಪ್ರದರ್ಶಿಸಲಾಗುವುದಿಲ್ಲ. ಕಾನೂನಿನಿಂದಲೇ ಲೋಪವು ಉದ್ಭವಿಸದಿದ್ದರೆ, ಆಗ ಬಿಎನ್‌ಎಸ್‌ನ ಸೆಕ್ಷನ್ 239 ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಕಾನೂನು ಅಪರಾಧವನ್ನು ಬಹಿರಂಗಪಡಿಸದಿದ್ದಲ್ಲಿ; ಕ್ರಿಮಿನಲ್ ವಿಚಾರಣೆಯನ್ನು ಶಿಕ್ಷೆಯಾಗಿ ಪರಿವರ್ತಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದ ಪೀಠ ಅರ್ಜಿದಾರನ ವಿರುದ್ಧದ ಆರೋಪ ಪಟ್ಟಿ ರದ್ದುಪಡಿಸಿದೆ.

Attachment
PDF
P Ponnappa Vs State of Karnataka
Preview
Kannada Bar & Bench
kannada.barandbench.com