

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 174(2)ರ ಪ್ರಕಾರ ಗಂಭೀರ ಸ್ವರೂಪವಲ್ಲದ ಅಪರಾಧ (ಅಸಂಜ್ಞೇಯ-ಎನ್‌ಸಿಆರ್) ಕೃತ್ಯದ ಕುರಿತು ತನಿಖೆ ನಡೆಸುವ ಮುನ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ದೂರನ್ನು ಕೇವಲ ಮ್ಯಾಜಿಸ್ಟ್ರೇಟ್‌ಗೆ ರವಾನಿಸಿ, ಅದು ತಲುಪಿದ ಬಗ್ಗೆ ಸ್ವೀಕೃತಿಯನ್ನು ಪಡೆದುಕೊಳ್ಳುವುದು ಬಿಎನ್‌ಎಸ್‌ಎಸ್ ಸೆಕ್ಷನ್ 174(2) ಅನ್ನು ಪಾಲಿಸಿದಂತಾಗುವುದಿಲ್ಲ ಎಂದು ಸ್ಪಷ್ಟಪಡಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಅನುಮತಿ ಪಡೆಯದೆ ವಂಚನೆ ಅಪರಾಧ (ಅಸಂಜ್ಞೇಯ ಅಪರಾಧ ಕೃತ್ಯ) ಸಂಬಂಧ ತಮ್ಮ ವಿರುದ್ಧ ಚಿತ್ರದುರ್ಗ ಗ್ರಾಮೀಣ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಅಖಿಲ್ ಅಚ್ಯುತ್ ಸೇರಿ ಮೂವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಅರ್ಜಿದಾರರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 318(4) ಅಡಿಯಲ್ಲಿ ವಂಚನೆ ಮಾಡುವ ಹಾಗೂ ಅಪ್ರಾಮಾಣಿಕವಾಗಿ ಆಸ್ತಿಯನ್ನು ಹಸ್ತಾಂತರಿಸುವಂತೆ ಪ್ರೇರೇಪಿಸುವ ಕೃತ್ಯಗಳಿಗೆ ಸಂಬಂಧಿಸಿದಂತೆ ದೂರಿನ ಕುರಿತಂತೆ ಪೊಲೀಸರು 2024ರ ರಾತ್ರಿ 7.30ಕ್ಕೆ ಎಫ್‌ಐಆರ್ ದಾಖಲಿಸಿದ್ದಾರೆ. ನಂತರ ರಾತ್ರಿ 8.05 ಗಂಟೆಗೆ ಆ ದೂರನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ರವಾನಿಸಿದ್ದಾರೆ. ತನಿಖೆಗೆ ನಡೆಸಲು ಪೊಲೀಸರಿಗೆ ಅಧಿಕಾರ ಕಲ್ಪಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಯಾವುದೇ ಆದೇಶ ಮಾಡಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ಅಸಂಜ್ಞೇಯ ಅಪರಾಧ ಕೃತ್ಯ ಕುರಿತು ತನಿಖೆ ಮಾಡಲು ಪೊಲೀಸರಿಗೆ ಅನುಮತಿ ನೀಡುವಂತಹ ಯಾವುದೇ ಪೂರ್ವಾನುಮತಿಯಾಗಲಿ ಅಥವಾ ತದನಂತರದ ಆದೇಶವಾಗಲಿ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಅವರಿಂದ ದೊರೆತಿರಲಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಬಿಎನ್‌ಎಸ್‌ಎಸ್ ಸೆಕ್ಷನ್ 174(2) ರ ಪ್ರಕಾರ ಅಸಂಜ್ಞೇಯ ಅಪರಾಧ ಕೃತ್ಯದ ತನಿಖೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪೊಲೀಸರಿಗೆ ಪೂರ್ವಾನುಮತಿ ನೀಡಬೇಕು. ಅಂತಹ ಪೂರ್ವಾನುಮತಿಯಿಲ್ಲದೆ ಅಸಂಜ್ಞೇಯ ಅಪರಾಧ ಕೃತ್ಯದ ಬಗ್ಗೆ ಪೊಲೀಸರು ತನಿಖೆ ನಡೆಸುವಂತಿಲ್ಲ. ದೂರನ್ನು ಕೇವಲ ಮ್ಯಾಜಿಸ್ಟ್ರೇಟ್‌ಗೆ ರವಾನಿಸಿ, ಅದು ತಲುಪಿದ ಬಗ್ಗೆ ಸ್ವೀಕೃತಿಯನ್ನು ಪಡೆದುಕೊಳ್ಳುವುದು, ಬಿಎನ್‌ಎಸ್‌ಎಸ್ ಸೆಕ್ಷನ್ 174(2) ಅನುಸರಣೆಯಾಗುವುದಿಲ್ಲ. ಕಾನೂನುಬದ್ಧ ಅವಶ್ಯಕತೆಯು ಮ್ಯಾಜಿಸ್ಟ್ರೇಟ್‌ಗೆ ಕೇವಲ ಮಾಹಿತಿ ನೀಡುವುದಲ್ಲ, ಬದಲಾಗಿ ತನಿಖೆ ನಡೆಸಲು ಅಧಿಕಾರ ನೀಡುವ ಆದೇಶವನ್ನು ಪಡೆದುಕೊಳ್ಳುವುದಾಗಿದೆ. ಅಂತಹ ಆದೇಶವಿಲ್ಲದ ಸನ್ನಿವೇಶದಲ್ಲಿ ಈ ಪ್ರಕರಣದಲ್ಲಿ ಪೊಲೀಸರು ಅನುಸರಿಸಿದ ಮಾದರಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಪೀಠ ನುಡಿದಿದೆ.
ಅದರಂತೆ ಪ್ರಕರಣದಲ್ಲಿ ಬಿಎನ್‌ಎಸ್‌ಎಸ್ 174 ಅಡಿಯಲ್ಲಿ ನಿಗದಿತ ನಿಯಮ/ಪ್ರಕ್ರಿಯೆ ಅನುಸರಿಸದೆ ಎಫ್‌ಐಆರ್ ದಾಖಲಿಸಿರುವುದಕ್ಕೆ ಕಾನೂನಿನ ಸಿಂಧುತ್ವ ಇಲ್ಲವಾಗಿದೆ. ಪ್ರಕರಣದ ತನಿಖೆ ಮುಂದುವರಿಸಲು ಅನುಮತಿಸುವುದು ಸರ್ಕಾರದ ಸ್ಪಷ್ಟ ಶಾಸನಬದ್ಧ ಅವಶ್ಯಕತೆ ಪೂರೈಸುವುದನ್ನು ತಪ್ಪಿಸಲು ಪೊಲೀಸರಿಗೆ ಅವಕಾಶ ನೀಡಿದಂತಾಗುತ್ತದೆ.ಇದರಿಂದ ಅರ್ಜಿದಾರರ ವಿರುದ್ಧದ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ರದ್ದು ಮಾಡಲಾಗುತ್ತಿದೆ. ಆದರೆ, ಪೊಲೀಸರು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಿ ತನಿಖೆಗೆ ಅನುಮತಿ ಕೋರುವುದಕ್ಕೆ ಈ ಆದೇಶ ಅಡ್ಡಿಪಡಿಸುವುದಿಲ್ಲ. ಮ್ಯಾಜಿಸ್ಟ್ರೇಟ್ ಕೋರ್ಟ್ ಒಂದೊಮ್ಮೆ ಅನುಮತಿ ನೀಡಿ ಆದೇಶಿಸಿದರೆ, ಕಾನೂನು ಪ್ರಕಾರ ಮುಂದುವರಿಯಲು ಪೊಲೀಸರು ಸ್ವತಂತ್ರರಿರುತ್ತಾರೆ ಎಂದು ಹೇಳಿದೆ.