

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಬೆಂಗಳೂರಿನ 58ನೇ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಮಂಗಳವಾರ ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್, ಈ ಸಂಬಂಧ ಹೊಸದಾಗಿ ಆದೇಶ ಹೊರಡಿಸಲು ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ.
ಪ್ರದೋಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಕರಣದ ಎರಡನೇ ಆರೋಪಿ ದರ್ಶನ್ ಸಲ್ಲಿಸಿದ್ದ ಅರ್ಜಿ ಕುರಿತ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ಪ್ರಕಟಿಸಿತು.
ದರ್ಶನ್ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಾಲಯ, ಪ್ರಕ್ರಿಯಾತ್ಮಕ ಲೋಪದ ಹಿನ್ನೆಲೆಯಲ್ಲಿ ಪ್ರದೋಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ವಿಚಾರಣಾಧೀನ ನ್ಯಾಯಾಲಯ 2026ರ ಆಗಸ್ಟ್ 25ರಂದು ಹೊರಡಿಸಿದ್ದ ಆದೇಶ ಹಾಗೂ ಪ್ರದೋಷ್ ಬಗ್ಗೆ ಪ್ರೊಬೇಷನ್ ಅಧಿಕಾರಿಯಿಂದ ವರದಿ ಕೇಳಿ ಆಗಸ್ಟ್ 20ರಂದು ಹೊರಡಿಸಿದ್ದ ಆದೇಶಗಳನ್ನು ರದ್ದುಪಡಿಸಿ ಆದೇಶಿಸಿದೆ.
ಇದೇ ವೇಳೆ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 307ರ (ಅಪರಾಧಿಗೆ ಸಹಕರಿಸಿದ ವ್ಯಕ್ತಿಗೆ ಕ್ಷಮಾದಾನ ನೀಡುವ ಸಂಬಂಧ ನ್ಯಾಯಾಲಯಕ್ಕೆ ಇರುವ ಅಧಿಕಾರ) ಅಡಿಯಲ್ಲಿ ಸಲ್ಲಿಸಲಾದ ಅರ್ಜಿ ಕುರಿತು ಹೊಸದಾಗಿ ಆದೇಶ ಹೊರಡಿಸಲು ಪ್ರಕರಣವನ್ನು ಮರಳಿ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿರುವ ಕರ್ನಾಟಕ ಹೈಕೋರ್ಟ್, ಈ ಆದೇಶ ಪ್ರತಿ ಸ್ವೀಕರಿಸಿದ ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯ ಹೊಸದಾಗಿ ಆದೇಶ ಹೊರಡಿಸಬೇಕು. ಈ ಆದೇಶದಲ್ಲಿ ಹೈಕೋರ್ಟ್ ಮಾಡಿರುವ ಅವಲೋಕನಗಳನ್ನು ವಿಚಾರಣಾ ನ್ಯಾಯಾಲಯ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಆದೇಶಿಸಿರುವ ಪೀಠವು ವಿಚಾರಣಾ ನ್ಯಾಯಾಲಯವು ಅರ್ಜಿ ಸಂಬಂಧ ಹೊಸದಾಗಿ ಆದೇಶ ಮಾಡಬೇಕೇ ಹೊರತು ಮತ್ತೆ ವಿಚಾರಣೆ ನಡೆಸಬಾರದು ಎಂದು ಸ್ಪಷ್ಟಪಡಿಸಿದೆ.
ಅರ್ಜಿ ವಿಚಾರಣೆ ವೇಳೆ ದರ್ಶನ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಹಷ್ಮತ್ ಪಾಷಾ ಅವರು “ಪ್ರಕರಣದ 14ನೇ ಆರೋಪಿಯಾಗಿದ್ದ ಪ್ರದೋಷ್ ರಾವ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಹೊರಡಿಸಿದ ಆದೇಶದಲ್ಲಿ ವಿಚಾರಣಾ ನ್ಯಾಯಾಲಯ ಅಸ್ವಿತ್ವದಲ್ಲಿಲ್ಲದ ಕಾನೂನು ಪ್ರಕ್ರಿಯೆ ಅನುಸರಿಸಿದೆ. ಪ್ರೊಬೇಷನ್ ಅಧಿಕಾರಿಯಿಂದ ಪ್ರದೋಷ್ ಬಗ್ಗೆ ವರದಿ ಪಡೆದಿದೆ. ಪ್ರದೂಷ್ ಒಳ್ಳೆಯ ವ್ಯಕ್ತಿ ಎಂದು ಪ್ರೊಬೇಷನ್ ಅಧಿಕಾರಿ ವರದಿ ನೀಡಿದ್ದಾರೆ. ಆರೋಪಿಯನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಾಗ ಯಾವ ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕೋ ಅದನ್ನೇ ಅನುಸರಿಸಬೇಕು. ಬೇರೆ ಪ್ರತ್ಯಕ್ಷ ಸಾಕ್ಷಿಗಳೇ ಇಲ್ಲದಿರುವಾಗ ಮಾತ್ರ ಮಾಫಿ ಸಾಕ್ಷಿ ಪರಿಗಣಿಸಬೇಕು. ಆದರೆ, ಈ ಪ್ರಕರಣದಲ್ಲಿ ಬೇರೆ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ. ಹೀಗಿದ್ದರೂ, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಈ ಕ್ರಮ ಸರಿಯಲ್ಲ” ಎಂದು ಆಕ್ಷೇಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಪೀಠವು ಪ್ರೊಬೇಷನ್ ಅಧಿಕಾರಿಯಿಂದ ವರದಿ ಪಡೆಯಲು ಕಾನೂನು ಎಲ್ಲಿದೆ? ಪ್ರೊಬೇಷನ್ ಅಧಿಕಾರಿಯ ವರದಿ ರದ್ದುಪಡಿಸಬಹುದಲ್ಲವೇ ಎಂದು ಎಸ್‌ಪಿಪಿ ಅವರನ್ನು ಪ್ರಶ್ನಿಸಿತ್ತಲ್ಲದೆ, ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳ ಕೊರತೆ ವಿಚಾರವು ಮೆರಿಟ್ ಅಂಶಕ್ಕೆ ಸಂಬಂಧಪಟ್ಟಿದೆ. ಮೆರಿಟ್ ಆಧಾರದಲ್ಲಿ ಈ ಅರ್ಜಿಯನ್ನು ಪರಿಣಿಸಲಾಗದು. ಪ್ರೊಬೇಷನ್ ಅಧಿಕಾರಿಯಿಂದ ವರದಿ ಪಡೆದ ಕ್ರಮವನ್ನು ಮಾತ್ರ ಪರಿಗಣಿಸಲಾಗುವುದು ಎಂದು ಹೇಳಿತ್ತು.
ಬಳಿಕ, ಪ್ರದೋಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಮುನ್ನ ಪ್ರೊಬೇಷನ್ ಅಧಿಕಾರಿಯಿಂದ ವರದಿ ಪಡೆದಿರುವ ಕ್ರಮಕ್ಕೆ ಸೀಮಿತವಾಗಿ ವಿಚಾರಣಾ ನ್ಯಾಯಾಲಯದ (ಸತ್ರ ನ್ಯಾಯಾಲಯ) ಆದೇಶವನ್ನು ರದ್ದುಪಡಿಸಲಾಗುವುದು. ಪ್ರದೋಷ್ ಅವರ ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಕೋರಿಕೆಯನ್ನು ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿ, ಹೊಸದಾಗಿ ಆದೇಶ ಹೊರಡಿಸುವಂತೆ ನಿರ್ದೇಶಿಸಲಾಗುವುದು ಎಂದು ಮೌಖಿಕವಾಗಿ ತಿಳಿಸಿತ್ತಾದರೂ, ಈ ಸಂಬಂಧ ಆದೇಶ ಹೊರಡಿಸುವುದು ಬಾಕಿ ಇತ್ತು.
ದರ್ಶನ್ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಾಲಯ, ಪ್ರಕ್ರಿಯಾತ್ಮಕ ಲೋಪದ ಹಿನ್ನೆಲೆಯಲ್ಲಿ ಪ್ರದೂಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಮುನ್ನ ಆತನ ಬಗ್ಗೆ ಪ್ರೊಬೇಷನ್ ಅಧಿಕಾರಿಯಿಂದ ವರದಿ ಕೇಳಿ ವಿಚಾರಣಾ ನ್ಯಾಯಾಲಯ 2026ರ ಆಗಸ್ಟ್ 20ರಂದು ಹೊರಡಿಸಿದ್ದ ಆದೇಶ ಹಾಗೂ ಪ್ರೊಬೇಷನ್ ಅಧಿಕಾರಿಯ ವರದಿ ಆಧರಿಸಿ ಪ್ರದೋಷ್ ರಾವ್‌ಗೆ ಕ್ಷಮಾದಾನ ನೀಡಿ ಆತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಆಗಸ್ಟ್ 25ರಂದು ಹೊರಡಿಸಿದ್ದ ಆದೇಶಗಳನ್ನು ರದ್ದುಪಡಿಸಿ ಆದೇಶಿಸಿದೆ.