
ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮಿ ಅಲಿಯಾಸ್ ಹರೀಶ್ ಶರ್ಮಾ ಅವರ ವಿರುದ್ಧದ ಎರಡನೇ ಅತ್ಯಾಚಾರ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಈ ಹಿಂದೆ ರಾಘವೇಶ್ವರ ಶ್ರೀ ಕೇಂದ್ರಿತವಾಗಿದ್ದ ರಾಮಕಥಾ ಗಾಯಕಿ ಅತ್ಯಾಚಾರ ಪ್ರಕರಣವೂ ವಜಾಗೊಂಡಿದ್ದನ್ನು ಇಲ್ಲಿ ನೆನೆಯಬಹುದು.
ರಾಘವೇಶ್ವರ ಭಾರತೀ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ 2024ರ ಜೂನ್ 11ರಂದು ಕಾಯ್ದಿರಿಸಿದ್ದ ಆದೇಶವನ್ನು ಸುಮಾರು ಎಂಟು ತಿಂಗಳ ನಂತರ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಇಂದು ಪ್ರಕಟಿಸಿದ್ದು, ರಾಘವೇಶ್ವರ ಭಾರತೀ ಅವರ ಅರ್ಜಿಯನ್ನು ಪುರಸ್ಕರಿಸಿದೆ.
“ಅರ್ಜಿಯನ್ನು ಪುರಸ್ಕರಿಸಲಾಗಿದ್ದು, ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಕ್ರಿಯೆ ವಜಾಗೊಳಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಶ್ರೀರಾಮಚಂದ್ರಪುರ ಮಠ ಮತ್ತು ಬೆಂಗಳೂರಿನ ಗಿರಿನಗರದಲ್ಲಿ ತಮ್ಮ ಮೇಲೆ ರಾಘವೇಶ್ವರ ಭಾರತೀ ಶ್ರೀ ಅವರು ಅತ್ಯಾಚಾರ ಎಸಗಿದ್ದರು ಎಂದು 29.08.2015ರಂದು ಸಂತ್ರಸ್ತೆಯು ಬೆಂಗಳೂರಿನ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ತನಿಖೆ ನಡೆಸಿದ್ದ ಸಿಐಡಿಯ ವಿಶೇಷ ತನಿಖಾ ದಳವು 07.09.2018ರಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ದೂರು ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ಹಾಗೂ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ರಾಘವೇಶ್ವರ ಭಾರತೀ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ.
2006ರಲ್ಲಿ ಮಠದಲ್ಲಿ 10ನೇ ತರಗತಿ ಓದುತ್ತಿರುವಾಗ ಚಾತುರ್ಮಾಸ ನಡೆಯುತ್ತಿದ್ದಾಗ ಮತ್ತು 2012ರ ಆಗಸ್ಟ್‌ನಲ್ಲಿ ಚಾತುರ್ಮಾಸ ನಡೆಯುತ್ತಿದ್ದಾಗ ಬೆಂಗಳೂರಿನ ಗಿರಿನಗರದಲ್ಲಿ ತಾವು ತಂಗಿದ್ದ ಕೊಠಡಿಗೆ ಕರೆಸಿಕೊಂಡು ಸ್ವಾಮೀಜಿ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆ ದೂರಿದ್ದರು. ಇದೇ ಪ್ರಕರಣದಲ್ಲಿ ರಾಘವೇಶ್ವರ ಭಾರತೀ, ಸಂತ್ರಸ್ತೆಯ ಪತಿ ಮಂಜುನಾಥ್ ಹೆಬ್ಬಾರ್ ಸೇರಿ ಎಂಟು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 323, 376, 376(2)(f)(i)(n), 498ಎ ಮತ್ತು 109 ಅಡಿ ಪ್ರಕರಣ ದಾಖಲಿಸಲಾಗಿತ್ತು. ಹೆಬ್ಬಾರ್ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ 2021ರ ಡಿಸೆಂಬರ್ 13ರಂದು ರದ್ದುಪಡಿಸಿತ್ತು.
ಈ ಹಿಂದೆ ರಾಘವೇಶ್ವರ ಭಾರತೀ ಅವರ ವಿರುದ್ಧ ರಾಮಕಥಾ ಗಾಯಕಿಯೊಬ್ಬರು ಮಾಡಿದ್ದ ಮೊದಲನೇ ಅತ್ಯಾಚಾರ ಆರೋಪದ ಸಂಬಂಧಿತ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿತ್ತು.
ಸಂತ್ರಸ್ತೆಯು 29.08.2015ರಂದು ಬೆಂಗಳೂರಿನ ಗಿರಿನಗರ ಠಾಣೆಯಲ್ಲಿ ದಾಖಲಿಸಿದ್ದ ದೂರಿನಲ್ಲಿ ಘಟನಾವಳಿಗಳನ್ನು ಹೀಗೆ ವಿವರಿಸಿದ್ದರು:
ತಾನು ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಹೊಸನಗರದ ಶ್ರೀರಾಮಚಂದ್ರಾಪುರ ಮಠ ನಡೆಸುವ ಸಾಗರ ತಾಲ್ಲೂಕಿನ ಚದುರವಳ್ಳಿಯ ಶ್ರೀ ಭಾರತೀ ವಿದ್ಯಾನಿಕೇತನದಲ್ಲಿ ಆರಂಭಿಸಿದ್ದು, 8, 9ನೇ ತರಗತಿಯಲ್ಲದೇ 10ನೇ ತರಗತಿಯ ಕೆಲವು ತಿಂಗಳು ಅದೇ ವಸತಿಯುತ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದೇನೆ.
ಶಾಲೆಯಲ್ಲಿದ್ದ ಸಂದರ್ಭದಲ್ಲಿ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿದ್ದ ವಿಶೇಷ ಕಾರ್ಯಕ್ರಮ, ಗುರು ದರ್ಶನ ಮತ್ತು ಸೇವೆಗೆ ಶಾಲಾ ವಿದ್ಯಾರ್ಥಿಗಳೆಲ್ಲಾ ಹೋಗುತ್ತಿದ್ದೆವು. ಹೀಗೆ ಗುರು ದರ್ಶನಕ್ಕೆ ಹೋಗುತ್ತಿದ್ದಾಗ ರಾಘವೇಶ್ವರ ಭಾರತೀ ಸ್ವಾಮಿ ಅವರು ತನ್ನ ಮೇಲೆ ವಿಶೇಷ ಕಾಳಜಿ ತೋರಿಸಿ, ಪ್ರೀತಿ ವಿಶ್ವಾಸದಿಂದ ಮಾತನಾಡುತ್ತಿದ್ದರು. 2006ರಲ್ಲಿ 10ನೇ ತರಗತಿ ಪ್ರಾರಂಭದಲ್ಲಿರುವಾಗ ಮಠದಲ್ಲಿ ಚಾತುರ್ಮಾಸ ನಡೆಯುತ್ತಿತ್ತು. ಅಲ್ಲಿಗೆ ಗುರು ಸೇವೆಗೆ ತೆರಳಿದ್ದಾಗ ಶ್ರೀಗಳು ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ ಎಂದು ವಿಚಾರಿಸುತ್ತಿದ್ದರು. ಒಂದು ದಿನ ಸಂಜೆ ತನ್ನನ್ನು ಖಾಸಗಿ ಕೊಠಡಿಗೆ ಕರೆದು ಮೈ ಕೈ ಮುಟ್ಟಿ ಪ್ರೀತಿ, ವಿಶ್ವಾಸದಿಂದ ಮಾತನಾಡಿಸಿದರು. “ಈಗ ನಾವು ಚಾತುರ್ಮಾಸ ವ್ರತದಲ್ಲಿದ್ದೇವೆ. ನಾವು ಎಲ್ಲವನ್ನೂ ಶ್ರೀರಾಮನ ಪ್ರೇರಣಿಯಿಂದಲೇ ಮಾಡುತ್ತೇವೆ. ಶ್ರೀರಾಮನ ಅವತಾರವೇ ಆಗಿರುತ್ತೇವೆ. ಶ್ರೀರಾಮನ ಪ್ರೇರಣೆಯಂತೆ ನಾವು ನಿನ್ನನ್ನು ಇಲ್ಲಿಗೆ ಕರೆದಿದ್ದೇವೆ. ನಿನ್ನ ಜಾತಕದಲ್ಲಿ ಕೆಲವು ದೋಷಗಳಿವೆ. ಅದನ್ನು ಪರಿಹಾರ ಮಾಡಲು ಶ್ರೀರಾಮ ಪ್ರೇರಣೆಯಂತೆ ಏನು ಮಾಡಬೇಕೋ ನಾವು ಅದನ್ನು ಮಾಡುತ್ತೇವೆ” ಎಂದು ಹೇಳಿ, ತನ್ನ ಸಮೀಪಕ್ಕೆ ತನ್ನನ್ನು ಎಳೆದು ಅವರು ಕುಳಿತಿದ್ದ ಪೀಠದ ಮೇಲೆ ನನ್ನನ್ನು ಅವರ ತೊಡೆಯ ಮೇಲೆ ಕೂರಿಸಿಕೊಂಡರು. ಆಗ ಗಾಬರಿಗೊಂಡಿದ್ದೆ. ಆದರೆ, ಶ್ರೀಗಳು ಶ್ರೀರಾಮ ಪ್ರೇರಣೆಯಿಂದ ಹಾಗೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದ ಕಾರಣ ಅವರನ್ನು ಸಂಪೂರ್ಣವಾಗಿ ನಂಬಿದೆ” ಎಂದು ದೂರಿನಲ್ಲಿ ತಿಳಿಸಿದ್ದರು.
ಮುಂದುವರಿದು, “ಶ್ರೀರಾಮನ ಅನುಗ್ರಹದಿಂದ ನಿನ್ನ ದೋಷಗಳೆಲ್ಲವೂ ಪರಿಹಾರವಾಗುತ್ತವೆ. ಇದಕ್ಕಾಗಿ ನಾವು ಏನು ಮಾಡಿದರೂ ವಿರೋಧ ವ್ಯಕ್ತಪಡಿಸಬೇಡ” ಎಂದು ಹೇಳಿದ್ದರು. 15 ವರ್ಷದ ತನ್ನ ಮುಗ್ಧತೆ ಬಳಸಿ, ಬಟ್ಟೆ ಕಳಚಿ ಅವರೂ ವಿವಸ್ತ್ರವಾಗಿ ತನ್ನನ್ನು ಅವರು ಕೂತಿರುವ ಪೀಠದ ಮೇಲೆ ಅವರ ತೊಡೆಯ ಮೇಲೆ ಎಳೆದು ಬಾಯಿ ಮುಚ್ಚಿ, ಸಂಭೋಗ ನಡೆಸಿದರು. ಎಲ್ಲವೂ ಸರಿ ಹೋಗುತ್ತದೆ. ಇದನ್ನು ಯಾರಿಗೂ ಹೇಳಬೇಡ, ಯಾರಿಗಾದರೂ ಹೇಳಿದರೆ ಒಳ್ಳೆಯದಾಗುವುದಿಲ್ಲ. ಶ್ರೀರಾಮನ ಶಾಪ ತಾಗುತ್ತದೆ” ಎಂದು ಹೇಳಿ, ಬಟ್ಟೆ ಹಾಕಿಕೊಳ್ಳಲು ಹೇಳಿ, ಅವರೇ ಬಾಗಿಲು ತೆರೆದು ಕಳುಹಿಸಿದರು. ಅಲ್ಲಿಂದ ಕಣ್ಣೀರಿಡುತ್ತಾ ಬರುತ್ತಿದ್ದ ತನ್ನನ್ನು ಕಂಡ ಒಬ್ಬರು “ಗುರುಗಳನ್ನು ಕಂಡು ಬರುವಾಗ ಬೇಜಾರಿನಿಂದ ಬರಬಾರದು. ಅವರು ನಮಗೆ ಒಳ್ಳೆದನ್ನೇ ಮಾಡುತ್ತಾರೆ. ನಮ್ಮನ್ನೆಲ್ಲ ಕಾಯುವ ಅವರನ್ನು ಕಂಡು ಬರುವಾಗ ಸಂತೋಷದಿಂದ ಬರಬೇಕು” ಎಂದರು. ಇದರಿಂದ ಶ್ರೀಗಳ ಜೊತೆ ನಡೆದ ಘಟನೆಯನ್ನು ಅವರಿಗೆ ತಿಳಿಸಲು ಹಿಂದೇಟು ಹಾಕಿದೆ.
ಈ ಘಟನೆಯಿಂದ ಮಾನಸಿಕವಾಗಿ ನೊಂದು ಯಾರೊಂದಿಗೂ ಬರೆಯಲು ಅಸಾಧ್ಯವಾಯಿತು. ತನ್ನ ಬೇಸರ, ಹತಾಷೆಗಳನ್ನು ಆ ದಿನಗಳಲ್ಲಿ ಪರಿಚಿತರು ಮತ್ತು ವಿಶ್ವಾಸದಲ್ಲಿರುವವರ ಜೊತೆ ಫೋನ್‌ನಲ್ಲಿ ಹೇಳಿಕೊಳ್ಳುತ್ತಿದ್ದೆ. ಆದರೆ, ವಾಸ್ತವ ಘಟನೆಯನ್ನು ಗುರುಗಳ ಭಯದಿಂದ ಬಹಿರಂಗಗೊಳಿಸಲು ಆಗಿರಲಿಲ್ಲ. ಈ ಘಟನೆಯಾದ ಕೆಲ ದಿನಗಳಲ್ಲಿ ಮಠದ ಆಡಳಿತದಿಂದ ನಡೆಸಲ್ಪಡುವ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಮುಜುಂಗಾವಿನಲ್ಲಿರುವ ಶ್ರೀ ಭಾರತೀ ವಿದ್ಯಾಪೀಠದಲ್ಲಿ 10ನೇ ತರಗತಿ ಮುಂದುವರಿಸಲು ಗುರುಗಳೇ ಸ್ವತಃ ತಿಳಿಸಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿದರು. ಅಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ಮುಖ್ಯ ಶಿಕ್ಷಕರಿಗೆ ಕರೆ ಮಾಡಿ ನನ್ನನ್ನು ಕರೆಯಿಸಿ ಮಾತನಾಡುತ್ತಿದ್ದರು. ನಡೆದ ಘಟನೆಯನ್ನು ಯಾರಿಗೂ ಹೇಳಬೇಡ ಎಂದು ಪದೇಪದೇ ಹೇಳುತ್ತಿದ್ದರು ಎಂದು ದೂರಿನಲ್ಲಿ ವಿವರಿಸಿದ್ದರು.
ಪಿಯುಸಿ ಶಿಕ್ಷಣವನ್ನು ಗೋಕರ್ಣದ ಭದ್ರಕಾಳಿ ಪದವಿ ಪೂರ್ವ ಕಾಲೇಜಿನಲ್ಲಿ ಪಡೆಯುತ್ತಿದ್ದಾಗ ತನಗೆ ಹದಿನೆಂಟು ವಯಸ್ಸಾಗಿತ್ತು. ಆಗ ತಂದೆಯವರನ್ನು ಮಠಕ್ಕೆ ಕರೆಯಿಸಿ ಶ್ರೀಗಳು ತನ್ನ ಮದುವೆ ವಿಷಯ ಪ್ರಸ್ತಾಪಿಸಿ, ವರನನ್ನೂ ಹುಡುಕುತ್ತೇವೆ, ಖರ್ಚನ್ನೂ ಮಠವೇ ನೋಡಿಕೊಳ್ಳುತ್ತದೆ. ಅವಳಿಗೆ ಮದುವೆ ಮಾಡಿಸುವಂತೆ ಸೂಚಿಸಿದ್ದರು. ಈ ಬಗ್ಗೆ ತಂದೆಯವರು ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ “ಈ ಮಾತಿಗೆ ತಪ್ಪಿದರೆ ನಿನ್ನ ಕುಟುಂಬಕ್ಕೆ ಗುರುಶಾಪ ಬರುತ್ತದೆ” ಎಂದು ಹೆದರಿಸಿದ್ದರು. ಅದರಂತೆ ತನ್ನ ಮತ್ತು ತನ್ನ ತಂದೆಯ ಒಪ್ಪಿಗೆಯನ್ನು ಬಲವಂತವಾಗಿ ಪಡೆದು, ಭಟ್ಕಳದ ನಿವಾಸಿ ಮಂಜುನಾಥ್ ಹೆಬ್ಬಾರ್ ಜೊತೆ 2009ರ ಮೇ 27ರಂದು ಮದುವೆ ಮಾಡಿಸಿದ್ದರು. ಮದುವೆ ಸಂದರ್ಭದಲ್ಲಿ ತನ್ನ ಜೀವನದಲ್ಲಿ ನಡೆದಿದ್ದ ಕಹಿ ಘಟನೆಯ ಬಗ್ಗೆ ಹೆಬ್ಬಾರ್‌ಗೂ ತಿಳಿದಿತ್ತು. ಮದುವೆಯಾದ ಬಳಿಕ ಆ ವಿಚಾರವನ್ನು ಪ್ರಸ್ತಾಪಿಸಿ ಹೆಬ್ಬಾರ್ ಕಿರುಕುಳ ನೀಡಲಾರಂಭಿಸಿದರು. 2012ರ ಸಮಯದಲ್ಲಿ ಗಿರಿನಗರದ ಮನೆಯಲ್ಲಿ ವಾಸಿಸುತ್ತಿದ್ದು, ಈ ಸಂದರ್ಭದಲ್ಲಿ ತಮ್ಮ ದಾಂಪತ್ಯ ತೀರಾ ಹದಗೆಡಲು ಪ್ರಾರಂಭವಾಯಿತು. ಈ ವಿಚಾರವಾಗಿ ಮಠದಲ್ಲೂ ಸೇರಿದಂತೆ ಕೆಲವು ಕಡೆ ತಮ್ಮನ್ನು ಕೂರಿಸಿ ಹಿರಿಯರು ಮಾತುಕತೆ ನಡೆಸಿದರು.
ಮುಂದುವರೆದು ಅರ್ಜಿದಾರೆಯು ತನ್ನ ದೂರಿನಲ್ಲಿ, 2012ರ ಆಗಸ್ಟ್‌ನಲ್ಲಿ ಗಿರಿನಗರದಲ್ಲಿ ಚಾತುರ್ಮಾಸ ನಡೆಯುತ್ತಿದ್ದಾಗ ಗುರುಗಳು ತಾವು ಉಳಿದುಕೊಂಡಿದ್ದ ಕೊಠಡಿಗೆ ಕರೆಸಿಕೊಂಡಿದ್ದರು. ತನ್ನ ಇಚ್ಛೆಗೆ ವಿರುದ್ದವಾಗಿ ಮಾಡಿಸಿದ ಮದುವೆ ವಿರುದ್ದ ಅವರ ಎದುರು ಕಣ್ಣೀರು ಹಾಕಿದ್ದೆ. ಜಾತಕದಲ್ಲಿ ದೋಷಗಳಿವೆ ಎಂದು ಕೈ ಹಿಡಿದು ಎಳೆದು ಅವರ ಸಮೀಪಕ್ಕೆ ಎಳೆದುಕೊಂಡು ಮುದ್ದಾಡುವ ಪ್ರಯತ್ನ ಮಾಡಿದಾಗ ಗಾಬರಿಗೊಂಡು ಅದಕ್ಕೆ ವಿರೋಧಿಸಿದೆ. ಇದರಿಂದ ಸಿಟ್ಟುಗೊಂಡು ರಾಘವೇಶ್ವರ ಭಾರತೀ ಶ್ರೀ ಅವರು ತನ್ನ ಕಾಲಿಗೆ ಬಲವಾಗಿ ಒದ್ದಾಗ ನೆಲಕ್ಕೆ ಬಿದ್ದಿದ್ದೆ. ಆಗ ತನ್ನ ಮೇಲೆ ಎರಗಿ, ಬಟ್ಟೆ ಎಳೆದು, ನನ್ನನ್ನು ಹೆದರಿಸಿ ಬಲಾತ್ಕಾರದಿಂದ ಸಂಭೋಗ ನಡೆಸಿದ್ದರು ಎಂದು ವಿವರಿಸಿದ್ದರು.
ಆನಂತರ ತಾನು ಅಳುವುದನ್ನು ಕಂಡು “ಏನೂ ಹೆದರಬೇಡ. ನಿನಗೀಗ ಮದುವೆ ಆಗಿದೆ. ಎಲ್ಲವೂ ಸರಿ ಹೋಗುತ್ತದೆ. ನಾವು ಕರೆದಾಗಲೆಲ್ಲಾ ಬರುತ್ತಾ ಇರಬೇಕು” ಎಂದು ಹೇಳಿದರು. ಈ ಘಟನೆಯಿಂದ ಮತ್ತೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದೆ. ಗುರುಗಳು ಸರಿಯಿಲ್ಲ ಎಂದು ಗಂಡನಲ್ಲಿ ಹೇಳಿದರೂ ಅದನ್ನು ಅವರು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಗುರುಗಳು ಕರೆದಾಗ ಅಲ್ಲಿಗೆ ಹೋಗಬೇಕು, ಅವರು ಏನೇ ಮಾಡಿದರೂ ಸಹಕರಿಸಬೇಕು ಎಂದು ಗಂಡನೇ ಹೇಳಿದಾಗ ಆಘಾತವಾಯಿತು. ಈ ಘಟನೆಗಳ ನಂತರ ರಾಮಕಥಾ ಗಾಯಕಿ ಪ್ರಕರಣ ಹೊರಬಂದ ಮೇಲೆ ಮತ್ತೆ ತನ್ನ ಜೀವನದಲ್ಲಿ ಅಲ್ಲೋಲ ಕಲ್ಲೋಲ ಆರಂಭವಾಯಿತು ಎಂದಿದ್ದಾರೆ.
ಪ್ರಕರಣದ ಬಗ್ಗೆ ಸಿಐಡಿ ಹಲವರನ್ನು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಸೆಪ್ಟೆಂಬರ್ 13ರಂದು ತಂದೆಯ ಮನೆಯಲ್ಲಿದ್ದಾಗ ಅರುಣ ಶ್ಯಾಮ, ಅನಂತಣ್ಣ, ರಮೇಶಣ್ಣ, ಸುಧಾಲಕ, ಮಧುಕರ ಅವರು “ಗುರುಗಳು ತನ್ನನ್ನು ಮಠಕ್ಕೆ ಕರೆದುಕೊಂಡು ಬರಲು ತಮ್ಮನ್ನು ಕಳುಹಿಸಿದ್ದಾರೆ. ಕೂಡಲೇ ಹೊರಡು ಎಂದಾಗ ಗಾಬರಿಗೊಂಡು ಬರುವುದಿಲ್ಲ ಎಂದು ಹೇಳಿದ್ದೆ. ಆಗ ಅವರೆಲ್ಲರೂ ಸೇರಿ ಬಲಾತ್ಕಾರದಿಂದ ತನ್ನನ್ನು ಅವರು ಬಂದಿದ್ದ ಟೊಯೊಟೊ ಇನ್ನೋವಾ ಕಾರಿಗೆ ಹಾಕಿ ಕುಮಟಾ ಸಮೀಪದ ಕೆಕ್ಕಾರು ಮಠಕ್ಕೆ ಅಪಹರಿಸಿ ಕರೆದೊಯ್ದರು. ಅಲ್ಲಿ ರಾಘವೇಶ್ವರ ಭಾರತೀ ಶ್ರೀ ಅವರು “ನೀನು ನಮ್ಮ ಪರವಾಗಿ ಸಿಐಡಿ ಪೊಲೀಸರು ಎದುರು ಸಾಕ್ಷಿ ಹೇಳಿದರೆ ಅಥವಾ ಈ ಹಿಂದೆ ನಡೆದ ಘಟನೆ ಬಗ್ಗೆ ಏನಾದರೂ ಹೇಳಿದರೆ ನಿನ್ನನ್ನು, ನಿನ್ನ ತಂದೆ-ತಾಯಿಯನ್ನು ಮುಗಿಸಿ ಬಿಡುತ್ತೇವೆ” ಎಂದು ಕೊಲ್ಲುವ ಬೆದರಿಕೆ ಹಾಕಿದ್ದರು. ಅದೇ ರೀತಿ ತನ್ನನ್ನು ಅಲ್ಲಿಗೆ ಬಲವಂತದಿಂದ ಕರೆದೊಯ್ದು ಮೇಲೆ ತಿಳಿಸಿದ ಮಂದಿ “ಗುರುಗಳು ಹೇಳಿದಂತೆ ನೀನು ಮತ್ತು ನಿನ್ನ ತಂದೆಯನ್ನು ಮುಗಿಸಿ ಬಿಡುತ್ತೇವೆ” ಎಂದರು. ಜೊತೆಗಿದ್ದ ತಂದೆಯವರಿಗೂ ಬೆದರಿಕೆ ಹಾಕಿದ್ದರು. ಇದರ ನಂತರ ರಕ್ಷಣೆ ನೀಡಲು ಪೊಲೀಸರಲ್ಲೂ ವಿನಂತಿಸಿದ್ದೇನೆ ಎಂದು ದೂರಿನಲ್ಲಿ ವಿವರಿಸಿದ್ದರು.
ತದನಂತರ ರಾಘವೇಶ್ವರ ಭಾರತೀ ಪ್ರಕರಣದ ಬಗ್ಗೆ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವ ಕೆಲ ಹೊತ್ತಿಗೆ ಮುನ್ನ ಜಗದೀಶ್ ಶರ್ಮ ಅವರ ಫೋನ್‌ನಿಂದ ಕರೆ ಮಾಡಿದ ಗುರುಗಳು ಹಳೆಯದು ಯಾವುದನ್ನೂ ಹೇಳಬೇಡ. ನಿನ್ನ ವಿಚಾರಕ್ಕೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ. ನಮ್ಮ ವಿರುದ್ಧ ಮಾತನಾಡಿದರೆ ಬದುಕು ಸರ್ವನಾಶವಾಗುತ್ತದೆ. ನಿನಗೆ ಒಳ್ಳೆಯದಾಗುವುದಿಲ್ಲ ಎಂದು ಮತ್ತೆ ಹೆದರಿಸಿದರು. ಅಲ್ಲದೇ, ಸಿಐಡಿ ಎದುರು ವಿಚಾರಣೆ ಎದುರಿಸುತ್ತಿದ್ದಾಗಲೇ ಜಗದೀಶ್ ಶರ್ಮ ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸಿದ್ದರು. ಈ ಮೆಸೇಜನ್ನು ಸಿಐಡಿ ಅಧಿಕಾರಿ ಸಿರಿಗೌರಿ ಹಾಗೂ ಪುರುಷೋತ್ತಮ ಅವರಿಗೆ ತೋರಿಸಿದೆ. ಅವರು ಆ ಮೆಸೇಜ್‌ಗಳನ್ನು ಅವರ ಫೋನ್ ನಂಬರಿಗೆ ಫಾರ್ವರ್ಡ್ ಮಾಡಿಕೊಂಡರು. ಸಿಐಡಿ ಅಧಿಕಾರಿಗಳು ಆ ಪ್ರಕರಣದಲ್ಲಿ ವಿಚಾರಿಸಿದಾಗ ತನ್ನ ಮೇಲೆ ಗುರುಗಳು ಮಾಡಿರುವ ಅತ್ಯಾಚಾರದ ಬಗ್ಗೆ ತಿಳಿಸಲು ಈ ಎಲ್ಲಾ ಬೆದರಿಕೆ ಕಾರಣ ಧೈರ್ಯ ಬಂದಿರಲಿಲ್ಲ.
ಶ್ರೀ ರಾಘವೇಶ್ವರ ಭಾರತೀ ಅವರ ಬೆಂಬಲಿಗರು ಬಲಾತ್ಕಾರದಿಂದ ತನ್ನನ್ನು ಗಿರಿನಗರದಿಂದ ಅಪಹರಿಸಿ ಕೆಕ್ಕಾರು ಮಠದಲ್ಲಿ ದಿಗ್ಬಂಧನ ಮಾಡಿ ಜೀವ ಬೆದರಿಕೆ ಹಾಕಿದ್ದಲ್ಲದೇ ಗುರುಗಳು ಎರಡು ಬಾರಿ, ಅಂದರೆ ಒಮ್ಮೆ 15 ವರ್ಷ ವಯಸ್ಸಿನವಳಿದ್ದಾಗ ಮತ್ತು ಮತ್ತೊಮ್ಮೆ ಮದುವೆಯಾದ ನಂತರ ಮೇಲೆ ಹೇಳಿದಂತೆ ಅತ್ಯಾಚಾರ ಮಾಡಿರುತ್ತಾರೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ, ಕಾನೂನು ಕ್ರಮಕೈಗೊಂಡು ನ್ಯಾಯ ಒದಗಿಸಬೇಕು ಎಂದು ಸಂತ್ರಸ್ತೆಯು 29.08.2015ರಂದು ಬೆಂಗಳೂರಿನ ಗಿರಿ ನಗರ ಠಾಣೆಗೆ ದೂರು ನೀಡಿದ್ದರು.