

ಅಪಘಾತ ಸಂಭವಿಸಿದ ತಕ್ಷಣ ಸ್ಥಳದಿಂದ ಪರಾರಿಯಾಗದೆ ಗಾಯಾಳುವನ್ನು ತನ್ನದೇ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಚಾಲಕನೊಬ್ಬನ ಜೈಲು ಶಿಕ್ಷೆಯನ್ನು ಒಂದು ವರ್ಷದಿಂದ ಒಂದು ದಿನಕ್ಕೆ (ಕೋರ್ಟ್ ಕಲಾಪ ಮುಗಿಯುವವರೆಗೆ) ಕಡಿತಗೊಳಿಸಿ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆಯ ನಿವಾಸಿ ರಿಯಾಜ್ ಅಹ್ಮದ್ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.
ಅಜಾಗರೂಕತೆಯ ಚಾಲನೆಯಿಂದ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಮಾರ್ಪಡಿಸಿ ನ್ಯಾಯಾಲಯ ಆದೇಶಿಸಿದೆ.
ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗದೆ ಸಂತ್ರಸ್ತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿರುವುದು ಶಿಕ್ಷೆಯನ್ನು ಕಡಿಮೆ ಮಾಡುವುದಕ್ಕೆ ಕಾರಣವಾಗಿರುವ ಅಂಶವಾಗಿದೆ. ಅಲ್ಲದೇ, ಶಿಕ್ಷೆಗೆ ಗುರಿಯಾಗಿರುವ ರಿಯಾಜ್ ಕೂಡ ನಂತರದ ದಿನಗಳಲ್ಲಿ ಮತ್ತೊಂದು ಅಪಘಾತಕ್ಕೆ ಒಳಗಾಗಿ ಬಲಗಾಲಿಗೆ ರಾಡ್ ಅಳವಡಿಸಿಕೊಂಡಿದ್ದು, ಸದ್ಯ ಚಾಲನೆ ಮಾಡಲು ಸಾಧ್ಯವಾಗದೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ ಎಂಬ ಅಂಶ ದಾಖಲೆಗಳಿಂದ ಗೊತ್ತಾಗಲಿದೆ ಎಂದು ನ್ಯಾಯಾಲಯ ಹೇಳಿದೆ.
ಮೋಟಾರು ವಾಹನ ನ್ಯಾಯ ಮಂಡಳಿ ನೀಡಿರುವ ಪರಿಹಾರವಲ್ಲದೇ, ಹೆಚ್ಚುವರಿ ಪರಿಹಾರ ನೀಡಿದರೆ ಶಿಕ್ಷೆ ಕಡಿತಗೊಳಿಸಲು ಒಪ್ಪಿಗೆ ಸೂಚಿಸಲಾಗುವುದು ಎಂದು ಮೃತರ ಕುಟುಂಬದವರು ತಿಳಿಸಿದ್ದರು. ಈ ಅಂಶ ದಾಖಲಿಸಿಕೊಂಡ ಪೀಠವು ಅಂದಿನ ನ್ಯಾಯಾಲಯದ ಕಲಾಪ ಮುಗಿಯುವವರೆಗೆ ಶಿಕ್ಷೆ ವಿಧಿಸಿತು. ಇದರೊಂದಿಗೆ ಮೃತರ ಪತ್ನಿ ಮತ್ತು ಮಗನಿಗೆ ತಲಾ ಐವತ್ತು ಸಾವಿರ ರೂಪಾಯಿ ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶಿಸಿತು. ಈ ಮೊತ್ತವನ್ನು ಎರಡು ಕಂತುಗಳಲ್ಲಿ ಜೂನ್ 30ರ ಒಳಗಾಗಿ ಪಾವತಿಸಬೇಕು. ಒಂದು ವೇಳೆ ಈ ಹಣ ಪಾವತಿಸಲು ವಿಫಲವಾದರೆ, ಹಳೆಯ ಒಂದು ವರ್ಷದ ಜೈಲು ಶಿಕ್ಷೆ ತಾನಾಗಿಯೇ ಮರುಸ್ಥಾಪನೆಯಾಗಲಿದೆ ಎಂದು ಪೀಠ ಸ್ಪಷ್ಟಪಡಿಸಿದೆ.
2015 ಜುಲೈ 15 ರಂದು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬೀಚ್ ರಸ್ತೆ ಬಳಿ ಅರ್ಜಿದಾರ ರಿಯಾಜ್ ಅಹ್ಮದ್ ಚಲಾಯಿಸುತ್ತಿದ್ದ ಕಾರು ಆನಂದ್ ಶೆಟ್ಟಿ ಎಂಬ ಪಾದಚಾರಿಗೆ ಡಿಕ್ಕಿ ಹೊಡೆದಿತ್ತು.
ಅಪಘಾತ ನಡೆದ ತಕ್ಷಣ ರಿಯಾಜ್ ಮತ್ತು ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದ ಆನಂದ್ ಶೆಟ್ಟಿ ಅವರನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದರೆ, ದುರದೃಷ್ಟವಶಾತ್ ಆನಂದ್ ಶೆಟ್ಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಸಾವನ್ನಪ್ಪಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಮಂಗಳೂರಿನ ಸತ್ರ ನ್ಯಾಯಾಲಯವು ರಿಯಾಜ್‌ಗೆ ಒಂದು ವರ್ಷದ ಸಾಧಾರಣ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರಶ್ನಿಸಿ ರಿಯಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.