ವೈದ್ಯಕೀಯ ಸೀಟು ಕೊಡಿಸುವ ನೆಪದಲ್ಲಿ ₹1.4 ಕೋಟಿ ವಂಚನೆ: ದಂಪತಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

“ಇದು ಕೇವಲ ಹಣ ವಸೂಲಾತಿಗೆ ಸಂಬಂಧಿಸಿದ ವಿವಾದವಲ್ಲ. ಮೇಲ್ನೋಟಕ್ಕೆ ನಂಬಿಕೆ ದ್ರೋಹ ಮತ್ತು ವಂಚನೆಯ ಅಪರಾಧದ ಅಂಶಗಳು ಪ್ರಕರಣದಲ್ಲಿವೆ” ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ.
Medical Doctor
Medical Doctor
Published on

ಪುತ್ರಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 1.4 ಕೋಟಿ ಪಡೆದು ವಂಚಿಸಿದ ಆರೋಪದಡಿ ದಂಪತಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ  ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಆರೋಪಿಗಳಾದ ಶಿಲ್ಪಾ ಎ ಮತ್ತು ಅವರ ಪತಿ ಪಿ ಕಿರಣ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದ್ದು, “ಇದು ಕೇವಲ ಹಣ ವಸೂಲಾತಿಗೆ ಸಂಬಂಧಿಸಿದ ವಿವಾದವಲ್ಲ. ಮೇಲ್ನೋಟಕ್ಕೆ ನಂಬಿಕೆ ದ್ರೋಹ ಮತ್ತು ವಂಚನೆಯ ಅಪರಾಧದ ಅಂಶಗಳು ಪ್ರಕರಣದಲ್ಲಿವೆ” ಎಂದು ಅಭಿಪ್ರಾಯಪಟ್ಟಿದೆ.

Justice M Nagaprasanna
Justice M Nagaprasanna

ಪ್ರಕರಣವು ಸಂಪೂರ್ಣವಾಗಿ ಸಿವಿಲ್‌ ಸ್ವರೂಪದ್ದಾಗಿದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ಹಣ ಒಳಗೊಂಡ ಪ್ರತಿಯೊಂದು ವ್ಯವಹಾರವೂ ಕೇವಲ ಆ ಕಾರಣದಿಂದ ತನ್ನ ಕ್ರಿಮಿನಲ್‌ ಸ್ವರೂಪ ಕಳೆದುಕೊಳ್ಳುವುದಿಲ್ಲ. ವ್ಯವಹಾರದ ಮೂಲವೇ ವಂಚನೆಯಿಂದ ಕೂಡಿತ್ತು ಎಂಬ ಆರೋಪವಿರುವಾಗ, ಅದನ್ನು ಸಿವಿಲ್‌ ವ್ಯವಹಾರ ಎಂಬ ನೆಪದಲ್ಲಿ ಕಾನೂನುಬದ್ಧ ಕ್ರಿಮಿನಲ್‌ ತನಿಖೆಯನ್ನು ಹತ್ತಿಕ್ಕಲು ಅವಕಾಶ ನೀಡಲಾಗದು” ಎಂದು ಪೀಠ ಹೇಳಿದೆ.

“ಇದೀಗ ಆರಂಭಿಕ ಹಂತದಲ್ಲಿಯೇ ಅಪರಾಧವನ್ನು ರದ್ದುಗೊಳಿಸುವುದು, ಮೇಲ್ನೋಟಕ್ಕೆ ಸಂಜ್ಞೇಯ ಅಪರಾಧಗಳನ್ನು ಬಹಿರಂಗಪಡಿಸುವ ಆರೋಪಗಳ ತನಿಖೆಯನ್ನು ಮೊಟಕುಗೊಳಿಸಿದಂತಾಗುತ್ತದೆ” ಎಂದು ಹೇಳಿದ ನ್ಯಾಯಾಲಯವು ಪ್ರಕರಣದ ತನಿಖೆ ಮುಂದುವರಿಸಲು ಪೊಲೀಸರಿಗೆ ಅನುಮತಿಸಿದೆ.

ಅರ್ಜಿದಾರರ ಪರ ವಕೀಲ ಆನಂದ ರಾಮಚಂದ್ರ ದಾಸ್‌ ಅವರು “ಇದು ಇಬ್ಬರ ನಡುವೆ ಮೂರು ವರ್ಷಗಳ ಹಿಂದೆ ನಡೆದಿದ್ದ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಸಿವಿಲ್‌ ವಿವಾದವಾಗಿದೆ” ಎಂದು ತಿಳಿಸಿದ್ದರು.

“ಹಣವನ್ನು ವಸೂಲಿ ಮಾಡಲು ಒತ್ತಡ ಹೇರುವ ಉದ್ದೇಶದಿಂದಲೇ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ ಎಂಬ ವಾದಕ್ಕೆ ಸಿವಿಲ್‌ ವಿವಾದ ಎಂಬ ಪದ ಬಳಕೆ ಮಾತ್ರ ರಕ್ಷಾಕವಚವಾಗುವುದಿಲ್ಲ. ಹಣ ಒಳಗೊಂಡ ಪ್ರತಿಯೊಂದು ವ್ಯವಹಾರವೂ ಆ ಕಾರಣಕ್ಕಾಗಿಯೇ ತನ್ನ ಕ್ರಿಮಿನಲ್‌ ಸ್ವರೂಪವನ್ನು ಕಳೆದುಕೊಳ್ಳುವುದಿಲ್ಲ”ಎಂದು ಪೀಠ ಸ್ಪಷ್ಟಪಡಿಸಿದೆ.

ಮಹಿಳಾ ದೂರುದಾರರಾದ ಸ್ಮಿತಾ ಪ್ರಸಾದ್‌, 2023ರ ಫೆಬ್ರವರಿಯಿಂದ ಡಿಸೆಂಬರ್‌ವರೆಗೆ ದಂಪತಿ ತಮ್ಮನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ತಮಗೆ ಪ್ರಭಾವಿ ಸಂಪರ್ಕಗಳಿದ್ದು, 2023ರಲ್ಲಿ ನೀಟ್‌ ಪರೀಕ್ಷೆ ಬರೆದಿದ್ದ ಮಹಿಳೆಯ ಮಗಳಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ದಂಪತಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳ ಬೇಡಿಕೆಯಂತೆ ಆರಂಭದಲ್ಲಿ ₹35 ಲಕ್ಷ ನಗದು ನೀಡಿದ್ದಾಗಿ ಮಹಿಳೆ ಹೇಳಿದ್ದಾರೆ. ನಂತರ ಐದು ಬ್ಯಾಂಕ್‌ ವಹಿವಾಟುಗಳ ಮೂಲಕ ಒಟ್ಟು 1.05 ಕೋಟಿ ವರ್ಗಾಯಿಸಿದ್ದು, ಆರೋಪಿಗಳಿಗೆ ನೀಡಿದ ಒಟ್ಟು ಮೊತ್ತ ₹1.4 ಕೋಟಿಗಳಾಗಿದೆ. ಪದೇ ಪದೇ ಭರವಸೆ ನೀಡಿದರೂ ವೈದ್ಯಕೀಯ ಸೀಟು ಸಿಗಲಿಲ್ಲ. 2026ರಲ್ಲಿದೂರು ದಾಖಲಿಸುವವರೆಗೂ ಹಣವನ್ನೂ ಹಿಂದಿರುಗಿಸಿಲ್ಲ’ ಎಂದು ಮಹಿಳೆ ಆರೋಪಿಸಿದ್ದಾರೆ.

Kannada Bar & Bench
kannada.barandbench.com