ಹಲವು ಅತ್ಯಾಚಾರ, ಕೊಲೆ ಮತ್ತು ದರೋಡೆ ಪ್ರಕರಣಗಳಲ್ಲಿ ಅಪರಾಧಿ ಎಂದು ಘೋಷಿತನಾಗಿರುವ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ವಿಧಿಸಿದ್ದ ಮರಣದಂಡನೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಕಾಯಂಗೊಳಿಸಿದೆ.
ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವಂತೆ ಕೋರಿ ಉಮೇಶ್ ರೆಡ್ಡಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪ್ರದೀಪ್ ಸಿಂಗ್ ಯೆರೂರ್ ನೇತೃತ್ವದ ವಿಭಾಗೀಯ ಪೀಠವು ತೀರ್ಪು ಪ್ರಕಟಿಸಿದೆ.
“ರಾಜ್ಯಪಾಲರು ಮತ್ತು ರಾಷ್ಟ್ರಪತಿ ಅವರು ಉಮೇಶ್ ರೆಡ್ಡಿಯ ಕ್ಷಮಾದಾನ ಅರ್ಜಿಯನ್ನು ಇತ್ಯರ್ಥಪಡಿಸುವುದನ್ನು ವಿಳಂಬ ಮಾಡಿದ್ದಾರೆ ಎಂಬ ವಾದವನ್ನು ಒಪ್ಪಲಾಗದು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಬೇಕಿದ್ದು, ಅಲ್ಲಿಯವರೆಗೆ ಗಲ್ಲು ಶಿಕ್ಷೆ ವಿಧಿಸಬಾರದು” ಎಂಬ ಕೋರಿಕೆ ಸಮ್ಮತಿಸಿರುವ ನ್ಯಾಯಾಲಯವು ಆರು ವಾರಗಳ ಕಾಲಾವಕಾಶವನ್ನು ಅರ್ಜಿದಾರರಿಗೆ ನೀಡಿದೆ.
ಕಳೆದ ಹತ್ತು ವರ್ಷಗಳಿಂದ ಉಮೇಶ್ ರೆಡ್ಡಿಯನ್ನು ಒಂಟಿಯಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇಡಲಾಗಿದೆ. ಅಲ್ಲದೇ ಕ್ಷಮಾದಾನ ಮನವಿಗೆ ಸಂಬಂಧಿಸಿದಂತೆ ವಿಳಂಬ ಧೋರಣೆ ಅನುಸರಿಸಲಾಗಿದೆ ಎಂದು ಉಮೇಶ್ ರೆಡ್ಡಿ ಪರ ವಕೀಲ ಬಿ ಎನ್ ಜಗದೀಶ್ ವಾದಿಸಿದ್ದರು.
1998ರ ಫೆಬ್ರವರಿ 28ರಂದು ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ 2006 ಅಕ್ಟೋಬರ್ 26ರಂದು ಬೆಂಗಳೂರಿನ ತ್ವರಿತಗತಿ ನ್ಯಾಯಾಲಯವು ರೆಡ್ಡಿಗೆ ಮರಣದಂಡನೆ ವಿಧಿಸಿತ್ತು. ಅಲ್ಲದೇ, 25 ಸಾವಿರ ರೂಪಾಯಿ ದಂಡ ವಿಧಿಸಿತ್ತು. 2007ರ ಅಕ್ಟೋಬರ್ 7ರಂದು ಕರ್ನಾಟಕ ಹೈಕೋರ್ಟ್ ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. 2011ರ ಫೆಬ್ರವರಿ 1ರಂದು ಸುಪ್ರೀಂ ಕೋರ್ಟ್ ಗಲ್ಲು ಎತ್ತಿ ಹಿಡಿದಿತ್ತು. ಆನಂತರ ಕ್ಷಮಾದಾನ ಕೋರಿ ಉಮೇಶ್ ರೆಡ್ಡಿ ತಾಯಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನು 2013ರ ಮೇ 12ರಂದು ರಾಷ್ಟ್ರಪತಿ ತಿರಸ್ಕರಿಸಿದ್ದರು.
ಪೊಲೀಸ್ ಪೇದೆಯಾಗಿದ್ದ ಚಿತ್ರದುರ್ಗದ ಉಮೇಶ್ ರೆಡ್ಡಿಯು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಅತ್ಯಾಚಾರ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅಪರಾಧಿ ಎಂದು ಘೋಷಿತನಾಗಿದ್ದಾನೆ.