ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅಶ್ಲೀಲ ಕಮೆಂಟ್:‌ ನಾಲ್ವರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ದೂರುದಾರಾದ ವಿಜಯಲಕ್ಷ್ಮಿ ವಿರುದ್ಧ ಅರ್ಜಿದಾರರು ಮಾಡಿರುವ ಕಮೆಂಟ್‌ಗಳು, ದೇಶದ ಮಹಿಳೆಯ ಬಗ್ಗೆ ಅವರ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದಿರುವ ಹೈಕೋರ್ಟ್‌.
Darshan & Vijayalakshmi
Darshan & Vijayalakshmi
Published on

ʼದಿ ಡೆವಿಲ್‌ʼ ಸಿನಿಮಾ ಪ್ರಚಾರ ಸಂದರ್ಭದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಆರೋಪ ಮೇಲೆ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.

ಪ್ರಕರಣ ಸಂಬಂಧದ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಬಿ ಚಂದ್ರಶೇಖರ್, ಪ್ರಶಾಂತ್ ತಲ್ವಾರ್, ನಿಂಗರಾಜ್ ಗುಲಾಪ್ಪ ತಲ್ವಾರ್ ಮತ್ತು ಜಿ ಬಿ ನಿತಿನ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

Justice S Rachaiah
Justice S Rachaiah

“ದೂರುದಾರೆ ವಿಜಯಲಕ್ಷ್ಮಿ ಅವರು 2025ರ ಡಿಸೆಂಬರ್‌ನಲ್ಲಿ ದರ್ಶನ್ ನಟನೆಯ ಡೆವಿಲ್ ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಆರೋಪಿಗಳು ಸಾಮಾಜಿಕ‌ ಜಾಲತಾಣದಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿ ಪೋಸ್ಟ್ ಹಾಕಿದ್ದಾರೆ. ಮಹಿಳೆಯ ವಿರುದ್ಧ ಇಂತಹ ಕಾಮೆಂಟ್‌ಗಳು ಹಾಕುವುದನ್ನು ಕ್ಷಮಿಸಲಾಗದು. ಪ್ರಕರಣದಲ್ಲಿ ದೂರುದಾರಾದ ವಿಜಯಲಕ್ಷ್ಮಿ ವಿರುದ್ಧ ಅರ್ಜಿದಾರರು ಮಾಡಿರುವ ಕಮೆಂಟ್‌ಗಳು, ದೇಶದ ಮಹಿಳೆಯ ಬಗ್ಗೆ ಅವರ ಮನಸ್ಥಿತಿಯನ್ನು ಸೂಚಿಸುತ್ತದೆ” ಎಂದು ಪೀಠ ಗಂಭೀರವಾಗಿ ನುಡಿದಿದೆ.

“ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನವು ಕಲ್ಪಿಸಿರುವ ಮೂಲಭೂತ ಹಕ್ಕು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅದಾಗ್ಯೂ, ಅಂತಹ ಪ್ರತಿಯೊಂದು ಹಕ್ಕಿಗೂ ಅದರದ್ದೇ ಆದ ಸಮಂಜಸವಾದ ನಿರ್ಬಂಧಗಳಿವೆ. ಅಂತಹ ನಿರ್ಬಂಧಗಳನ್ನು ಮೀರುವುದು ಅಥವಾ ಇನ್ನೊಬ್ಬ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸುವುದು ಖಂಡಿತವಾಗಿಯೂ ಅಪರಾಧವಾಗುತ್ತದೆ‌. ಅ ಅಪರಾಧವನ್ನು ಕಾನೂನಿನ ಪ್ರಕಾರ ವ್ಯವಹರಿಸಲಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೇ, “ಸಾಮಾಜಿಕ ಮಾಧ್ಯಮವು ಸಭ್ಯತೆ ಕಾಪಾಡಿಕೊಳ್ಳುವ ಮತ್ತು ಈ ದೇಶದ ನಾಗರಿಕರ ಮನಸ್ಸಿನಲ್ಲಿ ವಿಶ್ವಾಸ ತುಂಬುವ ಜವಾಬ್ದಾರಿಯನ್ನು ಹೊಂದಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಷಯಗಳ ಬಗ್ಗೆ ಕಮೆಂಟ್ ಮಾಡುವ ವ್ಯಕ್ತಿಗಳು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು” ಎಂದು ಪೀಠ ಸಲಹೆ ನೀಡಿದೆ.

Also Read
ನಟ ದರ್ಶನ್‌, ಪತ್ನಿ ವಿಜಯಲಕ್ಷ್ಮಿ ಜೀವನ, ರೇಣುಕಾಸ್ವಾಮಿ ಕೊಲೆ ಆಧಾರಿತ ʼಬಾಸ್‌ʼ ಚಿತ್ರ ಬಿಡುಗಡೆಗೆ ನ್ಯಾಯಾಲಯ ತಡೆ

“ಆಧಾರರಹಿತ, ಸುಳ್ಳು, ಕ್ಷುಲ್ಲಕ ಮತ್ತು ಬೆದರಿಸುವ ಸಂದೇಶಗಳನ್ನು ಕಳಿಸುವುದನ್ನು ಆ ಸಾಮಾಜಿಕ‌ ಜಾಲತಾಣದ ಕಂಪನಿಯೇ ನಿಯಂತ್ರಿಸಬೇಕಾಗುತ್ತದೆ, ಇಲ್ಲದಿದ್ದರೆ, ನ್ಯಾಯಾಲಯಗಳು ಸಾಮಾಜಿಕ ಮಾಧ್ಯಮದಲ್ಲಿ (ಸಾಮಾಜಿಕ ಜಾಲತಾಣ) ಈ ದೇಶದ ಯಾವುದೇ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವಂತಹ ಕಾಮೆಂಟ್‌ಗಳಲ್ಲಿ ಮಾಡಿದಾಗ ಮಧ್ಯಪ್ರವೇಶಿಸುವ ಮೂಲಕ ಈ ದೇಶದ ನಾಗರಿಕರ ವಿಶ್ವಾಸವನ್ನು ಭದ್ರಪಡಿಸಬೇಕಾಗುತ್ತದೆ. ನ್ಯಾಯಾಲಯಗಳು ಮೂಕ ಪ್ರೇಕ್ಷಕನಲ್ಲ.‌  ಹಸ್ತಕ್ಷೇಪ ಅಗತ್ಯವಿದ್ದಾಗಲೆಲ್ಲಾ ಹಿಂಜರಿಕೆಯಿಲ್ಲದೆ, ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾದ ವ್ಯಕ್ತಿಗಳು ಅಥವಾ ಸಾರ್ವಜನಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ನ್ಯಾಯಾಲಯಗಳು ಹೆಜ್ಜೆ ಹಾಕುತ್ತವೆ” ಎಂದು ಆರೋಪಿಗಳ ಅರ್ಜಿಗಳನ್ನು ತಿರಸ್ಕರಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳಿಂದ ನಂದಿಸಿ‌ ಪೋಸ್ಟ್‌ ಹಾಕಿದವರ ವಿರುದ್ಧ ನಗರ‌ ಪೋಲೀಸ್ ಆಯುಕ್ತರ ಕಚೇರಿಗೆ ತೆರಳಿ ದೂರು ನೀಡಿದ್ದರು. ವಿಜಯಲಕ್ಷ್ಮಿ ದೂರಿನ್ವಯ ಸೈಬರ್ ಅಪರಾಧ ಠಾಣಾ ಪೊಲೀಸರು  ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣಾಧೀನ ನ್ಯಾಯಾಲಯವು ಅವರಿಗೆ ಜಾಮೀನು ತಿರಸ್ಕರಿಸಿತ್ತು.

Attachment
PDF
Chandrashekar B Vs State of Karnataka
Preview
Attachment
PDF
Ningaraj Gulappa Talavar Vs State of Karnataka
Preview
Attachment
PDF
Nithin G B Vs State of Karnataka
Preview
Attachment
PDF
Prashanth Kareepa Talavar Vs State of Karnataka
Preview
Kannada Bar & Bench
kannada.barandbench.com