

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿಯ ಕೆ ಆರ್ ಪುರಂ ಶಾಸಕ ಬೈರತಿ ಬಸವರಾಜ್‌ಗೆ ವಿಚಾರಣಾಧೀನ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ರದ್ದುಪಡಿಸಲು ಸೋಮವಾರ ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
2026ರ ಮಾರ್ಚ್ 12ರಂದು ವಿಚಾರಣಾಧೀನ ನ್ಯಾಯಾಲಯ ಬೈರತಿ ಬಸವರಾಜ್‌ಗೆ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
2025ರ ಜುಲೈ 15ರಂದು ಶಿವು ತಾಯಿ ವಿಜಯಲಕ್ಷ್ಮಿ ಮನೆ ಮುಂದೆ ಅವರ ಕೊಲೆಯಾಗಿತ್ತು. ಆನಂತರ ವಿಜಯಲಕ್ಷ್ಮಿ ಅವರು ನೀಡಿದ ದೂರಿನ ಅನ್ವಯ ಬೆಂಗಳೂರಿನ ಭಾರತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂತರ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿತ್ತು. ಇದರ ಬೆನ್ನಿಗೇ ಸಿಐಡಿಯು ಬೈರತಿ ಬಸವರಾಜ್ ಮತ್ತು ಇತರ ವಿರುದ್ಧ ಕೋಕಾ ಅನ್ವಯಿಸಲು ಅನುಮತಿ ಕೋರಿತ್ತು. ಇದಕ್ಕೆ 2025ರ ಆಗಸ್ಟ್ 2ರಂದು ಅನುಮತಿ ನೀಡಲಾಗಿತ್ತು. ಆನಂತರ ಹೈಕೋರ್ಟ್ ಕೋಕಾ ರದ್ದುಪಡಿಸಿ, ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಆನಂತರ 2026ರ ಫೆಬ್ರವರಿ 12ರಂದು ಸಿಐಡಿಯು ಬಸವರಾಜ್ ಅವರನ್ನು ಬಂಧಿಸಿತ್ತು. ಆನಂತರ ವಿಚಾರಣಾಧೀನ ನ್ಯಾಯಾಲಯವು ಮಾರ್ಚ್‌ನಲ್ಲಿ ಬೈರತಿ ಬಸವರಾಜ್‌ಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಇಂದು ಹೈಕೋರ್ಟ್ ವಜಾಗೊಳಿಸಿದೆ.