ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳನ್ನು ಒಂದೇ ಕಡೆ ಇರಿಸಲು ಒಪ್ಪದ ಹೈಕೋರ್ಟ್‌; ಉತ್ತಮ ವಿ ಸಿ ಸೌಲಭ್ಯ ಒದಗಿಸಲು ಸೂಚನೆ

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ವಿವಿಧ ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ 11 ಆರೋಪಿಗಳು ತಮ್ಮನ್ನು ಒಂದೇ ಕಡೆ ಇರಿಸಲು ಮಾಡಿದ್ದ ಕೋರಿಕೆಯನ್ನು ತಿರಸ್ಕರಿಸಿದ ನ್ಯಾಯಪೀಠ.
Justice M Nagaprasanna and Karnataka HC
Justice M Nagaprasanna and Karnataka HC

ರಾಜ್ಯದ ಎಲ್ಲ ಜೈಲುಗಳಲ್ಲಿರುವ ಕೈದಿಗಳು ತಮ್ಮ ವಕೀಲರ ಜೊತೆ ಸಂಭಾಷಣೆ ನಡೆಸಲು ಅನುವಾಗುವಂತೆ ಉತ್ತಮ ವಿಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಬಿಜೆಪಿಯ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಸದ್ಯ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸುಳ್ಯ ತಾಲ್ಲೂಕಿನ ಎತ್ತಿನಹೊಳೆಯ ಅಬ್ದುಲ್‌ ಬಷೀರ್‌ ಸೇರಿದಂತೆ ಬಳ್ಳಾರಿ, ಧಾರವಾಡ, ಶಿವಮೊಗ್ಗ, ಮೈಸೂರು, ವಿಜಯಪುರ ಮತ್ತು ಕಲಬುರಗಿ ಜೈಲುಗಳಲ್ಲಿರುವ ಒಟ್ಟು 11 ಜನ ಆರೋಪಿಗಳು ತಮ್ಮನ್ನು ಒಂದೇ ಕಡೆ ಇರಿಸಲು ಕೋರಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳು ವಿಭಾಗದ ಐಜಿಪಿ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರ ಪರ ವಾದಿಸಿದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್ ಶೆಟ್ಟಿ, ಹೆಚ್ಚುವರಿ ಅಡ್ವೊಕೇಟ್ ಜನರಲ್‌ ವಿ ಜಿ ಭಾನುಪ್ರಕಾಶ್‌ ಮತ್ತು ಎನ್‌ಐಎ ಪರವಾಗಿ ವಾದ ಮಂಡಿಸಿದ್ದ ಪಿ ಪ್ರಸನ್ನಕುಮಾರ್ ಅರ್ಜಿದಾರರ ಮನವಿಯನ್ನು ತೀವ್ರವಾಗಿ ಆಕ್ಷೇಪಿಸಿದ್ದರು.

'ಅರ್ಜಿದಾರರನ್ನು ಒಂದೇ ಕಡೆ ಇರಿಸಿದಲ್ಲಿ ಅವರೆಲ್ಲಾ ಮತ್ತೊಂದು ಪಿತೂರಿ ನಡೆಸಲು ಸಿದ್ದತೆ ಮಾಡಿಕೊಳ್ಳಬಹುದು. ಅಂತೆಯೇ ಅವರು ಈಗಿರುವ ಜೈಲುಗಳಲ್ಲಿ, ಅವರ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ. ಅರ್ಜಿದಾರ ಕತೆಗಳನ್ನೆಲ್ಲಾ ನಂಬಬಾರದು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

'ರಾಜ್ಯದ ಎಲ್ಲಾ ಜೈಲುಗಳಲ್ಲಿ ವಿಡಿಯೊ ಕಾನ್ಪೆರೆನ್ಸ್ ವ್ಯವಸ್ಥೆಯಿದೆ. ಅವರಿಗೆ ಅಗತ್ಯವಿದ್ದ ಸಂದರ್ಭದಲ್ಲಿ ಅದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಬೆಂಗಳೂರಿನ ಕೇಂದ್ರ ಕಾರಾಗೃಹ ಕೇವಲ 4 ಸಾವಿರ ಕೈದಿಗಳ ಸಾಮರ್ಥ್ಯ ಹೊಂದಿದ್ದು ಇಲ್ಲೀಗ 5,200 ಕೈದಿಗಳನ್ನು ಇರಿಸಲಾಗಿದೆ. ಎಲ್ಲ ಅರ್ಜಿದಾರರನ್ನು ಬೆಂಗಳೂರಿನ ಕಾರಾಗೃಹಕ್ಕೆ ಸ್ಥಳಾಂತರ ಮಾಡುವುದು ಉತ್ತಮ ಬೆಳವಣಿಗೆಯಲ್ಲ’ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

‘ನಮಗೆಲ್ಲಾ ಜೀವ ಭಯ ಇದೆ. ಹಾಗಾಗಿ, ನಾವೆಲ್ಲಾ ನಮ್ಮ ವಕೀಲರ ಜೊತೆ ಚರ್ಚೆ ನಡೆಸಲು ನಮ್ಮನ್ನೆಲ್ಲಾ ಒಂದೇ ಜೈಲಿಗೆ ಸ್ಥಳಾಂತರ ಮಾಡಲು ನಿರ್ದೇಶಿಸಬೇಕು’ ಎಂಬ ಅರ್ಜಿದಾರರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ. ‘ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಲ್ಲ ಆರೋಪಿಗಳು ನಿಷೇಧಿತ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ. ಒಬ್ಬ ಕೈದಿ ಈಗಾಗಲೇ ತಪ್ಪು ಒಪ್ಪಿಕೊಂಡಿರುವುದರಿಂದ ಇನ್ನಿತರರನ್ನೂ ಒಂದೇ ಕಡೆ ಇರಿಸುವುದು ಸೂಕ್ತವಲ್ಲ’ ಎಂದು ನ್ಯಾಯಾಲಯ ತನ್ನ ಅದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.

'ವಕೀಲರು ಹಾಗೂ ಕುಟುಂಬದ ಸದಸ್ಯರೊಂದಿಗೆ ನಡೆಸುವ ಸಂಭಾಷಣೆ ಮತ್ತೊಬ್ಬರಿಗೆ ತಿಳಿಯದಂತೆ ಗೋಪ್ಯತೆ ಕಾಪಾಡಬೇಕು. ಇದಕ್ಕಾಗಿ ಅವರಿಗೆ ಹೆಡ್‌ ಫೋನ್‌ಗಳನ್ನು ಒದಗಿಸಬೇಕು. ಇಂತಹ ಸೌಲಭ್ಯಗಳು ಯಾವ ಜೈಲಿನಲ್ಲಿ ಇಲ್ಲವೊ ಅಲ್ಲೆಲ್ಲಾ ಈ ಸೌಲಭ್ಯ ಕಲ್ಪಿಸಲು ಸರ್ಕಾರ ಶೀಘ್ರವೇ ಮುಂದಾಗಬೇಕು. ಎಲ್ಲಿ ಇಂತಹ ವ್ಯವಸ್ಥೆ ಇದೆಯೊ ಅಲ್ಲಿ ದೋಷರಹಿತವಾ ಕಾರ್ಯನಿರ್ವಹಣೆಗೆ ನಿರ್ದೇಶಿಸಬೇಕು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಪ್ರಕರಣದ ಹಿನ್ನೆಲೆ: 2022ರ ಜುಲೈ 26ರಂದು ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಬೈಕ್‌ನಲ್ಲಿ ಬಂದ ಅಪರಿಚಿತರು ತಲವಾರಿನಿಂದ ಪ್ರವೀಣ್ ಅವರ ತಲೆಗೆ ಹೊಡೆದು ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲು ಒಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದರು.

Related Stories

No stories found.
Kannada Bar & Bench
kannada.barandbench.com