ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ, ಯುವಕನ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

"ಆರೋಪಿ ಮತ್ತು ದೂರುದಾರೆಯ ನಡುವಿನ ಸಂದೇಶಗಳು ಉತ್ತಮ ಅಭಿರುಚಿಯಿಂದ ಕೂಡಿಲ್ಲ. ಅವರ ನಡುವಿನ ಎಲ್ಲಾ ಕೃತ್ಯಗಳು ಸಮ್ಮತಿಯಿಂದ ಕೂಡಿವೆ ಎಂಬುದನ್ನು ಮಾತ್ರ ಸೂಚಿಸುತ್ತದೆ” ಎಂದಿರುವ ನ್ಯಾಯಾಲಯ.
Bumble app & Karnataka HC
Bumble app & Karnataka HC
Published on

ಡೇಟಿಂಗ್ ಆ್ಯಪ್ ಬಂಬಲ್‌ ಮೂಲಕ ಪರಿಚಿತರಾಗಿ ಆತ್ಮೀಯ ಸಂಬಂಧ ಬೆಳೆಸಿಕೊಂಡ ನಂತರ ಓಯೋ ರೂಮಿನಲ್ಲಿ ಪರಸ್ಪರ ಸಮ್ಮತಿಯ ಮೇಲೆ ಲೈಂಗಿಕ ಕ್ರಿಯೆ ನಡೆಸಿದ ಪ್ರಕರಣದಲ್ಲಿ ಯುವಕನೊಬ್ಬನ ವಿರುದ್ಧ ಮಹಿಳೆ ದಾಖಲಿಸಿದ್ದ ಅತ್ಯಾಚಾರ ದೂರಿಗೆ ಸಂಬಂಧಿಸಿದ ಎಫ್‌ಐಆರ್‌ ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್‌, ‘ಸಮ್ಮತಿ ಲೈಂಗಿಕ ಕ್ರಿಯೆ ಅಪರಾಧವಲ್ಲ’ ಎಂದು ತೀರ್ಪು ನೀಡಿದೆ.

ಅತ್ಯಾಚಾರ ಆರೋಪದ ಮೇಲೆ ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ ತಮ್ಮ ವಿರುದ್ಧ ಕೋನಣಕುಂಟೆ ಪೊಲೀಸ್‌ ಠಾಣೆಯಲ್ಲಿ ದಾಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಬನ್ನೇರುಘಟ್ಟದ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice M Nagaprasanna
Justice M Nagaprasanna

“ಪರಸ್ಪರ ಸಮ್ಮತಿಯಿಂದ ಹುಟ್ಟಿದ ಸಂಬಂಧ, ನಿರಾಶಾದಾಯಕವಾಗಿ ಅಂತ್ಯಗೊಂಡರೂ ಸಹ, ಸ್ಪಷ್ಟ ಪ್ರಕರಣಗಳನ್ನು ಹೊರತುಪಡಿಸಿ, ಕ್ರಿಮಿನಲ್ ಕಾನೂನಿನಡಿಯಲ್ಲಿ ಅಪರಾಧವಾಗಿ ಪರಿವರ್ತನೆಗೊಳ್ಳಲು ಸಾಧ್ಯವಿಲ್ಲ” ಎಂದಿದೆ.

ಮಹಿಳೆ ದೂರು, ತನಿಖೆ ನಡೆಸಿ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿ ಮತ್ತು ದೂರುದಾರರು ಮತ್ತು ಆರೋಪಿಗಳ ನಡುವಿನ ಸಂದೇಶದ (ಚಾಟ್‌) ವಿವರಗಳನ್ನು ಉಲ್ಲೇಖಿಸಿರುವ ಪೀಠವು "ಆರೋಪಿ ಮತ್ತು ದೂರುದಾರೆಯ ನಡುವಿನ ಸಂದೇಶಗಳು ಉತ್ತಮ ಅಭಿರುಚಿಯಿಂದ ಕೂಡಿಲ್ಲ. ಅವರ ನಡುವಿನ ಎಲ್ಲಾ ಕೃತ್ಯಗಳು ಸಮ್ಮತಿಯಿಂದ ಕೂಡಿವೆ ಎಂಬುದನ್ನು ಮಾತ್ರ ಸೂಚಿಸುತ್ತದೆ. ಪ್ರಸ್ತುತ ಅರ್ಜಿದಾರನ ವಿರುದ್ಧ ವಿಚಾರಣೆಗೆ ಅವಕಾಶ ನೀಡಿದರೆ ಕಾನೂನು ಪ್ರಕ್ರಿಯೆ ದುರುಪಯೋಗವಾಗುತ್ತದೆ” ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರ ಪರ ವಕೀಲ ಆತ್ರೇಯ ಶೇಖರ್‌ ಅವರು “ಅರ್ಜಿದಾರ ಮತ್ತು ದೂರುದಾರೆ ಡೇಟಿಂಗ್ ಆ್ಯಪ್‌ ಬಂಬಲ್‌ ಮೂಲಕ ಪರಿಚಿತರಾಗಿದ್ದರು. ಫೋಟೊ, ವಿಡಿಯೋ ವಿನಿಯಮಮಾಡಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಚಾಟಿಂಗ್‌ ಮಾಡಿದ್ದಾರೆ. ಆ ಫೋಟೊಗಳಿಂದ ದೂರುದಾರೆ ಮಾಡಿರುವ ಆರೋಪಗಳು ಶುದ್ಧ ಸುಳ್ಳು ಎಂಬುದು ದೃಢಪಡುತ್ತದೆ. ಈ ಸಂಗತಿಗಳನ್ನು ತನಿಖಾಧಿಕಾರಿಯು ಉದ್ದೇಶಪೂರ್ವವಾಗಿಯೇ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ" ಎಂದು ತಿಳಿಸಿದರು.

ಅಲ್ಲದೆ, "ಫೋಟೋ, ವಿಡಿಯೋ ಮತ್ತು ಇನ್‌ಸ್ಟಾಗ್ರಾಂ ಚಾಟಿಂಗ್‌ ವಿವರಗಳನ್ನು ಲಗತ್ತಿಸಿ ಮೋಮೊ ಸಲ್ಲಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಮತ್ತು ದೂರುದಾರೆಯ ನಡುವಿನ ಲೈಂಗಿಕ ಕ್ರಿಯೆಯು ಸಂಪೂರ್ಣವಾಗಿ ಸಮ್ಮತಿ ಮೇರೆಗೆ ನಡೆದಿದೆ. ಅವರು ಬಂಬಲ್‌ ಆ್ಯಪ್‌ನಲ್ಲಿ ಅವರು ಸುದೀರ್ಘ ಸಮಯದವರಗೆ ಸಕ್ರಿಯರಾಗಿದ್ದರು. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು" ಎಂದು ಕೋರಿದರು.

ಅರ್ಜಿದಾರರ ವಾದವನ್ನು ಅಲ್ಲಗೆಳೆದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ದೂರುದಾರೆಯ ಮೇಲೆ ಅರ್ಜಿದಾರ ಲೈಂಗಿಕ ದೌರ್ಜನ್ಯ ಎಸಗಿದ್ಧಾರೆ. ಅದನ್ನು ಸಮ್ಮತಿ ಸೆಕ್ಸ್‌ ಎಂದು ಪರಿಗಣಿಸಲಾಗದು. ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಕ್ರಿಯೆ ನಡೆಸುವುದು ಸಹ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಅಪರಾಧವಾಗುತ್ತದೆ. ಇದು ಅಂತಹ ಪ್ರಕರಣವಾಗಿರದಿದ್ದರೂ, ಸಮ್ಮತಿ ಸೆಕ್ಸ್‌ ನಡೆದಿದೆಯೇ ಅಥವಾ ಇಲ್ಲವೇ ಎಂಬುದು ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಯಲ್ಲಿ ತೀರ್ಮಾನವಾಗಬೇಕಿದೆ. ಆಧ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು” ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ದೂರುದಾರೆ ಮತ್ತು ಅರ್ಜಿದಾರರು ಡೇಟಿಂಗ್‌ ಆ್ಯಪ್‌ ಬಂಬಲ್‌ ಮುಖಾಂತರ ಪರಿಚಿತರಾಗಿದ್ದರು. ನಂತರ ವರ್ಷಗಳ ಕಾಲ ಸಂಪರ್ಕದಲ್ಲಿದ್ದು, ಇನ್ಸ್ಟಾಗ್ರಾಂ ಮೂಲಕ ಫೋಟೊ ಹಾಗೂ ಸಂದೇಶಗಳನ್ನು ಪರಸ್ಪರ ವಿನಿಯಮ ಮಾಡಿಕೊಂಡಿದ್ದರು. 2024ರ ಆಗಸ್ಟ್‌ 11ರಂದು ಭೇಟಿಯಾಗಲು ನಿರ್ಧರಿಸಿದ್ದರು. ಅದರಂತೆ ಅರ್ಜಿದಾರನು, ದೂರುದಾರೆಯನ್ನು ಆಕೆ ಅಪಾರ್ಟ್‌ಮೆಂಟ್‌ ಹೋಗಿ ಕರೆದುಕೊಂಡು ಬಂದಿದ್ದ.

ನಂತರ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿ, ಓಯೋ ಮುಖಾಂತರ ಬುಕ್‌ ಮಾಡಲಾದ ಹೋಟೆಲ್‌ಗೆ ತೆರಳಿದ್ದಾರೆ. ಅಲ್ಲಿ ದೂರುದಾರೆ ಆರೋಪಿಸಿರುವಂತೆ ಸಂಭೋಗ ನಡೆದಿದೆ. ರಾತ್ರಿ ಕಳೆದ ನಂತರ ಮರು ದಿನ ಅಂದರೆ ಆಗಸ್ಟ್‌ 13ರಂದು ಅರ್ಜಿದಾರ, ದೂರುದಾರೆಯನ್ನು ಆಕೆಯ ಅಪಾರ್ಟ್‌ಮೆಂಟ್‌ಗೆ ಆರೋಪಿ ಡ್ರಾಪ್‌ ಮಾಡಿದ್ದಾನೆ.

ಅದೇ ದಿನ ದೈಹಿಕ ಅಸ್ವಸ್ಥತೆಗೆ ಗುರಿಯಾದ ದೂರುದಾರೆ, ಖಾಸಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಆಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆಕೆಗೆ ತಿಳಿದುಬಂದಿದೆ ಕೂಡಲೇ ಆಕೆ ದೂರು ದಾಖಲಿಸಿ, ಸಂಭೋಗ ನಡೆಸಲು ನನಗೆ ಅರ್ಜಿದಾರ ಪುಸಲಾಯಿಸಿದ. ಕೂಡಲೇ ಅದಕ್ಕೆ ನಾನು ನಾನು ಸಮ್ಮತಿ ಸೂಚಿಸಲಿಲ್ಲ. ಅಲ್ಲದೆ, ಸಂಬಂಧ ಮುದುವರಿಸದಂತೆ ಸೂಚಿಸಿದೆ. ಆದರೂ ಪದೇ ಪದೇ ನಾನು ವ್ಯಕ್ತಪಡಿಸಿದ ಆಕ್ಷೇಪಣೆ ಮೀರಿ ಸಂಭೋಗ ನಡೆಸಿದ ಎಂದು ಆರೋಪಿಸಿದ್ದರು.

ಆ ದೂರು ಆಧರಿಸಿದ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 64 ಅಡಿಯಲ್ಲಿ ಅತ್ಯಾಚಾರ ಅಪರಾಧ ಸಂಬಂಧ ಎಫ್‌ಐಆರ್‌ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದರು. ಬಳಿಕ ತನಿಖೆ ನಡೆಸಿದ ಅಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ಎಫ್‌ಐರ್‌, ಎಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com