ಕೆಪಿಎಸ್‌ಸಿ ಅಧ್ಯಕ್ಷ ಸಾಹುಕಾರ್‌ ಅಮಾನತು: ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹೈಕೋರ್ಟ್‌ ನೋಟಿಸ್‌

ರಾಷ್ಟ್ರಪತಿ ಸಂವಿಧಾನದ 317ರ ಕ್ಲಾಸ್ (ಕಂಡಿಕೆ) 2ರ ಅಡಿಯಲ್ಲಿ ಸುಪ್ರೀಂಗೆ ಶಿಫಾರಸು ಕಳುಹಿಸುವ ಮುನ್ನವೇ, ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತುಗೊಳಿಸಲು ರಾಜ್ಯಪಾಲರಿಗೆ ಅಧಿಕಾರವಿತ್ತೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದಿರುವ ಹೈಕೋರ್ಟ್‌.
Karnataka HC and KPSC
Karnataka HC and KPSC
Published on

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿರುವ ಕ್ರಮ ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಿ ಜುಲೈ 13ರಂದು ರಾಜ್ಯಪಾಲರು ಹೊರಡಿಸಿರುವ ಆದೇಶ ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Suraj Govindraj
Justice Suraj Govindraj

ಪ್ರತಿವಾದಿಗಳಾದ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಹಾಗೂ ಕೆಪಿಎಸ್‌ಸಿ ಕಾಯರ್ದರ್ಶಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ಅರ್ಜಿ ವಿಚಾರಣೆ ವೇಳೆ ಶಿವಶಂಕರಪ್ಪ ಸಾಹುಕಾರ್ ಪರ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ವಾದ ಮಂಡಿಸಿ, ಸಂವಿಧಾನದ 317ನೇ ವಿಧಿ ಪ್ರಕಾರ, ರಾಷ್ಟ್ರಪತಿ, ಸುಪ್ರೀಂ ಕೋರ್ಟ್‌ ತನಿಖೆಗೆ ಆದೇಶಿಸಿದ ನಂತರವಷ್ಟೇ ಅಥವಾ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ಸಂದರ್ಭದಲ್ಲಿ ಮಾತ್ರವೇ ಅಧ್ಯಕ್ಷರನ್ನು ಅಮಾನತುಗೊಳಿಸಲು ಅವಕಾಶವಿರುತ್ತದೆ. ಆದರೆ, ಈ ಪ್ರಕರಣದಲ್ಲಿ ರಾಷ್ಟ್ರಪತಿಗಳು ಇನ್ನೂ ಸುಪ್ರೀಂ ಕೋರ್ಟ್‌ನಿಂದ ಯಾವುದೇ ಅಧಿಕೃತ ತನಿಖೆಗೆ ಆದೇಶಿಸಿಲ್ಲ. ಆದ್ದರಿಂದ, ರಾಷ್ಟ್ರಪತಿಗಳ ಉಲ್ಲೇಖಕ್ಕೂ ಮುನ್ನವೇ ಹೊರಡಿಸಲಾಗಿರುವ ರಾಜ್ಯಪಾಲರ ಈ ಅಮಾನತು ಆದೇಶ ಕಾನೂನುಬದ್ಧವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಮಾನತು ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.

ರಾಜ್ಯಪಾಲರ ಪರ ಹಾಜರಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು, ರಾಜ್ಯಪಾಲರು ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆಗಾಗಿ ರಾಷ್ಟ್ರಪತಿಗಳಿಗೆ ಅಧಿಕೃತವಾಗಿ ಕೋರಿಕೆ (ಶಿಫಾರಸು) ಕಳುಹಿಸಿಕೊಟ್ಟಿದ್ದಾರೆ. ರಾಷ್ಟ್ರಪತಿಗಳಿಗೆ ಒಮ್ಮೆ ಶಿಫಾರಸು ಕಳುಹಿಸಿದ ನಂತರ, ತನಿಖೆ ಬಾಕಿ ಇರುವ ಅವಧಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಮಾನತುಪಡಿಸುವ ಸಂಪೂರ್ಣ ಅಧಿಕಾರ ರಾಜ್ಯಪಾಲರಿಗೆ ಇರುತ್ತದೆ ಎಂದು ತನಿಖಾ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಹಾಲಿ ಪ್ರಕರಣದಲ್ಲಿ ರಾಷ್ಟ್ರಪತಿಗಳು ಸಂವಿಧಾನದ 317ರ ಕ್ಲಾಸ್ (ಕಂಡಿಕೆ) 2ರ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಶಿಫಾರಸು ಕಳುಹಿಸುವ ಮುನ್ನವೇ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ಅಮಾನತುಗೊಳಿಸಲು ಕರ್ನಾಟಕ ರಾಜ್ಯಪಾಲರಿಗೆ ಅಧಿಕಾರವಿತ್ತೇ ಅಥವಾ ಇಲ್ಲವೇ ಎಂಬದನ್ನು ಪರಿಶೀಲಿಸಬೇಕಿದೆ. ಆದ್ದರಿಂದ, ಎಲ್ಲ ವಕೀಲರು ತಾವು ಈ ವಿಷಯದಲ್ಲಿ ಅವಲಂಬಿತವಾಗಿರುವ ತೀರ್ಪುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದ ಪೀಠವು ಅರ್ಜಿ ವಿಚಾರಣೆ ಮುಂದೂಡಿತು.

ರಾಜೀನಾಮೆ ನಿರ್ಣಯ: ತಡೆ ವಿಸ್ತರಿಸಿದ ಹೈಕೋರ್ಟ್‌

ಪುತ್ರಿಯ ಅಕ್ರಮ ನೇಮಕಾತಿಗೆ ಸಹಕರಿಸುವ ಮೂಲಕ ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ ಎಸಗಿದ ಆರೋಪದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ (ಸದ್ಯ ಅಮಾನತಿನಲ್ಲಿರುವ) ತಕ್ಷಣ ರಾಜೀನಾಮೆ ಕೊಟ್ಟು, ಹುದ್ದೆ ತ್ಯಜಿಸಬೇಕು ಎಂದು ಆಯೋಗದ ಸಭೆಯಲ್ಲಿ ಕೈಗೊಳ್ಳಲಾಗಿದ್ದ ಹೆಚ್ಚುವರಿ ನಿರ್ಣಯಕ್ಕೆ ಸೀಮಿತವಾಗಿ ಹೈಕೋರ್ಟ್ ಮಧ್ಯಂತರ ತಡೆ ವಿಸ್ತರಿಸಿದೆ.

ಈ ವಿಚಾರವಾಗಿ 2026ರ ಜೂನ್ 19ರಂದು ಆಯೋಗದ ಸಭೆಯಲ್ಲಿ ಕೈಗೊಂಡ ನಿರ್ಣಯ ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಕೆಪಿಎಸ್‌ಸಿ ಸಭೆಯಲ್ಲಿ ಜೂನ್ 19ರ ಕೆಪಿಎಸ್‌ಸಿ ಸಭೆಯಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯದ ಜಾರಿಗೆ ಜುಲೈ 10ರಂದು ಈ ನ್ಯಾಯಾಲಯ ತಡೆ ನೀಡಿತ್ತು. ಈ ನಿರ್ಣಯವು ವಾಸ್ತವವಾಗಿ 13 ಕಾರ್ಯಸೂಚಿ (ಅಜೆಂಡಾ) ಅಂಶಗಳನ್ನು ಒಳಗೊಂಡಿದ್ದು, ಹೆಚ್ಚುವರಿ ಕಾರ್ಯಸೂಚಿಯು ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸುವ ನಿರ್ಣಯಕ್ಕೆ ಸಂಬಂಧಿಸಿದ್ದಾಗಿದೆ. ನಿರ್ಣಯ 1ರಿಂದ 13ರವರೆಗಿನ ಅಜೆಂಡಾಗಳಿಗೆ ಸಂಬಂಧಿಸಿದಂತೆ, ಅರ್ಜಿದಾರರೇ ಸಭೆಯಿಂದ ಸ್ವತಃ ಹಿಂದೆ ಸರಿದಿದ್ದು, ಆ ಅಂಶಗಳನ್ನು ಪರಿಗಣಿಸಲು ಸಭೆಯನ್ನು ಮುಂದುವರಿಸಬಹುದು ಎಂದು ನಿರ್ದೇಶಿಸಿದ್ದರು. ಆದ್ದರಿಂದ, ಜೂನ್ 19ರ ನಿರ್ಣಯಕ್ಕೆ ನೀಡಲಾದ ತಡೆಯು ಕೇವಲ ರಾಜೀನಾಮೆಗೆ ಸಂಬಂಧಿಸಿದ ಹೆಚ್ಚುವರಿ ವಿಚಯಕ್ಕೆ ಸೀಮಿತವಾಗಿ ಮುಂದುವರಿಯಲಿದ್ದು, 1 ರಿಂದ 13 ರವರೆಗಿನ ಅಜೆಂಡಾಗಳಿಗೆ ತಡೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಇದೇ ವೇಳೆ, ಮುಂದಿನ ಕೆಪಿಎಸ್‌ಸಿ ಸಭೆಯಲ್ಲಿ ಪ್ರತಿವಾದಿಗಳು ಹೆಚ್ಚುವರಿ ಕಾರ್ಯಸೂಚಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಕಾಯ್ದೆ-1959ರ ಸೆಕ್ಷನ್ 7ರ ಅನುಸಾರ ಸಭೆಯ ಮುಂದೆ ಮಂಡಿಸಬಹುದಾಗಿದೆ. ಅದಾಗ್ಯೂ, ಅಧ್ಯಕ್ಷರ ರಾಜೀನಾಮೆಗೆ ಸಂಬಂಧಿಸಿದ ಹೆಚ್ಚುವರಿ ಅಜೆಂಡಾ ಕುರಿತು ಈ ನ್ಯಾಯಾಲಯದ ಅನುಮತಿಯಿಲ್ಲದೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ತಿಳಿಸಿದ ಪೀಠ, ಅರ್ಜಿ ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿತು.

Kannada Bar & Bench
kannada.barandbench.com