ಆರೋಪಪಟ್ಟಿ ಸಲ್ಲಿಕೆಯ ಬಳಿಕವೂ ನಿರೀಕ್ಷಣಾ ಜಾಮೀನು ಮಂಜೂರು ಮುಂದುವರಿಯಲಿದೆ: ಹೈಕೋರ್ಟ್‌

ನಿರೀಕ್ಷಣಾ ಜಾಮೀನಿದ್ದರೂ ಬಂಧನಕ್ಕೆ ಆದೇಶಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
High Court of Karnataka, Dharwad Bench
High Court of Karnataka, Dharwad Bench
Published on

ಆರೋಪಿಗೆ ಮಂಜೂರಾದ ನಿರೀಕ್ಷಣಾ ಜಾಮೀನು ಆರೋಪ ಪಟ್ಟಿ ಸಲ್ಲಿಕೆಯ ಬಳಿಕವೂ ಮುಂದುವರೆಯಲಿದೆ. ಒಮ್ಮೆ ಮಂಜೂರಾದ ನಿರೀಕ್ಷಣಾ ಜಾಮೀನು ರದ್ದಾಗುವುದಕ್ಕೂ ಮುನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವುದಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಆದೇಶಿಸಿದೆ.

ನಿರೀಕ್ಷಣಾ ಜಾಮೀನಿದ್ದರೂ ಬಂಧನಕ್ಕೆ ಆದೇಶಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿಜಯಕುಮಾರ್‌ ಎ.ಪಾಟೀಲ್‌ ಅವರ ಏಕಸದಸ್ಯ ಪೀಠ ನಡೆಸಿತು.

Vijaykumar Adagouda Patil
Vijaykumar Adagouda Patil

ಕ್ರಿಮಿನಲ್‌ ಪ್ರಕರಣದಲ್ಲಿ ಒಮ್ಮೆ ಮಂಜೂರಾದ ನಿರೀಕ್ಷಣಾ ಜಾಮೀನು, ಪ್ರಕರಣದ ತನಿಖೆ ಮುಗಿದು ಆರೋಪಪಟ್ಟಿ ಸಲ್ಲಿಕೆಯಾದ ಬಳಿಕವೂ ಮುಂದುವರೆಯಲಿದೆ. ನಿರೀಕ್ಷಣಾ ಜಾಮೀನು ಮಂಜೂರಾಗಿದ್ದರೂ, ರಾಜ್ಯ ಸರ್ಕಾರ ಇಲ್ಲವೇ, ಸಂತ್ರಸ್ತೆಯ ಪರವಾಗಿ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸದಿದ್ದರೂ, ಆರೋಪಿಯನ್ನು ವಶಕ್ಕೆ ಪಡೆಯುವಂತೆ ನಿರ್ದೇಶಿಸಿರುವ ವಿಚಾರಣಾಧೀನ ನ್ಯಾಯಾಲಯದ ಕ್ರಮ ಕಾನೂನುಬಾಹಿರ ಎಂದು ಪೀಠ ಹೇಳಿದೆ.

ಆರೋಪಿಗೆ ಈಗಾಗಲೇ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಆದರೆ, ಈವರೆರಗೂ ಜಾಮೀನಿನ ಷರತ್ತು ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಅಲ್ಲದೇ, ರಾಜ್ಯ ಸರ್ಕಾರ ಅಥವಾ ಸಂತ್ರಸ್ತೆಯ ಪರವಾಗಿ ಜಾಮೀನು ರದ್ದುಪಡಿಸುವ ಅರ್ಜಿ ಸಲ್ಲಿಕೆಯಾಗಿಲ್ಲ. ಆದ್ದರಿಂದ, ನಿರೀಕ್ಷಣಾ ಜಾಮೀನು ರದ್ದುಗೊಳಿಸದೇ ಆರೋಪಿಯನ್ನು ಬಂಧನಕ್ಕೆ ಕಳುಹಿಸಿರುವುದು ಕಾನೂನುಬಾಹಿರ ಎಂದು ತಿಳಿಸಿದೆ.

ಆರೋಪಿಯ ವಿರುದ್ಧ ಆರೋಪ ಪಟ್ಟಿಯಲ್ಲಿಕೆಯಾಗಿದೆ ಎಂಬ ಕಾರಣಕ್ಕೆ ಆರೋಪಿಯು ಶರಣಾಗಿ ನಿಯಮಿತ ಜಾಮೀನು ಪಡೆಯಬೇಕೆಂಬ ಅವಶ್ಯಕತೆ ಇಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಒಮ್ಮೆ ಮಂಜೂರಾದ ನಿರೀಕ್ಷಣಾ ಜಾಮೀನು ವಿಚಾರಣೆ ಪೂರ್ಣಗೊಳ್ಳುವವರೆಗೂ ಮುಂದುವರಿಯಲಿದೆ ಎಂದಿದೆ.

ಆದ್ದರಿಂದ, ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಿದ್ದು, ಆರೋಪಿಯನ್ನು ಬಿಡುಗಡೆ ಮಾಡಬೇಕು. ನಿಯಮಿತ ಜಾಮೀನು ಅರ್ಜಿಯನ್ನು ಕಾನೂನು ಪ್ರಕಾರ ಮರುಪರಿಶೀಲಿಸಬೇಕು ಎಂದು ಎಂದು ಪೀಠ ಅರ್ಜಿ ಪುರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಆರೋಪಿಯ ವಿರುದ್ಧ ಅಪ್ರಾಪ್ತರ ಮೇಲೆನ ಲೈಂಗಿಕ ಕಿರುಕುಳ ಆರೋಪ ಸಂಬಂಧ ಪೋಕ್ಸೊ ಕಾಯಿದೆ ಸೆಕ್ಷನ್‌ 12 ಮತ್ತು  ಬಿಎನ್‌ಎಸ್‌ ಸೆಕ್ಷನ್ 78(2)  ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಉತ್ತರ ಕನ್ನಡ ಜಿಲ್ಲೆಯ ಕಾರವಾದ ವಿಶೇಷ (ತ್ವರಿತಗತಿ) ನ್ಯಾಯಾಲಯವು  ಆರೋಪಿಗೆ 2026ರ ಫೆಬ್ರವರಿ 26ರಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ತನಿಖೆ ಪೂರ್ಣಗೊಳಿಸಿದ್ದ ತನಿಖಾಧಿಕಾರಿಯು ಆರೋಪಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣ ಸಂಬಂಧ ಆರೋಪಿಗೆ ಸಮನ್ಸ್‌ ಜಾರಿಯಾಗಿತ್ತು. ಇದರಿಂದ  ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ನಿಯಮಿತ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಪ್ರತಿವಾದಿ ಸರ್ಕಾರ ಮತ್ತು ಸಂತ್ರಸ್ತೆಯ ಪರ ವಕೀಲರಿಗೆ ನೋಟಿಸ್‌ ಜಾರಿಯಾಗಿತ್ತು.

ಈ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಂತ್ರಸ್ತೆಯ ಪರ ತಾಯಿ, ಆರೋಪಿ ಪ್ರಕರಣ ವಿಚಾರಣಾ ಹಂತದಲ್ಲಿದ್ದರೂ, ಸಂತ್ರಸ್ತೆಯನ್ನು ಹಿಂಬಾಲಿಸುತ್ತಿದ್ದು, ಅವರ ನಡೆಯಿಂದಾಗಿ ಸಂತ್ರಸ್ತೆ ಕಾಲೇಜಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದರು. ಇದನ್ನು ಆರೋಪಿ ಅಲ್ಲಗಳೆದಿದ್ದನು. ಅದಾಗ್ಯೂ, ವಿಶೇಷ ನ್ಯಾಯಾಲಯ ಆರೋಪಿಯನ್ನು ಬಂಧಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com