ಕೆಪಿಎಸ್‌ಸಿ ಅಧ್ಯಕ್ಷ ಸಾಹುಕಾರ್‌ ಸಂಬಳ ₹40,000 ಎಂದು ಕೇಳಿ ಆಘಾತ ವ್ಯಕ್ತಪಡಿಸಿದ ಹೈಕೋರ್ಟ್‌

ರಾಜ್ಯ ಸರ್ಕಾರವು ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವರ್ಗಾಯಿಸಲು ಯಾವುದೇ ಪ್ರಯತ್ನ ಮಾಡಿದರೆ, ಅರ್ಜಿದಾರರು  ಈ ವಿಷಯವನ್ನು ಮತ್ತೆ ಪೀಠದ‌ ಮುಂದಿಡಲು ಸ್ವಾತಂತ್ರ್ಯ ಹೊಂದಿದ್ದಾರೆ ಎಂದಿರುವ ನ್ಯಾಯಾಲಯ.
Karnataka HC and KPSC
Karnataka HC and KPSC
Published on

ಸರ್ಕಾರಿ ನೌಕರಿಯಾದ ಕೈಗಾರಿಕಾ ವಿಸ್ತರಣಾಧಿಕಾರಿ ಉದ್ಯೋಗಕ್ಕೆ ಅಕ್ರಮವಾಗಿ ನೇಮಕವಾಗಲು ಸುಳ್ಳು ಜಾತಿ ಹಾಗೂ ಆದಾಯ ಪ್ರಮಾಣ‌ಪತ್ರ ಸಲ್ಲಿಸಿ ವಂಚಿಸಿದ‌ ಆರೋಪದ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಎಸ್. ಸಾಹುಕಾರ್  ಮೇಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಕೋರಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಸಿಬಿಐಗೆ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಅಖಲಿ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆರ್. ಕಾಂತಕುಮಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬಿಐ ಮತ್ತು ವಿಧಾನಸೌಧ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದೆ.

Justice M Nagaprasanna
Justice M Nagaprasanna

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಕೆಪಿಎಸ್‌ಸಿ ಅಧ್ಯಕ್ಷರ ಸಂಬಳ ₹40,000ವೇ, ಇದು ಆಘಾತಕಾರಿ ವಿಚಾರ? ರಾಜ್ಯದ ಯುವಕರು, ಅರ್ಹತೆ ಇರುವವರು ಯಾತನೆ ಅನುಭವಿಸುತ್ತಿದ್ದಾರೆ” ಎಂದಿತು.

ರಾಜ್ಯ ಸರ್ಕಾರವು ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವರ್ಗಾಯಿಸಲು ಯಾವುದೇ ಪ್ರಯತ್ನ ಮಾಡಿದರೆ, ಅರ್ಜಿದಾರರು  ಈ ವಿಷಯವನ್ನು ಮತ್ತೆ ಪೀಠದ‌ ಮುಂದಿಡಲು ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಪೀಠ ತಿಳಿಸಿದೆ.

ಪ್ರಕರಣದಲ್ಲಿ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿರುವ‌ ಕೆಪಿಎಸ್‌ಸಿ ಅಧ್ಯಕ್ಷರು ಕೇವಲ ಆಯ್ಕೆ ಪ್ರಕ್ರಿಯೆಯ ಅಧ್ಯಕ್ಷತೆ ವಹಿಸಿಲ್ಲ. ಆದರೆ, ತಮ್ಮ ಇಬ್ಬರು ಪುತ್ರಿಯರ ಆಯ್ಕೆಗೆ ಅನುವು ಮಾಡಿಕೊಡುವ ರೀತಿಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ವತಃ ಭಾಗವಹಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.‌ ಸುಮಾ ಹಿಂದುಳಿದ ವರ್ಗಗಳ 3ಬಿ ಅಡಿಯಲ್ಲಿ ಮೀಸಲಾತಿಯ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಲಾಗುತ್ತದೆ. 3ಬಿ ಅಡಿಯಲ್ಲಿ ಅರ್ಹತೆಯು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಅಧ್ಯಕ್ಷರ ಆದಾಯವು ವಾರ್ಷಿಕ ಕೇವಲ‌ ₹40 ಸಾವಿರ ಬಹಿರಂಗಪಡಿಸುತ್ತದೆ. ಇದು ಹಿಂದುಳಿದ ವರ್ಗದ ಅಡಿಯಲ್ಲಿ ಹಕ್ಕು ಪಡೆಯಲು ಅನುಕೂಲ‌‌ ಮಾಡಿಕೊಡುತ್ತದೆ. ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರು ಅತ್ಯಂತ ಕಡಿಮೆ ಆದಾಯ ಹೊಂದಿದ್ದಾರೆ ಎಂಬ ಅಂಶಕ್ಕಿಂತ ಹೆಚ್ಚಿನ ಆತಂಕಕಾರಿಯ ಅಂಶ‌ ಮತ್ತೊಂದಿಲ್ಲ‌ ಎಂದು ಪೀಠ ಆದೇಶದಲ್ಲಿ ಕಟುವಾಗಿ ನುಡಿದಿದೆ.

ಹಾಗೆಯೇ, ಈ ಅಂಶವು  ಕೇವಲ ಅಪನಂಬಿಕೆಯನ್ನು ಆಹ್ವಾನಿಸುವುದಿಲ್ಲ. ಬದಲಿಗೆ ‌ಇಡೀ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ಸಾಂಸ್ಥಿಕ ಪರಿಶುದ್ಧತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸಾಂವಿಧಾನಿಕ ಸಂಸ್ಥೆಗಳ  ನ್ಯಾಯಸಮ್ಮತತೆ ಹಾಗೂ ಅದರ‌ ಮೇಲಿನ ಅಚಲ ಸಾರ್ವಜನಿಕ ವಿಶ್ವಾಸ ಹಾಗೂ ನಂಬಿಕೆಯ ಮೇಲಿನ  ಯಾವುದೇ ಆರೋಪವು ಗಂಭೀರ ಪರೀಕ್ಷೆಯನ್ನು  ಬಯಸುತ್ತದೆ ಎಂದು ಪೀಠ ಹೇಳಿದೆ.

ಅರ್ಜಿದಾರರ ಪರ ವಕೀಲರಾದ ವೆಂಕಟೇಶ ದಳವಾಯಿ ಮತ್ತು ಗಿರೀಶ್‌ ಭಾರದ್ವಾಜ್‌ ಅವರು, ಪ್ರಕರಣ ಸಂಬಂಧ ಅರ್ಜಿದಾರರು ಜುಲೈ 3ರಂದು ಸಲ್ಲಿಸಲಾದ ಹಿಂದಿನ ದೂರನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸಲಾಯಿತು. ಆದರೆ, ಅದು ಎಲ್‌ಪಿಟಿ  ವರದಿಯೊಂದಿಗೆ ಕೊನೆಗೊಂಡಿತು.  ನಂತರ ಆ ಮಾಹಿತಿಯನ್ನು ಕೆಪಿಎಸ್‌ಸಿಯೊಂದಿಗೆ ಹಂಚಿಕೊಳ್ಳಲಾಯಿತು. ಇದಾದ ಬಳಿಕ ಕೆಪಿಎಸ್‌ಸಿ ಸ್ವತಃ ದೂರು ದಾಖಲಿಸಿದೆ. ಅದರನ್ವಯ  ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 336(2), 336(3) ಮತ್ತು 340(2) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಎಫ್ಐಆರ್ ದಾಖಲಾಗಿಸಲಾಗಿದೆ.‌ ಇದು ಸತ್ಯಾಂಶ ತಿಳಿಯದೆ ಮುಟ್ಟದೆ ಕಣ್ಣೊರೆಸುವ ತಂತ್ರವಾಗಿದೆ. ಆದ್ದರಿಂದ, ತನಿಖೆಯನ್ನು ರಾಜ್ಯ ಸರ್ಕಾರದ ಸುಪರ್ದಿಯಿಂದ ಸಿಬಿಐಗೆ ವಹಿಸುವುದು ಅರ್ಹವಾಗಿದೆ‌ ಎಂದು ಒತ್ತಾಯಿಸುತ್ತಿದ್ದಾರೆ. ಕೆಪಿಎಸ್‌ಸಿ ವಿವಾಸಗಳ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು. ಸಾರ್ವಜನಿಕ ಕಳವಳವನ್ನು ನಿವಾರಿಸುವ ಪ್ರಯತ್ನದಲ್ಲಿ ರಾಜ್ಯವು ಎಸ್‌ಐಟಿ  ರಚಿಸಲು ಪ್ರಯತ್ನಿಸಬಹುದು ಎಂದು ಹೇಳಲಾಗುತ್ತಿದೆ.‌ ಈ‌ ಎಲ್ಲಾ ಅಂಶ ಪರಿಗಣಿಸಿ ಸರ್ಕಾರ ಹಾಗೂ ಸಿಬಿಐಗೆ ನೋಟಿಸ್ ಜಾರಿಗೊಳಿಸಲಾಗುತ್ತಿದೆ ಎಂದು‌ ಪೀಠ ಹೇಳಿದೆ.

ಪ್ರಕರಣ ಸಂಬಂಧ ನಾಲ್ಕು ದೂರುಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ, ಕೆಪಿಎಸ್‌ಸಿ  ಸಹಾಯಕ ಕಾರ್ಯದರ್ಶಿ ನೀಡಿರುವ ದೂರು ಆಧರಿಸಿ ವಿಧಾನಸೌಧ ಠಾಣಾ‌ ಪೊಲೀಸರು ಜನವರಿ 13ರಂದು ಖಾಸಗಿ ವ್ಯಕ್ತಿಯಾದ ಸುಮಾ ಎಸ್. ಸಾಹುಕಾರ್ ವಿರುದ್ಧ ಮಾತ್ರ ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿಯ ನಿಯಮಗಳನ್ನು ಸೇರಿಸಿಲ್ಲ. ‌ಅಪರಾಧಿಕ ‌ಒಳಸಂಚು ಅಪರಾಧ ಸೇರಿಸಿಲ್ಲ. ಯಾವುದೇ ಸರ್ಕಾರಿ ಸೇವಕರನ್ನು ಆರೋಪಿಯನ್ನಾಗಿ ಮಾಡಿಲ್ಲ. ಆದ್ದರಿಂದ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com