

ನಕಲಿ ವಿಲ್‌ಗೆ ಸಾಕ್ಷಿಯಾಗಿ ಸಹಿ ಹಾಕಿದ ವ್ಯಕ್ತಿಯೊಬ್ಬರನ್ನು ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದ ದಿನವೇ ಬಂಧಿಸಿದ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸರ ಕ್ರಮಕ್ಕೆ ಗುರುವಾರ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ, ತನಿಖಾಧಿಕಾರಿ, ಅವರ ಮೇಲಧಿಕಾರಿಗಳಾದ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಮತ್ತು ಸಹಾಯಕ ಪೊಲೀಸ್ ಆಯುಕ್ತರಿಗೆ (ಎಸಿಪಿ) ₹3 ಲಕ್ಷ ದಂಡ ವಿಧಿಸಿದೆ. ಈ ಮೊತ್ತವನ್ನು ವೈಯಕ್ತಿಕ ಹಣದಿಂದ ಅರ್ಜಿದಾರರಿಗೆ ಪಾವತಿಸಬೇಕು ಎಂದು ನಿರ್ದೇಶಿಸಿದೆ.
ಬೆಂಗಳೂರಿನ ಕೆ ಎನ್ ಮೋಹನ್ ರೆಡ್ಡಿ ಅವರು ತಮ್ಮ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರನ್ನು ಅಕ್ರಮವಾಗಿ ಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ₹3 ಲಕ್ಷ ದಂಡ ವಿಧಿಸುವುದರ ಜೊತೆಗೆ ಇಲಾಖಾ ತನಿಖೆಗೂ ನಿರ್ದೇಶಿಸಿರುವ ಪೀಠವು ಈ “ಪೊಲೀಸ್ ರಾಜ್ ವ್ಯವಸ್ಥೆಯನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಇದಕ್ಕೆ ಕಠಿಣ ಕ್ರಮದ ಮೂಲಕ ತಡೆಯೊಡ್ಡಬೇಕಾಗುತ್ತದೆ” ಎಂದು ಪೊಲೀಸರಿಗೆ ಕಟು ಎಚ್ಚರಿಕೆ ನೀಡಿದೆ.
“ಪ್ರಕರಣವು ಸಿವಿಲ್ ಸ್ವರೂಪದ್ದಾಗಿದ್ದು, ಅರ್ಜಿದಾರರು ನಕಲಿ ವಿಲ್ ಎನ್ನಲಾದ ದಾಖಲೆಗೆ ಸಾಕ್ಷಿಯಾಗಿ ಸಹಿ ಹಾಕಿದ್ದಾರೆ. ಇದಕ್ಕಾಗಿ ಅವರನ್ನು ಪ್ರಕರಣದಲ್ಲಿ ಎರಡನೇ ಆರೋಪಿಯನ್ನಾಗಿಸಲಾಗಿದೆ. ಇದರಲ್ಲಿ ಆಗಸ್ಟ್ 25ರಂದು ನೋಟಿಸ್ ನೀಡಿದ್ದ ಪೊಲೀಸರು ಆಗಸ್ಟ್ 27ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ಆಗಸ್ಟ್ 25ರಂದೇ ಮೋಹನ್ ರೆಡ್ಡಿ ಅವರನ್ನು ಬಂಧಿಸಿದ್ದರು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ಇಂದು ಹೈಕೋರ್ಟ್ ತಡೆ ನೀಡಿದೆ.
ಇದಕ್ಕೂ ಮುನ್ನ, ಕಳೆದ ಬಾರಿಯ ನಿರ್ದೇಶನದಂತೆ ನ್ಯಾಯಾಲಯದ ಮುಂದೆ ವಿಚಾರಣೆಗೆ ಖುದ್ದು ಹಾಜರಾಗಿದ್ದ ವೈಟ್‌ಫೀಲ್ಡ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಅವರನ್ನು ಪೀಠವು ತೀವ್ರ ತರಾಟೆಗೆ ಗುರಿಪಡಿಸಿತು. “ಮೋಹನ್ ರೆಡ್ಡಿಯನ್ನು ಬಂಧಿಸಿದ್ದೇಕೆ? ಹೇಗೆ? ಆರೋಪಿ ತನಿಖೆಗೆ ಸಹಕರಿಸದೇ ಇದ್ದರೆ ಬಂಧಿಸಬಹುದು. ಆದರೆ, ನೋಟಿಸ್ ನೀಡಿದ ದಿನವೇ ಬಂಧಿಸಿದ್ದೇಕೆ? ಮೇಲಧಿಕಾರಿಗಳು ಬಂಧಿಸಲು ಸೂಚಿಸಿದ್ದರೆ? ಯಾರ ಒತ್ತಡಕ್ಕೆ ಮಣಿದು ಬಂಧಿಸಿದ್ದೀರಿ?” ಎಂದು ತರಾಟೆಗೆ ತೆಗೆದುಕೊಂಡಿತು. ಪೀಠದ ಯಾವೊಂದು ಪ್ರಶ್ನೆಗೂ ಸುನೀಲ್ ಕುಮಾರ್ ಉತ್ತರಿಸದೇ ಗೌಣವಾದರು.
“ಅರ್ಜಿದಾರರನ್ನು ಬಂಧಿಸುವ ಮೂಲಕ ಅವರ ಸ್ವಾತಂತ್ರ್ಯ ಕಸಿದಿರುವ ಕುಕೃತ್ಯಕ್ಕೆ ತನಿಖಾಧಿಕಾರಿ ಮಾತ್ರವಲ್ಲಿ ಇಡೀ ಠಾಣೆ ಸಮಾನವಾಗಿ ಹೊಣೆಯಾಗಿದೆ. ಸಕಾರಣವಿಲ್ಲದೇ ವ್ಯಕ್ತಿಯೊಬ್ಬರನ್ನು ಬಂಧಿಸುತ್ತಿರಬೇಕಾದರೆ ಡಿಸಿಪಿ ಮತ್ತು ಎಸಿಪಿ ಏನು ಮಾಡುತ್ತಿದ್ದರು? ವಿಧಿಸಲಾಗುವ ದಂಡವನ್ನು ಅವರೂ ಪಾವತಿಸಬೇಕು” ಎಂದಿತು.
ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಪ್ರಮಾದ ಆಗಿ ಹೋಗಿದೆ. ತನಿಖಾಧಿಕಾರಿಯು ಯುವಕನಾಗಿದ್ದು, ಒಂದು ಅವಕಾಶ ನೀಡಬೇಕು” ಎಂದು ಪರಿಪರಿಯಾಗಿ ಕೋರಿದರು. ಆದರೆ, ಪೀಠವು ಇದನ್ನು ಪುರಸ್ಕರಿಸಲಿಲ್ಲ.
ಅರ್ಜಿದಾರರ ಪರ ವಕೀಲ ಅಗಂದ್ ಕಾಮತ್ ಅವರು “ಇದೊಂದು ಸಿವಿಲ್ ಪ್ರಕರಣವಾಗಿದ್ದು, ವಿಲ್ ತಿರುಚಲಾಗಿದೆ ಎಂದು ವಿಲ್‌ಗೆ ಸಾಕ್ಷಿಯಾಗಿ ಸಹಿ ಹಾಕಿರುವ ಎರಡನೇ ಆರೋಪಿ ಮೋಹನ್ ರೆಡ್ಡಿಗೆ ನೋಟಿಸ್ ನೀಡಿದ ದಿನವೇ ತರಾತುರಿಯಲ್ಲಿ ಬಂಧಿಸಲಾಗಿದೆ” ಎಂದರು.
ಪೀಠವು “ಸಿವಿಲ್ ಪ್ರಕರಣಗಳಲ್ಲಿ ಮೂಗು ತೂರಿಸಲು ಪೊಲೀಸರು ಯಾರು? ವಿಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಪಾಲು ಇರುತ್ತದೆಯೇ” ಎಂದು ಕಿಡಿಕಾರಿತು.
“ಜನರನ್ನು ಬಂಧಿಸುವುದು ಜೋಕ್ ಆಗಿದೆಯೇ? ವಿಚಾರಣಾಧೀನ ನ್ಯಾಯಾಲಯಗಳು ವಿವೇಚನೆ ಬಳಸದೇ ಪೊಲೀಸರು ಬಂಧಿತ ಆರೋಪಿತನ್ನು ರಿಮ್ಯಾಂಡ್‌ಗೆ ಕೇಳಿದ ತಕ್ಷಣ ನೀಡುತ್ತಿವೆ. ನೀವೆಲ್ಲಾ ಏನೆಂದು ತಿಳಿದುಕೊಂಡಿದ್ದೀರಿ? ಆರೋಪಿಯು ಕುಖ್ಯಾತ ಕ್ರಿಮಿನಲ್ ಆಗಿದ್ದರೂ ನೋಟಿಸ್ ನೀಡಿ, ಆತ ತನಿಖೆಗೆ ಸಹಕರಿಸದಿದ್ದಾಗ ಮಾತ್ರ ಬಂಧಿಸಬಹುದೇ ವಿನಾ ಸುಖಾಸುಮ್ಮನೆ ಬಂಧಿಸಲಾಗದು” ಎಂದಿತು. ಅಂತಿಮವಾಗಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತು.