ಮಹಾತ್ಮ ಗಾಂಧಿ ಪ್ರತಿಮೆಯನ್ನು ಪೂಜಾ ಸ್ಥಳ ಎಂದು ಪರಿಗಣಿಸಲು ಸಾಧ್ಯವಿಲ್ಲ: ರಾಜ್ಯ ಹೈಕೋರ್ಟ್

ಗಾಂಧೀಜಿ "ನಿಜವಾಗಿಯೂ ಪ್ರಜಾಪ್ರಭುತ್ವವಾದಿಯಾಗಿದ್ದು, ವ್ಯಕ್ತಿಪೂಜೆಯನ್ನು ಎಂದಿಗೂ ಇಷ್ಟಪಟ್ಟವರಲ್ಲ" ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
Mahatma Gandhi statue and Karnataka HC
Mahatma Gandhi statue and Karnataka HC

ಮಹಾತ್ಮ ಗಾಂಧಿ ಪ್ರತಿಮೆಯನ್ನು 'ಧಾರ್ಮಿಕ ಸಂಸ್ಥೆ' ಅಥವಾ 'ಪೂಜಾ ಸ್ಥಳ' ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಎನ್ ಎಸ್‌ ಸಂಜಯ್ ಗೌಡ ಅವರಿದ್ದ ವಿಭಾಗೀಯ ಪೀಠವು ನೀಡಿದ ಆದೇಶ ಹೀಗಿದೆ:

"ಯಾವ ಬಗೆಯ ಕಲ್ಪನಾಶೀಲತೆಯಿಂದಲೂ ನಾವು ರಾಷ್ಟ್ರಪಿತನ ಪ್ರತಿಮೆಯನ್ನು ಒಂದು 'ಧಾರ್ಮಿಕ ಸಂಸ್ಥೆ' ಎಂದು ಪರಿಗಣಿಸಲಾಗದು. 1967 ರ ನಿಯಮಾವಳಿಗಳ 3 ನೇ ಉಪನಿಯಮದಲ್ಲಿ ಸಾರ್ವಜನಿಕ ಧಾರ್ಮಿಕ ಸ್ಥಳದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ರಾಷ್ಟ್ರಪಿತನ ಪ್ರತಿಮೆಯನ್ನು 'ಧಾರ್ಮಿಕ ಸಂಸ್ಥೆ' ಎಂದು ಒಪ್ಪುವುದು ಅಸಾಧ್ಯ

ಕರ್ನಾಟಕ ಹೈಕೋರ್ಟ್

ದೇಶದ ಪಿತಾಮಹ ಮಹಾತ್ಮ ಗಾಂಧೀಜಿ ಅವರು ತಮ್ಮ ಜೀವಿತಾವಧಿಯಲ್ಲಿ ಪ್ರಚುರಪಡಿಸಿದ ಚಿಂತನೆ ಮತ್ತು ಅಭಿಪ್ರಾಯಗಳನ್ನು ಗಮನಿಸಿದರೆ ಅವರ ಪ್ರತಿಮೆಯನ್ನು ಧಾರ್ಮಿಕ ಆರಾಧನೆಯ ಸ್ಥಳ ಎಂದು ಒಪ್ಪಿಕೊಳ್ಳುವುದು ಅಸಾಧ್ಯ ಎಂದು ನ್ಯಾಯಾಲಯ ಹೇಳಿದೆ.

"ರಾಷ್ಟ್ರಪಿತನಿಗೆ ಒಂದು ವಿಶಿಷ್ಟ ಸ್ಥಾನವಿದೆ. ಅವರು ಎಲ್ಲ ಧರ್ಮಗಳಿಗಿಂತ ಮೇಲಿದ್ದರು. ನಿಜವಾಗಿಯೂ ಅವರು ಪ್ರಜಾಪ್ರಭುತ್ವವಾದಿಯಾಗಿದ್ದು, ವ್ಯಕ್ತಿ ಪೂಜೆಯನ್ನು ಎಂದಿಗೂ ಇಷ್ಟಪಡುತ್ತಿರಲಿಲ್ಲ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

1968 ರ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಬಂಧನೆಗಳಡಿ ಬೆಂಗಳೂರಿನ ಟಾನಿಕ್ ಹೆಸರಿನ ಮದ್ಯದಂಗಡಿಗೆ ನೀಡಿದ ಪರವಾನಗಿ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಲು ಅಸಮ್ಮತಿ ಸೂಚಿಸಿ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ವಕೀಲ ಎ.ವಿ.ಅಮರನಾಥನ್ ಅವರು ಮದ್ಯದಂಗಡಿ ಇರುವ ಸ್ಥಳದಿಂದ 100 ಮೀ ದೂರದಲ್ಲಿ ಬಾಲ ಭವನದ ಸಮೀಪದ ಗಾಂಧಿ ಪ್ರತಿಮೆ, ಚರ್ಚ್ ಹಾಗೂ ಪೊಲೀಸ್ ಉಪಕಮಿಷನರ್ ಕಚೇರಿ ಇದೆ ಎಂದು ತಿಳಿಸಿದ್ದರು. ಆದರೆ ಜುಲೈ 9ರಂದು ನೀಡಿದ ಆದೇಶದಲ್ಲಿ ಹೈಕೋರ್ಟ್ ಗಾಂಧಿ ಪ್ರತಿಮೆ ಆಧರಿಸಿದ ಆಕ್ಷೇಪಣೆಯನ್ನು ನಿರಾಕರಿಸಿತ್ತು. ಇತರೆ ಆಕ್ಷೇಪಗಳಿಗೆ ಸಂಬಂಧಿಸಿದಂತೆ ಸರ್ವೇ ಅಧಿಕಾರಿಯಿಂದ ದೂರ ಅಳೆಸುವಂತೆ ಸಂಬಂಧಪಟ್ಟ ತಹಶೀಲ್ದಾರ್ ಅವರಿಗೆ ಸೂಚಿಸಿತ್ತು. ಮದ್ಯದಂಗಡಿಯ ನಿರ್ದಿಷ್ಟ ಮಿತಿಗಿಂತ ದೂರದಲ್ಲಿ ಚರ್ಚ್ ಮತ್ತು ಉಪ ಪೊಲೀಸ್ ಆಯುಕ್ತರ ಕಚೇರಿ ಇವೆ ಎಂದು ಹೆಚ್ಚುವರಿ ಸರ್ಕಾರಿ ವಕೀಲ ವಿಜಯ್‌ಕುಮಾರ್ ಎ ಪಾಟೀಲ್ ಅವರು ದಾಖಲೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

[ಆದೇಶವನ್ನು ಇಲ್ಲಿ ಓದಿ]

Attachment
PDF
Mahatma_Gandhi_statue___Karnataka_HC.pdf
Preview

Related Stories

No stories found.
Kannada Bar & Bench
kannada.barandbench.com