ಗುತ್ತಿಗೆ ನೌಕರರು, ಹೊರಗುತ್ತಿಗೆ ಸಿಬ್ಬಂದಿಗೆ ಕನಿಷ್ಠ ವೇತನ ಮುಂದೂಡಿಕೆ ಸುತ್ತೋಲೆಗೆ ಹೈಕೋರ್ಟ್‌ ತಡೆ

ವಿವಿಧ ಕಾರ್ಮಿಕ ಸಂಘಟನೆಗಳು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್‌ ಟಿ ನರೇಂದ್ರ ಪ್ರಸಾದ್ ಅವರ ಏಕಸದಸ್ಯ ಪೀಠ ನಡೆಸಿತು.
labour
labour
Published on

ಗುತ್ತಿಗೆ ನೌಕರರು ಮತ್ತು ಹೊರಗುತ್ತಿಗೆ ಮೇಲೆ ನೇಮಕವಾಗಿರುವ ಸಿಬ್ಬಂದಿಗೆ ಕಾರ್ಮಿಕರ ಕನಿಷ್ಠ ವೇತನದ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಮುಂದೂಡುವಂತೆ ಲೆಕ್ಕ ಪರಿಶೋಧನಾ, ಪೌರಾಡಳಿತ ಮತ್ತು ಪಂಚಾಯತ್​ ರಾಜ್​  ಇಲಾಖೆಗಳು ಹೊರಡಿಸಿದ್ದ ಮೂರು ಪ್ರತ್ಯೇಕ ಸುತ್ತೋಲೆಗಳಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.

ಈ ಸಂಬಂಧ "ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್" ಅಧೀನದ ವಿವಿಧ ಕಾರ್ಮಿಕ ಸಂಘಟನೆಗಳು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್‌ ಟಿ ನರೇಂದ್ರ ಪ್ರಸಾದ್ ಅವರ ಏಕಸದಸ್ಯ ಪೀಠ ನಡೆಸಿತು.

ಪರಿಷ್ಕೃತ ಕನಿಷ್ಠ ವೇತನ ಪಾವತಿ ಸ್ಥಗಿತಗೊಳಿಸಿದ್ದ ಮೂರು ಸುತ್ತೋಲೆಗಳಿಗೆ ತಡೆ ಆದೇಶ ನೀಡಿರುವ ಪೀಠ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿದೆ.

ರಾಜ್ಯ ಸರ್ಕಾರ 2026ರ ಮೇ 22ರಂದು ರಾಜ್ಯದ 83 ನಿಗದಿತ ಉದ್ಯೋಗಗಳಿಗೆ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯನ್ನು ಸರ್ಕಾರದ ಹಲವು ಇಲಾಖೆಗಳು ಕೂಡಲೇ ಜಾರಿಗೆ ತಂದಿದ್ದವು.

ಆದರೆ, 2026ರ ಜುಲೈ 15ರಂದು ಹಣಕಾಸು ಇಲಾಖೆ ಅಧಿಕೃತ ಆದೇಶವೊಂದನ್ನು ಹೊರಡಿಸಿ, ಕನಿಷ್ಠ ವೇತನ ಪರಿಷ್ಕರಿಸುವ ಅಧಿಸೂಚನೆಗೆ ಆಕ್ಷೇಪಣೆ ವ್ಯಕ್ತಪಡಿಸಿತ್ತು.

ಹಣಕಾಸಿನ ಹೊರೆ ಮತ್ತು ಹೂಡಿಕೆಯ ಮೇಲಿನ ಪರಿಣಾಮವನ್ನು ಪರಿಗಣಿಸಿ, ಪರಿಷ್ಕೃತ ಕನಿಷ್ಠ ವೇತನ ಜಾರಿ ನಿರ್ಧಾರವನ್ನು ಸ್ಥಗಿತಗೊಳಿಸಲು ಶಿಫಾರಸು ಮಾಡಿತು.

ಈ ಅಂಶವನ್ನು ಪರಿಗಣಿಸಿ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಪ್ರತ್ಯೇಕ ಸುತ್ತೋಲೆಗಳನ್ನು ಹೊರಡಿಸಿ ಕನಿಷ್ಠ ವೇತನ ಪರಿಷ್ಕರಣೆ ಅಧಿಸೂಚನೆಯನ್ನು ಸ್ಥಗಿತಗೊಳಿಸಿ ಸುತ್ತೋಲೆಗಳನ್ನು ಹೊರಡಿಸಿದ್ದವು.

"ಈ ಸುತ್ತೋಲೆಗಳು ಕಾನೂನು ಬಾಹಿರವಾಗಿದ್ದು ಕಾರ್ಮಿಕರಿಂದ ಪರಿಷ್ಕೃತ ಹೊಸ ಕನಿಷ್ಠ ವೇತನವನ್ನು ಕಸಿದುಕೊಳ್ಳುವ ಉದ್ದೇಶ ಹೊಂದಿವೆ. ಆದ್ದರಿಂದ, ತಕ್ಷಣವೇ ಅಧಿಸೂಚನೆ ಜಾರಿಗೊಳಿಸಲು ನಿರ್ದೇಶನ ನೀಡಬೇಕು" ಎಂದು ಕೋರಿ "ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್" (ಸಿಐಟಿಯು) ರಾಜ್ಯ ಸಮಿತಿ ಮತ್ತು ಅದರ ಅಧೀನ ಸಂಘಟನೆಗಳಾದ  ಕರ್ನಾಟಕ ರಾಜ್ಯ ಸರ್ಕಾರಿ ಕಾಯಮೇತರ ನೌಕರರ ಒಕ್ಕೂಟ, ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ, ತುಮಕೂರು ಜಿಲ್ಲಾ ನೀರು ಸರಬರಾಜು ನೌಕರರ ಸಂಘ,  ತುಮಕೂರು ನಗರ ಪಾಲಿಕೆ ಕಸದ ಆಟೋ ರಿಕ್ಷಾ ಚಾಲಕರು ಮತ್ತು ಸಹಾಯಕರ ಸಂಘಗಳು ಹೈಕೋರ್ಟ್​ ಮೆಟ್ಟಿಲೇರಿದ್ದವು.

Kannada Bar & Bench
kannada.barandbench.com