ಸಿಎಂ ಪತ್ನಿ ಪಾರ್ವತಿ, ಸಚಿವ ಬೈರತಿ ಸುರೇಶ್‌ ವಿರುದ್ಧದ ಇ ಡಿ ಸಮನ್ಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್‌

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆಗೆ ಮುಂದೂಡಿದ್ದೇವೆ. ಹೀಗಾಗಿ, ಈ ಸಮನ್ಸ್‌ಗಳಿಗೆ ತಡೆ ನೀಡಲಾಗುತ್ತಿದೆ ಎಂದು ಆದೇಶಿಸಿದ ಹೈಕೋರ್ಟ್.
Minister Byrathi Suresh, ED & Karnataka HC
Minister Byrathi Suresh, ED & Karnataka HC
Published on

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿರುವ ದೂರು ಮತ್ತು ತನಿಖೆ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಸೆಕ್ಷನ್‌ 50ರ ಅಡಿ ಜಾರಿ ಮಾಡಿರುವ ಸಮನ್ಸ್‌ಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್‌ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲರು ಹಾಗೂ ಇಡಿ ಪರ ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಲಯವು “ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಬಗ್ಗೆ ಹೈಕೋರ್ಟ್‌ ಆದೇಶ ಕಾಯ್ದಿರಿಸಿದೆ. ಲೋಕಾಯುಕ್ತ ಪೊಲೀಸರ ತನಿಖೆಯ ವರದಿ ಸಲ್ಲಿಕೆ ಮುಂದೂಡಿದ್ದೇವೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆ ಮುಂದೂಡಿದ್ದೇವೆ. ಹೀಗಾಗಿ, ಈ ಸಮನ್ಸ್‌ಗಳಿಗೆ ತಡೆ ನೀಡಲಾಗುತ್ತಿದೆ” ಎಂದು ಆದೇಶಿಸಿತು.

ಭೈರತಿ ಸುರೇಶ್‌ ಪರ ವಾದಿಸಿದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಅರ್ಜಿದಾರರು ಯಾವುದೇ ಅಧಿಸೂಚಿತ ಪ್ರಕರಣದ ಆರೋಪಿಯಲ್ಲ. ಆರೋಪಿಯಲ್ಲದಿದ್ದರೂ ಇ ಡಿ ಸಮನ್ಸ್‌ ಜಾರಿಗೊಳಿಸಿದೆ. ಸೋಮವಾರ ಬೆಳಗ್ಗೆ 11ಗಂಟೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದೇ ಮಾದರಿಯ ಮತ್ತೊಂದು ಪ್ರಕರಣದಲ್ಲಿ (ಮುಡಾ ಮಾಜಿ ಆಯುಕ್ತ) ಡಾ.ನಟೇಶ್‌ಗೆ ಇ ಡಿ ನೀಡಿದ್ದ ಸಮನ್ಸ್‌ ಅನ್ನು ಹೈಕೋರ್ಟ್‌ ರದ್ದುಪಡಿಸಿದೆ. ಅದನ್ನೇ ಅನ್ವಯಿಸಿ ಈ ಪ್ರಕರಣದಲ್ಲೂ ತಡೆಯಾಜ್ಞೆ ನೀಡಬೇಕು. ಮುಂದಿನ ವಿಚಾರಣೆವರೆಗೂ ಇಡಿಯಿಂದ ರಕ್ಷ ಣೆ ಒದಗಿಸಬೇಕು” ಎಂದು ಮನವಿ ಮಾಡಿದರು.

ಇ ಡಿ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ಡಾ.ನಟೇಶ್‌ ಪ್ರಕರಣದಲ್ಲಿ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿರಲಿಲ್ಲ. ಇಂದು ಡಾ.ನಟೇಶ್‌ ಪರ ಆದೇಶ ಬಂದಿದೆ ಅದರ ವಿವರ ತಿಳಿದಿಲ್ಲ. ಹೀಗಾಗಿ, ಮಧ್ಯಂತರ ಆದೇಶ ನೀಡಬಾರದು” ಎಂದು ಕೋರಿದರು.

ಸಿಎಂ ಪತ್ನಿ ಪಾರ್ವತಿ ಪರ ವಾದಿಸಿದ ಹಿರಿಯ ವಕೀಲರಾದ ಸಂದೇಶ್‌ ಚೌಟ ಮತ್ತು ವಿಕ್ರಮ್‌ ಹುಯಿಲಗೋಳ ಅವರು “14 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪವಿದೆ. ಅಪರಾಧದಿಂದ ಗಳಿಸಿದ ಹಣವಿಲ್ಲದಿದ್ದರೂ ತನಿಖೆ ನಡೆಸುತ್ತಿದೆ. ಹೀಗಾಗಿ, ತನಿಖೆಗೆ ತಡೆ ನೀಡಬೇಕು” ಎಂದರು.

ಆಗ ಪೀಠವು “ಸಿಎಂ ಪ್ರಕರಣದ ವಿಚಾರಣೆ ಇತ್ತ ಹೈಕೋರ್ಟ್‌ನಲ್ಲಿ ನಡೆಯುವಾಗ ಇದರಲ್ಲೇಕೆ ಮುಂದುವರಿಯುತ್ತೀರಾ?” ಎಂದು ಇಡಿ ಪರ ವಕೀಲರನ್ನು  ಪ್ರಶ್ನೆ ಮಾಡಿತು.

ಅದಕ್ಕೆ ಉತ್ತರಿಸಿದ ಎಎಸ್‌ಜಿ ಅವರು “ಮುಡಾ ಪ್ರಕರಣದಲ್ಲಿಸಿಎಂ ಪತ್ನಿ ಪಾರ್ವತಿ 2ನೇ ಆರೋಪಿ. ಅವರ ಮೇಲೆ ಅಕ್ರಮವಾಗಿ ನಿವೇಶನಗಳನ್ನು ಪಡೆದ ಆರೋಪವಿದೆ. ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಅನುಸೂಚಿತ ಪ್ರಕರಣ (ಪ್ರೆಡಿಕೇಟ್‌- ಅಕ್ರಮ ಗಳಿಕೆಗೆ ಕಾರಣವಾದ ಪ್ರಕರಣ) ಇದೆ” ಎಂದರು.

ಅದಕ್ಕೆ ಪೀಠವು “ಅಪರಾಧದಿಂದ ಗಳಿಸಿದ ಸಂಪತ್ತು ಈಗಿಲ್ಲವಲ್ಲ. ಇ ಡಿ ತನಿಖೆಯಿಂದ ಹೈಕೋರ್ಟ್‌ ಕಾಯ್ದಿರಿಸಿರುವ ಪ್ರಕರಣಕ್ಕೆ ಹಾನಿಯಾಗಬಾರದು. ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸುವಂತಿಲ್ಲ ಎಂದು ನಾನೇ ಆದೇಶ ನೀಡಿದ್ದೇನೆ. ಈಗ ಇ ಡಿ ತನಿಖೆಗೆ ಅವಕಾಶ ನೀಡುವುದು ಹೇಗೆ? ಈಗಲೇ ತನಿಖೆ ನಡೆಸಬೇಕಾದ ತುರ್ತು ಅಗತ್ಯವೇನಿದೆ” ಎಂದು ಪ್ರಶ್ನಿಸಿದರು.

ಇದಕ್ಕೆ ಎಎಸ್‌ಜಿ ಅವರು “ಪಿಎಂಎಲ್‌ಎ ಸೆಕ್ಷನ್‌ 50(2)ರ ಅಡಿ ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಹಾಜರುಪಡಿಸಿ ಎಂದಷ್ಟೇ ಹೇಳಿದ್ದೇವೆ. ಇದರಿಂದ ಹೈಕೋರ್ಟ್‌ ಮುಂದಿರುವ ಪ್ರಕರಣಕ್ಕೆ ಅಡ್ಡಿಯಾಗುವುದಿಲ್ಲ” ಎಂದರು.

ಆಗ ಪೀಠವು “ಹಾಜರಾಗದಿದ್ದರೆ ನೀವು ನಾಳೆ ಅವರನ್ನು ಬಂಧಿಸಬಹುದು. ಹಾಗಾಗಿ ಈ ಬಗ್ಗೆ ಸೂಕ್ತ ಆದೇಶ ಹೊರಡಿಸಬೇಕಿದೆ” ಎಂದು ಮಧ್ಯಂತರ ಆದೇಶವನ್ನು ನೀಡಿತು. ಅಂತಿಮವಾಗಿ ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿತು.

Also Read
ಇ ಡಿ ಸಮನ್ಸ್‌, ದೂರು ರದ್ದತಿ ಕೋರಿ ಹೈಕೋರ್ಟ್‌ ಕದತಟ್ಟಿದ ಸಿಎಂ ಪತ್ನಿ ಪಾರ್ವತಿ, ಸಚಿವ ಬೈರತಿ ಸುರೇಶ್‌

ಡಾ.ನಟೇಶ್‌ ವಿರುದ್ಧದ ಸಮನ್ಸ್‌ ವಜಾ

ಮುಡಾ ಪ್ರಕರಣದಲ್ಲಿ ಇಡಿ ಮಾಜಿ ಆಯುಕ್ತ ಡಿ ಬಿ ನಟೇಶ್‌ಗೆ ಜಾರಿಗೊಳಿಸಿದ್ದ ಸಮನ್ಸ್‌ ಅನ್ನು ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದೆ.

ಇ ಡಿ ಸಮನ್ಸ್‌ ಪ್ರಶ್ನಿಸಿ ನಟೇಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಪ್ರಕರಣದಲ್ಲಿ ಎಲ್ಲೂ ತಮ್ಮನ್ನು ಆರೋಪಿ ಎಂದು ತೋರಿಸಿಲ್ಲ, ಆದರೂ ತಮ್ಮ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಇ ಡಿ ನಿರ್ದೇಶನದಂತೆ ತಾನು ಹೇಳಿಕೆ ನೀಡಿದ್ದೇನೆ. ಆದರೆ, ಮತ್ತೆ ಜಾರಿ ನಿರ್ದೇಶನಾಲಯ ತಮಗೆ ಸಮನ್ಸ್‌ ಜಾರಿಗೊಳಿಸಿದೆ. ಹೀಗಾಗಿ ಅದನ್ನು ರದ್ದುಗೊಳಿಸುವಂತೆ, 2024ರ ಅಕ್ಟೋಬರ್‌ 28, 29 ರಂದು ಇ ಡಿ ತಮ್ಮ ಹೇಳಿಕೆ ಪಡೆದಿರುವುದು ಕಾನೂನುಬಾಹಿರ ಎಂದು ಘೋಷಿಸಬೇಕು ಮತ್ತು ಸಮನ್ಸ್‌ ಕೂಡ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Kannada Bar & Bench
kannada.barandbench.com