ಜಾತಿ ನಿಂದನೆ ಪ್ರಕರಣ: ಸಚಿವ ಸುಧಾಕರ್ ವಿರುದ್ಧದ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿರುವ ಪೀಠವು ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಅಕ್ಟೋಬರ್ 3 ಕ್ಕೆ ಮುಂದೂಡಿದೆ.
Minister D Sudhakar and Karnataka HC
Minister D Sudhakar and Karnataka HC

ಪರಿಶಿಷ್ಟ ಕುಟುಂಬದ ಜಮೀನು ಕಬಳಿಸಿ, ಅವರ ಮೇಲೆ ದೌರ್ಜನ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ.

ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸೆವನ್ ಹಿಲ್ಸ್ ಡೆವಲಪರ್ಸ್‌ ಅಂಡ್ ಟ್ರೇಡರ್ಸ್‌ನ ನಿರ್ದೇಶಕರೂ ಆಗಿರುವ ಡಿ ಸುಧಾಕರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿರುವ ಪೀಠವು ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಸೆವೆನ್ ಹಿಲ್ಸ್ ಡೆವಲಪರ್ಸ್‌ ಅಂಡ್ ಟ್ರೇಡರ್ಸ್‌, ಸಚಿವ ಡಿ ಸುಧಾಕರ್, ಜಿ. ಶ್ರೀನಿವಾಸ್ ಮತ್ತು ಭಾಗ್ಯಮ್ಮ ಎಂಬುವರು ತಮ್ಮ ಕುಟುಂಬದವರಿಗೆ ಮೋಸ ಮಾಡಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನಗರದ ಸಿವಿಲ್ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣಾ ಹಂತದಲ್ಲಿದೆ. ಹೀಗಿದ್ದರೂ, ಡಿ ಸುದಾಕರ್ ಸೇರಿದಂತೆ ಮತ್ತಿತರರು ತಾವು ನೆಲೆಸಿರುವ ಮನೆಗಳನ್ನು ತೆರವುಗೊಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿ ಪ್ರಶ್ನಿಸಿದಾಗ ಸುಮಾರು 35ಕ್ಕೂ ಹೆಚ್ಚು ಮಂದಿ ತಮ್ಮ ವಿರುದ್ಧ ದೌರ್ಜನ್ಯ ನಡೆಸಿದ್ದಾರೆ. ಮಗಳ ಮೇಲೆ ಹಲ್ಲೆ ನಡೆಸಿ, ಜಾತಿ ಉಲ್ಲೇಖಿಸಿ ನಿಂದಿಸಿದ್ದಾರೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯಲಹಂಕ ನಿವಾಸಿ ಸುಬ್ಬಮ್ಮ ಎಂಬುವರು ಸೆಪ್ಟಂಬರ್ 10ರಂದು ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಇದನ್ನು ಆಧರಿಸಿ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯಿದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದರು. ಇದನ್ನು ಪ್ರಶ್ನಿಸಿ ಸುಧಾಕರ್ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com