ಅಶ್ವಗಂಧದ ಎಲೆ, ಸಾರವನ್ನು ಆಹಾರ ಪದಾರ್ಥದಲ್ಲಿ ಬಳಸಕೂಡದು ಎಂಬ ಎಫ್‌ಎಸ್‌ಎಸ್‌ಎಐ ಆದೇಶಕ್ಕೆ ಹೈಕೋರ್ಟ್‌ ತಡೆ

ಎಫ್‌ಎಸ್‌ಎಸ್‌ಎಐ ಸಲಹಾ ಸಂವಹನವನ್ನು ಪ್ರಶ್ನಿಸಿ ಅಮೆರಿಕದ ಕೆರ್ರಿ ಇಂಕ್‌ ಕಂಪನಿಯ ಬೆಂಗಳೂರು ಶಾಖೆ ಸೇರಿದಂತೆ ಭಾರತದ ವಿವಿಧೆಡೆ ಇರುವ ಒಟ್ಟು ಎಂಟು ಕಂಪನಿಗಳು  ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿದೆ.
Karnataka High Court
Karnataka High Court
Published on

ಮನುಷ್ಯರ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ ಎಂಬ ಹಿನ್ನೆಲೆಯಲ್ಲಿ ಅಶ್ವಗಂಧ ಸಸ್ಯದ ಎಲೆಗಳು ಅಥವಾ ಅದರ ಸಾರವನ್ನು ಆಹಾರ ಪದಾರ್ಥಗಳಲ್ಲಿ ಬಳಸಬಾರದು ಎಂಬ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್ಎಐ) ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ತಡೆ ನೀಡಿದೆ.

ಎಫ್‌ಎಸ್‌ಎಸ್‌ಎಐ ಸಲಹಾ ಸಂವಹನವನ್ನು ಪ್ರಶ್ನಿಸಿ ಅಮೆರಿಕದ ಕೆರ್ರಿ ಇಂಕ್‌ ಕಂಪನಿಯ ಬೆಂಗಳೂರು ಶಾಖೆ ಸೇರಿದಂತೆ ಭಾರತದ ವಿವಿಧೆಡೆ ಇರುವ ಒಟ್ಟು ಎಂಟು ಕಂಪನಿಗಳು  ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರ ರಜಾಕಾಲದ ಏಕಸದಸ್ಯ ಪೀಠ ನಡೆಸಿತು.

ಎಫ್‌ಎಸ್‌ಎಸ್‌ಎಐ ಹೊರಡಿಸಿರುವ ಸಲಹಾ ಪ್ರಕಟಣೆಗೆ ನೀಡಲಾಗುತ್ತಿರುವ ಮಧ್ಯಂತರ ತಡೆ ಆದೇಶ ಅರ್ಜಿದಾರರಿಗೆ ಮುಂದಿನ ವಿಚಾರಣೆವರೆಗೆ ಮಾತ್ರ ಸೀಮಿತವಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿರುವ ಪೀಠವು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರ ಮತ್ತು ಎಫ್‌ಎಸ್‌ಎಸ್‌ಎಐಗೆ ನಿರ್ದೇಶಿಸಿ ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿದೆ.

ಆಹಾರ ಸುರಕ್ಷತೆ ಮತ್ತು ನಿಯಮಗಳು–2016ರ ಅಡಿಯಲ್ಲಿನ ಮಾನದಂಡಗಳ ಪ್ರಕಾರವೇ ಅಶ್ವಗಂಧದ ಎಲೆಗಳು ಸೇರಿದಂತೆ ಅದರ ಸಸ್ಯದ ಬೇರುಗಳು ಮತ್ತು ಸಾರಗಳಿಂದ ಅಶ್ವಗಂಧ ಸಿದ್ದಪಡಿಸಲಾಗುತ್ತಿದೆ. ಈವರೆಗೆ ಯಾವುದೇ ಗಂಭೀರ ಸುರಕ್ಷತಾ ಸಮಸ್ಯೆಗಳು ಕಂಡುಬಂದಿಲ್ಲ ಎಂಬುದು ಅರ್ಜಿದಾರರ ಆಕ್ಷೇಪ.

ಎಫ್‌ಎಸ್‌ಎಸ್‌ಎಐ 2026ರ ಏಪ್ರಿಲ್ 16ರಂದು ಹೊರಡಿಸಿರುವ ಸಲಹೆ ಮತ್ತು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಒದಗಿಸಿರುವ ಸಂವಹನ ಪತ್ರ ಸಂವಿಧಾನದ 19(1)(ಜಿ) ವಿಧಿಗೆ ವಿರುದ್ಧವಾಗಿದ್ದು ಇದನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com