ಸ್ವಂತ ಮನೆಗೆ ಹೋಗುವುದು ಅತಿಕ್ರಮ ಪ್ರವೇಶವಲ್ಲ; ಪತಿ ವಿರುದ್ಧದ 9ನೇ ಎಫ್‌ಐಆರ್‌ಗೆ ತಡೆ ನೀಡಿದ ಹೈಕೋರ್ಟ್‌

“ಕೌಟುಂಬಿಕ ದೌರ್ಜನ್ಯದಿಂದ ಪುರುಷರ ರಕ್ಷಣೆ ಕಾನೂನು ಜಾರಿಗೊಳಿಸಲು ಕಾಲ ಕೂಡಿಬಂದಿದೆ” ಎಂದು ನ್ಯಾಯಾಲಯ ಹೇಳಿದೆ.
Karnataka High Court, Couple
Karnataka High Court, Couple
Published on

ಇಂಗ್ಲೆಂಡಿನಿಂದ ಬಹಳ ಸಮಯದ ನಂತರ ಮನೆಗೆ ಬಂದ ಪತಿಯ ವಿರುದ್ಧ ಅತಿಕ್ರಮ ಪ್ರವೇಶ ಆರೋಪದ ಮೇಲೆ ಪತ್ನಿ ದಾಖಲಿಸಿದ ಪ್ರಕರಣಕ್ಕೆ (9ನೇ ಪ್ರಕರಣ) ಸಂಬಂಧಿಸಿದ ತನಿಖೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿ ಆದೇಶಿಸಿದೆ.

ಮನೆಯ ಅತಿಕ್ರಮ ಪ್ರವೇಶ ಆರೋಪದ ಮೇಲೆ ತಮ್ಮ ವಿರುದ್ಧ ಪತ್ನಿ ಸುಮಿತ್ರಾ ಸೇಪುರಿ ಅವರು ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್ಐಆರ್ ರದ್ದುಡಿಸುವಂತೆ ಕೋರಿ ಕುಂದಲಹಳ್ಳಿ ನಿವಾಸಿ ಎ ಎಲ್ ಸತ್ಯನಾರಾಯಣ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಪ್ರಕರಣದಲ್ಲಿ ಅರ್ಜಿದಾರರು ಎರಡನೇ ಪ್ರತಿವಾದಿ‌ ಮಹಿಳೆಯ ಪತಿಯಾಗಿದ್ದಾರೆ. ಪತಿಯು ತುಂಬಾ ಸಮಯದ ನಂತರ ಇಂಗ್ಲೆಂಡಿನಿಂದ ಮರಳಿದ್ದಾರೆ.‌ ಅದಕ್ಕೂ ಮುಂಚೆ ಪತ್ನಿಯು ಪತಿಯ ವಿರುದ್ಧ 8 ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಗೊತ್ತಿರುವ ಪ್ರತಿಯೊಂದು ಕಾನೂನಿನ‌ ಎಲ್ಲಾ ನಿಬಂಧನೆಗಳನ್ನು ಬಳಸಿ ಕೇಸು ಹಾಕಲಾಗಿದೆ. ಮನೆಯನ್ನು ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ‌ ಈಗ 9ನೇ ಕೇಸ್ ದಾಖಲಿಸಲಾಗಿದೆ. ಪತಿಯ ಹೆಸರಿನಲ್ಲಿಯೇ ಮನೆ ಇದೆ ಎಂದು ಆತನ ಪರ ವಕೀಲರು ವಾದಿಸಿದ್ದಾರೆ.‌ ಪತ್ನಿ ಮತ್ತು ಪತಿಯ ಜಂಟಿ ಹೆಸರಿನಲ್ಲಿದೆ ಎಂದು ಪತ್ನಿ  ಪರ ವಕೀಲರು ಹೇಳುತ್ತಿದ್ದಾರೆ. ಆದಾಗ್ಯೂ, ಮನೆಯ ಮೇಲೆ‌ ಪತಿಗೆ ಹಕ್ಕು ಇದ್ದೇ ಇರುತ್ತದೆ. ತನ್ನ ಮನೆಯೊಳಗೆ ತಾನು ಹೋದ ಕಾರಣಕ್ಕೆ ಪತಿಯ ಮೇಲೆ ಅತಿಕ್ರಮ ಪ್ರವೇಶ ಕೇಸ್ ಹಾಕಲಾಗದು. ಆದ್ದರಿಂದ‌, ಅರ್ಜಿದಾರ‌ ಪತಿಯ ಮೇಲೆ‌ ಪತ್ನಿ ದಾಖಲಿಸಿರುವ ಅತಿಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಅರ್ಜಿ ವಿಲೇವಾರಿಯಾಗುವರೆಗೆ ತಡೆ ನೀಡಲಾಗುತ್ತಿದೆ” ಎಂದು ಪೀಠ ಆದೇಶದಲ್ಲಿ ತಿಳಿಸಿದೆ‌‌.

ಬದಕು ಜಟಕಬಂಡಿ, ವಿಧಿಯದರ ಸಾಹೇಬ

ಅರ್ಜಿದಾರರ ಪರ ವಕೀಲ ಎಂ ಆರ್‌ ಚಿನ್ನಸ್ವಾಮಿ ಮನೋಹರ್‌ ಅವರು “ಅರ್ಜಿದಾರರು ಆತ‌ ಸ್ವಾಯಾರ್ಜಿತ ಸಂಪಾದಿಸಿದ ಮನೆಗೆ ಹೋದರೆ, ಅತಿಕ್ರಮ ಪ್ರವೇಶ ಆರೋಪದ ಮೇಲೆ ಹೆಂಡತಿ ಆತನ ಮೇಲೆ‌ ದೂರು ದಾಖಲಿಸಿದ್ದಾರೆ. ಅರ್ಜಿದಾರರ ಹೆಸರಿನಲ್ಲಿರುವ ಮನೆಯ ಕ್ರಯ ಪತ್ರ ಸಹ ನ್ಯಾಯಾಲಯಕ್ಕೆ‌ ಸಲ್ಲಿಸಲಾಗಿದೆ. ಪತ್ನಿ ಅರ್ಜಿದಾರರನ ಮೇಲೆ 10 ಕೇಸ್ ಹಾಕಿದ್ದಾರೆ‌. ಐಪಿಸಿ ಸೆಕ್ಷನ್ 498A ಆರೋಪದ ಮೇಲಿನ ಎಫ್ಐಆರ್ ಇಟ್ಟುಕೊಂಡು ಹೋಗಿ ಎಲ್ಲಾ ಕಡೆ ಆಕ್ಷೇಪ ಮಾಡುತ್ತಾರೆ. ಹೆಂಡತಿ ಗಂಡನ ಮೇಲೆ 10 ಪ್ರಕರಣ ದಾಖಲಿಸಿದರೆ; ಬದುಕು ಯಾವ ಪರಿಸ್ಥಿತಿಗೆ ತಲುಪುತ್ತದೆ. ಅರ್ಜಿದಾರರ ಪರಿಸ್ಥಿತಿಯು "ಬದುಕು ಜಟಕಬಂಡಿ; ವಿಧಿಯದರ ಸಾಹೇಬ" ಎಂಬಂತಾಗಿದೆ ಎಂದು ಪೀಠದ ಮುಂದೆ ಅಳಲು ತೋಡಿಕೊಂಡರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು “ಬದುಕು ಜಟಕಾಬಂಡಿ? ಅಂದರೆ ಬಂಡಿ ಕೆಳಗೆ ಅರ್ಜಿದಾರರು ಇದ್ದಾರಾ?‌” ಎಂದು ಲಘುದಾಟಿಯಲ್ಲಿ ಹೇಳಿತು.

ಅದಕ್ಕೆ ಅರ್ಜಿದಾರರ ಪರ ವಕೀಲರು “ಹೌದು ಎಂದರಲ್ಲದೆ, "ಮದುವೆಗೋ ಮಸಣಕೋ ಹೋಗೆಂದ ಕಡೆಗೋಡುಪದ ಕುಸಿಯೆ ನೆಲವಿಹುದು‌" ಎಂದರು.

ಆಗ ಪೀಠವು “ನೀವು ನ್ಯಾಯಾಲಯದಲ್ಲಿ ಸಿನಿಮಾ‌ ಹಾಡು ಹಾಡಲು ಹೋಗಬೇಡಿ” ಎಂದು ಹೇಳಿದರು.

ಅರ್ಜಿದಾರನ ಪರ ವಕೀಲರು “ಸ್ವಾಮಿ.. ಗಂಡನ ಪರಿಸ್ಥಿತಿ ಏನಾಗಿದೆ ಎಂದರೆ 10 ಕೇಸುಗಳನ್ನು ಪತ್ನಿ ದಾಖಲಿಸಿದ್ದಾರೆ. ಇದರಿಂದ ಗಂಡನಿಗೆ ತನ್ನ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ.‌‌ 25 ವರ್ಷ ಕಷ್ಟ ಪಟ್ಟು ಹಗಲು ರಾತ್ರಿ ಓದಿ, ಕೆಲಸ ಮಾಡಿ ಎರಡು ಕೋಟಿ ರೂಪಾಯಿ‌ ಕೊಟ್ಟು ಮೂರು ರೂಮುಗಳಿರುವ ಮನೆಯನ್ನು ತೆಗೆದುಕೊಂಡಿದ್ದಾರೆ. ಮದುವೆಯಾಗಿ 16 ವರ್ಷ ಆಗಿದೆ. 14 ವರ್ಷದ ಮಗನಿದ್ದಾನೆ.‌ ಅರ್ಜಿದಾರನಿಗೆ ತನ್ನ ಮಗನನ್ನು ನೋಡಲು ಆಗುತ್ತಿಲ್ಲ. ಪತ್ನಿ ಪತಿಯ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹೈಕೋರ್ಟೇ ರದ್ದುಪಡಿಸಬೇಕು.‌ ಏಕೆಂದರೆ ಪ್ರಕರಣದಲ್ಲಿ ಅಪರಾಧದ ಅಂಶಗಳೇ ಇಲ್ಲ” ಎಂದು ಮನವಿ ಮಾಡಿದರು.

ನ್ಯಾಯಮೂರ್ತಿಗಳು “ಹಾಗಾದರೆ ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ಕಳಿಸಲಾಗುತ್ತದೆಯೇ. ಹೈಕೋರ್ಟೇ ತೀರ್ಮಾನ ಮಾಡುತ್ತದೆ ಬಿಡಿ. ನೋಡಿ‌ ಪತ್ನಿ ಪರ ವಕೀಲರು ತುಂಬಾ ಮೌನವಾಗಿದ್ದಾರೆ. ಅವರಂತೆ ಇರಬೇಕು” ಎಂದು ಲಘು ದಾಟಿಯಲ್ಲಿ ಹೇಳಿದರು.

ಆಗ ಅರ್ಜಿದಾರನ ಪರ ವಕೀಲರು “ಅವರಿಗೆ ಏನಾಗಬೇಕು. ಕೇಸು ಹಾಕಿದ್ದಾರೆ. ಅದಕ್ಕೆ ಅವರು ಮೌನವಾಗಿರುತ್ತಾರೆ. ಆದರೆ, ನಾನು ಮೌನವಾಗಿರಲು ಸಾಧ್ಯವಾಗುತ್ತದೆಯೇ” ಎಂದರು.

ಈ ಮಾತು ಕೇಳಿ ನ್ಯಾಯಮೂರ್ತಿಗಳು ಸೇರಿ ಕೋರ್ಟ್ ಹಾಲ್‌ನಲ್ಲಿ ನೆರೆದವರೆಲ್ಲರೂ ನಗೆಗಡಲಿನಲ್ಲಿ ತೇಲಿದರು.

ನಂತರ ಅರ್ಜಿದಾರರ‌ ಪರ ವಕೀಲರು ಮುಂದುವರಿದು “ಸ್ವಾಮಿ ನನ್ನ ಕಕ್ಷಿದಾರರಿಗೆ ಕೆಲಸಕ್ಕೆ ಹೋಗಲು ಸಹ ಆಗುತ್ತಿಲ್ಲ.‌ ಪತ್ನಿ 10 ಕೇಸ್ ದಾಖಲಿಸಿರುವ ಪರಿಣಾಮ, ಅರ್ಜಿದಾರ ಪತಿ‌ ಕೌಟುಂಬಿಕ ಕೋರ್ಟ್‌ಗೆ ಎರಡು ದಿನ, ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಎರಡು ದಿನ, ಸತ್ರ ನ್ಯಾಯಾಲಯಕ್ಕೆ ಎರಡು ದಿನ ಮತ್ತು ಹೈಕೋರ್ಟಿಗೆ ಎರಡು ದಿನ ಹೋಗಬೇಕಾಗುತ್ತಿದೆ. ಗಂಡ ಕೋರ್ಟ್ ಹಾಗೂ ವಕೀಲರ ಕಚೇರಿಗೆ ಅಲೆದಾಡುವಂತಾಗಿದೆ.‌‌‌ ಪತ್ನಿ ಕಾನೂನು ದುರುಪಯೋಗ ಮಾಡುತ್ತಾ ಗಂಡನಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ಅವರನ್ನು ನೀವೇ ಕಾಪಾಡಬೇಕು. ನಿಮ್ಮ ಮುಂದೆ ಮಾತ್ರ ಗೋಳು ಹೇಳಿಕೊಳ್ಳಲು ಸಾಧ್ಯ” ಎಂದು ನ್ಯಾಯಮೂರ್ತಿಗಳ ಮುಂದೆ ಅಳಲು ತೋಡಿಕೊಂಡರು.

ಪತ್ನಿ ಪರ ವಕೀಲರು “ಮುಂಚೆ ಈ ಪ್ರಕರಣದಲ್ಲಿ ನಾನು ಪತಿ ಮತ್ತು‌ ಪತ್ನಿ ಇಬ್ಬರಿಗೂ ವಕೀಲನಾಗಿದ್ದೆ. ನಂತರ ಪತಿಯು ಪತ್ನಿಗೆ ವಂಚನೆ ಮಾಡಿರುವುದು ನಮಗೆ ಮನವರಿಕೆ ಆಯಿತು.  ‌2021ರಲ್ಲಿ ತೆರಳಲು ಪತಿ ಮತ್ತು ಪತ್ನಿಯು ಪರಸ್ಪರ ಒಪ್ಪಂದ‌ ಮೇರೆಗೆ ವಿಚ್ಚೇದನ ಅರ್ಜಿ ಸಲ್ಲಿಸಿದರು. ಗಂಡನಿಗೆ ವಿಚ್ಚೇದನ ನೀಡಿ ಇಂಗ್ಲೆಂಡಿಗೆ ಹೋಗಬೇಕು ಎಂಬ ಬಯಕೆ. ಅದಕ್ಕಾಗಿ  ಪತಿಯು ಪತ್ನಿ ವಿರುದ್ಧ ವಂಚನೆ ಕೇಸು ದಾಖಲಿಸಿದ್ದರು‌. ಈಗ ಪತಿಯು ಪತ್ನಿಯ ಮನೆಗೆ ಪೆನ್ ಕ್ಯಾಮರಾದೊಂದಿಗೆ ಮನೆಗೆ ಬಂದಿದ್ದಾರೆ‌” ಎಂದು ತಿಳಿಸಿದರು.

ಅರ್ಜಿದಾರ ಪರ ವಕೀಲರು “ಸ್ವಾಮಿ ಅದು ಅರ್ಜಿದಾರರ ಮನೆ. ಅವರಿಗೆ ಸೇರಿದ ವಸ್ತುಗಳನ್ನು ತರಲು ಮನೆಗೆ ಹೋಗಿದ್ದರು” ಎಂದು ವಾದಿಸಿದರು. ವಾದ ಪ್ರತಿವಾದ ಆಲಿಸಿದ ಪೀಠ‌ ಈ ಮಧ್ಯಂತರ ಆದೇಶ ಮಾಡಿದೆ.

Kannada Bar & Bench
kannada.barandbench.com