ಪೂರ್ವಾನುಮತಿ ಇಲ್ಲದೇ ಪ್ರತಿಭಟನೆ: ತೇಜಸ್ವಿನಿ ಗೌಡ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಕಾಂಗ್ರೆಸ್‌ ಸರ್ಕಾರ ಜನವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಬಸವರಾಜ ಬೊಮ್ಮಾಯಿ, ಅಶೋಕ, ತೇಜಸ್ವಿನಿ ಗೌಡ ಸೇರಿದಂತೆ 30ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿತ್ತು.
Karnataka High Court
Karnataka High Court
Published on

ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಆರೋಪ ಎದುರಿಸುತ್ತಿರುವ ಮಾಜಿ ವಿಧಾನ ಪರಿಷತ್‌ ಸದಸ್ಯೆ ಹಾಗೂ ಮಾಜಿ ಸಂಸದೆ ತೇಜಸ್ವಿನಿ ಗೌಡ (ಸದ್ಯ ಕಾಂಗ್ರೆಸ್‌ ಪಕ್ಷದಲ್ಲಿದ್ದಾರೆ) ವಿರುದ್ಧದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮಧ್ಯಂತರ ತಡೆ ನೀಡಿದೆ.

ತನ್ನ ವಿರುದ್ಧದ ಎಫ್‌ಐಆರ್‌ ಮತ್ತು ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ತೇಜಸ್ವಿನಿ ಗೌಡ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರಕರಣದ ಹಿನ್ನೆಲೆ: ಕಾಂಗ್ರೆಸ್‌ ಸರ್ಕಾರ ಜನವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಲಿ ವಿಪಕ್ಷ ನಾಯಕ ಆರ್‌ ಅಶೋಕ, ತೇಜಸ್ವಿನಿ ಗೌಡ ಸೇರಿದಂತೆ 30ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು 2023ರ ಜೂನ್ 20ರಂದು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ಪ್ರತಿಭಟನೆ ನಡೆಸಲು ನೀವುಗಳು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ಹೀಗಾಗಿ, ಪ್ರತಿಭಟನೆ ನಡೆಸಬೇಡಿ ಎಂದು ಸೂಕ್ತ ತಿಳಿವಳಿಕೆ ನೀಡಿದರೂ ಪ್ರತಿಭಟನೆ ಮುಂದುವರಿಸಿದರು ಎಂದು ಆರೋಪಿಸಿ ಹೈಗ್ರೌಂಡ್ಸ್‌ ಠಾಣೆಯ ಪಿಎಸ್‌ಐ ಅನಿಲ್‌ ಕುಮಾರ್‌ ಮುಳ್ಳೂರ ಅವರು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ತೇಜಸ್ವಿನಿ ಗೌಡ ಸೇರಿದಂತೆ ಇತರರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನ್ಯಾಯಾಲಯ ಆದೇಶಿಸಿತ್ತು.

ಭಾರತೀಯ ದಂಡ ಸಂಹಿತೆ ಸೆಕ್ಷನ್‌ 283, 188 ಮತ್ತು 34 ಹಾಗೂ ಕರ್ನಾಟಕ ಪೊಲೀಸ್ ಕಾಯಿದೆ ಸೆಕ್ಷನ್‌ 103ರ ಅಪರಾಧಗಳ ಅಡಿ ತನಿಖೆ ನಡೆಸಿ ಸಲ್ಲಿಸಲಾಗಿದ್ದ ಆರೋಪ ಪಟ್ಟಿಯನ್ನು ಮ್ಯಾಜಿಸ್ಟ್ರೇಟ್‌ (ಜನಪ್ರತಿನಿಧಿಗಳ) ವಿಶೇಷ ನ್ಯಾಯಾಲಯ 2025ರ ಫೆಬ್ರುವರಿ 12ರಂದು ವಿಚಾರಣೆಗೆ ಪರಿಗಣಿಸಿತ್ತು. 

Kannada Bar & Bench
kannada.barandbench.com