
ತೃತೀಯ ಲಿಂಗಿಗಳ ಬಟ್ಟೆ ತೆಗೆಸಿ, ಶೋಧಿಸಿ ಗುರುತು ಪತ್ತೆ ಮಾಡುವ ಸಮೀಕ್ಷಾ ವಿಧಾನಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸೆಪ್ಟೆಂಬರ್ 15ರಿಂದ ರಾಜ್ಯದಾದ್ಯಂತ ನಡೆಸಲಾಗುತ್ತಿರುವ ಯಾವುದೇ ಶಾಸನಬದ್ಧ ಅಥವಾ ರಕ್ಷಣೆ ಇಲ್ಲದ ತೃತೀಯ ಲಿಂಗಿಗಳ ಲಿಂಗ ಗುರುತು, ವೈದ್ಯಕೀಯ ಮತ್ತು ಸಾಮಾಜಿಕ ಮಾಹಿತಿ ಸಂಗ್ರಹಿಸುತ್ತಿರುವ ಸಮೀಕ್ಷೆಗೆ ಆಕ್ಷೇಪಿಸಿ ಮೈಸೂರಿನ ಬೋಗಾದಿಯಲ್ಲಿರುವ ಅನಿತಾ ಹ್ಯುಮ್ಯಾನಿಟೇರಿಯನ್ ಟ್ರಸ್ಟ್ ವತಿಯಿಂದ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
“ತೃತೀಯ ಲಿಂಗಿಗಳಿಗೆ ಸಂಬಂಧಿಸಿ ನಡೆಸುವ ಯಾವುದೇ ಸಮೀಕ್ಷೆಯನ್ನು ಕಡ್ಡಾಯವಾಗಿ ಗೌಪ್ಯವಾಗಿಡಬೇಕು. ಸಂಗ್ರಹಿಸಿದ ಮಾಹಿತಿಯನ್ನು ಹೇಗೆ ಗೌಪ್ಯತೆಯಿಂದ ಕಾಪಾಡಲಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದಂತೆ ಪೊಲೀಸ್ ಮಹಾನಿರ್ದೇಶಕರು ಮೂರು ದಿನಗಳಲ್ಲಿ ವಿಧಾನ ತಿಳಿಸಿ ಅಫಿಡವಿಟ್ ಸಲ್ಲಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.
“ತೃತೀಯ ಲಿಂಗಿಗಳು ಸ್ವಯಂಪ್ರೇರಿತವಾಗಿ ಸಮೀಕ್ಷೆಯಲ್ಲಿ ಭಾಗವಹಿಸುವುದನ್ನು ಸರ್ಕಾರ ಮತ್ತು ಸಂಬಂಧಿತರು ಖಾತರಿಪಡಿಸಬೇಕು. ಯಾರನ್ನೂ ಕರೆದು ಬಟ್ಟೆ ತೆಗೆಸಿ ಶೋಧಿಸಿ, ಗುರುತು ಪತ್ತೆ ಮಾಡಿ ಸಮೀಕ್ಷೆ ಮಾಡುವಂತಿಲ್ಲ” ಎಂದೂ ನ್ಯಾಯಾಲಯ ನಿರ್ದೇಶಿಸಿದೆ.
ಅಲ್ಲದೇ, ರಾಜ್ಯ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ತೃತೀಯ ಲಿಂಗಿಗಳ ರಾಷ್ಟ್ರೀಯ ಮಂಡಳಿ ಮತ್ತು ಜನಗಣತಿ ಆಯುಕ್ತರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲರು “ತೃತೀಯ ಲಿಂಗಿಗಳ ಖಾಸಗಿತನವನ್ನು ಉಲ್ಲಂಘಿಸಿ ಸರ್ಕಾರವು ಸಮೀಕ್ಷೆ ನಡೆಸುತ್ತಿದೆ. ಬಟ್ಟೆ ತೆಗೆಸಿ ಶೋಧಿಸಿ, ಗುರುತು ಪತ್ತೆ ಮಾಡುತ್ತಿರುವ ಸಮೀಕ್ಷೆಗೆ ತಡೆ ನೀಡಬೇಕು. ಇಲ್ಲಿಯವರೆಗೆ ಸಂಗ್ರಹಿಸಿರುವ ದತ್ತಾಂಶವನ್ನು ಗೌಪ್ಯವಾಗಿ ಇಡಬೇಕು” ಎಂದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು “ಸರ್ಕಾರದ ಪರವಾಗಿ ನೋಟಿಸ್ ಪಡೆದು, ಆಕ್ಷೇಪಣೆ ಸಲ್ಲಿಕೆ ಮಾಡಲಾಗುವುದು. ಸೆಪ್ಟೆಂಬರ್ 15ರಂದು ಸಮೀಕ್ಷೆ ಆರಂಭವಾಗಿದೆ. ಒಂದು ತಿಂಗಳಿಂದ ಸಮೀಕ್ಷೆ ನಡೆಯುತ್ತಿದ್ದು, ಯಾರೂ ಈ ಅಹವಾಲು ಎತ್ತಿಲ್ಲ. ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಪ್ರಕರಣವನ್ನು ನ್ಯಾಯಾಲಯವು ಡಿಸೆಂಬರ್ 5ಕ್ಕೆ ವಿಚಾರಣೆಗೆ ನಿಗದಿಪಡಿಸಿದೆ. ಅಂದೇ ಈ ಅರ್ಜಿಯನ್ನೂ ವಿಚಾರಣೆ ನಡೆಸಬಹುದು” ಎಂದರು.
ಆಗ ಪೀಠವು “ತೃತೀಯ ಲಿಂಗಿಗಳ ಗುರುತು ಪತ್ತೆಗೆ ಬಲವಂತ ಮಾಡುವಂತಿಲ್ಲ. ಆಸ್ಪತ್ರೆಗೆ ಹೋಗಿ ಬಟ್ಟೆ ತೆಗೆಸಿ ಗುರುತು ಪತ್ತೆ ಮಾಡು ವಿಧಾನ ಪಾಲಿಸುವಂತೆ ಸೂಚಿಸಲಾಗುತ್ತಿದೆಯೇ? ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಸುವುದಕ್ಕೆ ಕಾಯಿದೆ ಇದೆ. ಆದರೆ, ಈ ಸಮೀಕ್ಷೆ ನಡೆಸಲು ಯಾವುದೇ ಕಾನೂನು ಇಲ್ಲ. ಇದನ್ನು ಸರ್ಕಾರ ಮಾಡಬಾರದಲ್ಲವೇ?” ಎಂದು ಸರ್ಕಾರದ ವಕೀಲರನ್ನು ಪ್ರಶ್ನಿಸಿತು. ಅಂತಿಮವಾಗಿ ಇದಕ್ಕೆ ತಡೆ ನೀಡಿತು.
ಅರ್ಜಿದಾರರ ಮನವಿ: ಕಾನೂನುಬದ್ಧ, ಪಾರದರ್ಶಕ ಮತ್ತು ಹಕ್ಕು ಆಧಾರಿತವಾಗಿ ಚೌಕಟ್ಟು ರೂಪಿಸಿ ಸಂಬಂಧಿತರೊಂದಿಗೆ ಸಮಾಲೋಚಿಸುವವರೆಗೆ ತೃತೀಯ ಲಿಂಗಿಗಳ ಸಮೀಕ್ಷೆ ನಡೆಸಬಾರದು. ಸಂವಿಧಾನದ 14, 15, 19(1)(a), 21ನೇ ವಿಧಿಗಳ ವಿರುದ್ಧವಾಗಿ ಖಾಸಗಿತನ ಉಲ್ಲಂಘಿಸಿ ನಡೆಸುತ್ತಿರುವ ಸಮೀಕ್ಷೆಯನ್ನು ಅಸಾಂವಿಧಾನಿಕ ಮತ್ತು ಸ್ವೇಚ್ಛೆಯ ಕ್ರಮ ಎಂದು ಘೋಷಿಸಬೇಕು. ಸಾಮಾಜಿಕ ನ್ಯಾಯ ತಜ್ಞರು, ಸಮುದಾಯದ ಮುಖಂಡರು ಮತ್ತು ಶಾಸನಬದ್ಧ ಸಂಸ್ಥೆಯಾದ ತೃತೀಯ ಲಿಂಗಿಗಳ ರಾಷ್ಟ್ರೀಯ ಮಂಡಳಿ ಜೊತೆ ಸಮಾಲೋಚಿಸಿ, ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ ಮತ್ತು ನಿಯಮಕ್ಕೆ ಪೂರಕವಾಗಿ ಹೊಸದಾಗಿ ದತ್ತಾಂಶ ಸಂಗ್ರಹ ಅಥವಾ ನೀತಿ ರೂಪಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು. ಈಗ ಆಕ್ಷೇಪಾರ್ಹ ಸ್ಟ್ರಿಪ್ ಅಂಡ್ ಸರ್ಚ್ ವಿಧಾನದಿಂದ ಸಂಗ್ರಹಿಸಿರುವ ದತ್ತಾಂಶವನ್ನು ನಾಶಪಡಿಸಲು ನಿರ್ದೇಶಿಸಬೇಕು. ಲಿಂಗತ್ವ ಗುರುತು ದತ್ತಾಂಶ, ಖಾಸಗಿತನ ಮತ್ತು ತೃತೀಯ ಲಿಂಗಿಗಳ ಘನತೆಗೆ ಪೂರಕವಾಗಿ ಸಮಗ್ರವಾದ ಮಾರ್ಗಸೂಚಿಗಳನ್ನು ರೂಪಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.