ಫಲಾನುಭವಿ ಬಂಡವಾಳ ಕೊಡುಗೆ ಶುಲ್ಕ (ಬೆನಿಫಿಷಿಯರಿ ಕ್ಯಾಪಿಟಲ್ ಕಾಂಟ್ರಿಬ್ಯೂಷನ್) ಮತ್ತು ಗ್ರೇಟರ್ ಬೆಂಗಳೂರು ನೀರಿನ ಒಳಚರಂಡಿ ಯೋಜನಾ ಶುಲ್ಕವು ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ಉದ್ದೇಶಿತ ವಸತಿ ಸಮುಚ್ಚಯಗಳಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲ್ಯುಎಸ್‌ಎಸ್‌ಬಿ) ಬಿಬಿಎಂಪಿ ಕಟ್ಟಡ ಬೈಲಾ ಪ್ರಕಾರ ಶುಲ್ಕ ವಿಧಿಸಿರುವುದರ ಸಿಂಧುತ್ವ ಪ್ರಶ್ನಿಸಿ ಶೋಭಾ ಲಿಮಿಟೆಡ್ ಮತ್ತು ಇತರೆ ಐವರು ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.
ಮುಂಗಡ ಸಂಭವನೀಯ ಪ್ರೊ ರಾಟಾ ಶುಲ್ಕಗಳು ಮತ್ತು ನಿರ್ಮಾಣಕ್ಕಾಗಿ ಸಂಸ್ಕರಿಸಿದ ನೀರಿನ ಶುಲ್ಕಗಳ ಬೇಡಿಕೆಗೆ ಕಾನೂನಿನ ಬೆಂಬಲ ಇರುವುದರಿಂದ ಅವುಗಳನ್ನು ಎತ್ತಿ ಹಿಡಿಯಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
“ಯಾವುದೇ ಪ್ರಯೋಜನ ಪಡೆದರೂ ಅದನ್ನು ಪಾವತಿಸಲು ಬದ್ಧರಾಗಿರುವ ನಾಗರಿಕರ ಮೇಲೆ ತೆರಿಗೆ ವಿಧಿಸಬಹುದು. ಆದರೆ, ಶುಲ್ಕದ ವಿಷಯಕ್ಕೆ ಬಂದಾಗ, ಸೇವೆಗೆ ಪ್ರತಿಫಲ ಎನ್ನುವುದು ಷರತ್ತಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.
“ಯಾವುದೇ ಸೇವೆ ಪಡೆಯದೇ ಇರುವುದರಿಂದ ಶುಲ್ಕ ಪಾವತಿಸಲು ತಾವು ಸಿದ್ಧರಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಮಂಡಳಿಯಿಂದ ಒಳಚರಂಡಿಯೂ ಸೇವೆಯಾಗಿದೆ. ಮಂಡಳಿಯು ಒಳಚರಂಡಿ ನಿರ್ವಹಿಸದಿದ್ದರೆ ಇದು ಅರಾಜಕತೆಗೆ ನಾಂದಿಯಾಗಲಿದೆ. ಆದರೆ, ಕಾನೂನಿಗೆ ವಿರುದ್ಧವಾಗಿ ಮಂಡಳಿಯು ಶುಲ್ಕ ವಿಧಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
“ಎನ್‌ಒಸಿ ನೀಡಲು ಸೇವೆಯನ್ನು ಪಡೆಯದೇ ಇದ್ದರೂ ಬಿಡಬ್ಲ್ಯುಎಸ್‌ಎಸ್‌ಬಿಯು ಶುಲ್ಕ ವಿಧಿಸುವಂತಿಲ್ಲ. ಸಂವಿಧಾನದ 265ನೇ ವಿಧಿಯ ಅನ್ವಯ ತಮಗೆ ವಿಧಿಸಿರುವ ಶುಲ್ಕವು ಅಸಾಂವಿಧಾನಿಕ, ಅಕ್ರಮವಾಗಿದೆ” ಎಂದು ಅರ್ಜಿದಾರರು ವಾದಿಸಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಬಿಡಬ್ಲ್ಯುಎಸ್‌ಎಸ್‌ಬಿಯು, “ಕಟ್ಟಡ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ ಕೋರುವವರಿಗೆ ಕಾಯಿದೆಯ ಅನ್ವಯ ಪ್ರೊ ರೇಟಾ ಶುಲ್ಕ ವಿಧಿಸಲು, ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿತ ನೀರಿನ ಶುಲ್ಕ ವಿಧಿಸಲು ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಯೋಜನಾ ಶುಲ್ಕ ವಿಧಿಸಲು ಅವಕಾಶವಿದೆ” ಎಂದು ವಾದಿಸಿತ್ತು.
ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಗ್ರಾಮಗಳ ವ್ಯಾಪ್ತಿಯಲ್ಲಿರುವ ನಿವಾಸಿಗಳಿಂದ ಫಲಾನುಭವಿಗಳ ಬಂಡವಾಳ ಕೊಡುಗೆ ಶುಲ್ಕ ವಸೂಲಿ ಮಾಡುವ ಕುರಿತು ಬಿಡಬ್ಲ್ಯುಎಸ್‌ಎಸ್‌ಬಿಯು “ಈ ಶುಲ್ಕವು ವಿಶೇಷವಾಗಿ ಬಹು ಅಂತಸ್ಥಿನ ಕಟ್ಟಡಗಳನ್ನು ಸೇರ್ಪಡೆ ಮಾಡಲು ವಿಧಿಸಿರುವ ಏಕಕಾಲದ ಶುಲ್ಕವಾಗಿದೆ” ಎಂದಿತ್ತು.
ಪ್ರಕರಣದ ಹಿನ್ನೆಲೆ: ಶೋಭಾ ಲಿಮಿಟೆಡ್ ಮತ್ತು ಇತರ ಐವರು ಅರ್ಜಿದಾರರಿಗೆ ನಿರಾಕ್ಷೇಪಣಾ ಪತ್ರ ನೀಡಲು 1.1 ಕೋಟಿ ರೂಪಾಯಿ ಪಾವತಿಸುವಂತೆ ಬಿಬಿಎಂಪಿ ಸೂಚಿಸಿತ್ತು. ಇದರಲ್ಲಿ 54,48,000 ಫಲಾನುಭವಿ ಬಂಡವಾಳ ಕೊಡುಗೆ ಶುಲ್ಕ, 49,85,548 ಮುಂಗಡ ಸಾಧ್ಯತೆ ಪ್ರೊ ರೇಟಾ ಶುಲ್ಕ ಮತ್ತು ಎನ್‌ಒಸಿ ಪಡೆಯುವುದಕ್ಕೂ ಮುನ್ನ ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರಿನ ಶುಲ್ಕ 8,30,925 ಸೇರಿದೆ.
ಶುಲ್ಕದ ಹಿನ್ನೆಲೆ: ಬಿಡಬ್ಲ್ಯುಎಸ್‌ಎಸ್‌ಬಿಯು 2008ರಿಂದ ಗ್ರೇಟರ್ ಬೆಂಗಳೂರು ನೀರು ಒಳಚರಂಡಿ ಯೋಜನಾ ಶುಲ್ಕವನ್ನು ವಸೂಲಿ ಮಾಡುತ್ತಿದೆ. 2007ರಲ್ಲಿ ಬಿಬಿಎಂಪಿಗೆ ಸೇರ್ಪಡೆಯಾದ ಏಳು ನಗರಸಭೆ ಮತ್ತು ಒಂದು ಪುರಸಭೆಗೆ ಇದು ಅನ್ವಯಿಸುತ್ತದೆ. ಈ ಶುಲ್ಕವು ಆಸ್ತಿ ಎಲ್ಲಿದೆ ಎಂಬುದನ್ನು ಆಧರಿಸಿ 5,000 ರಿಂದ 24,000ರವರೆಗೆ ಇದೆ.
2008ರಲ್ಲಿ ನಗರ ವ್ಯಾಪ್ತಿಗೆ ಸೇರ್ಪಡೆಯಾದ 110 ಗ್ರಾಮಗಳಿಗೆ ಫಲಾನುಭವಿ ಕೊಡುಗೆ ಶುಲ್ಕ (ಬಿಸಿಸಿ) ಅನ್ವಯಿಸಲಿದೆ. 600 ಚದರ ಅಡಿ ವಸತಿಗಳಿಗೆ 5,000 ರೂಪಾಯಿ ಬಿಸಿಸಿ ಇದ್ದು, ಇದು ಮನೆ ಮತ್ತು ಅದರ ವಿಸ್ತೀರ್ಣ ಆಧರಿಸಿ ಬದಲಾವಣೆಯಾಗಲಿದೆ. ನಳ ವ್ಯವಸ್ಥೆ ಪಡೆಯಲು ಇವೆರಡನ್ನೂ ಒಂದು ಬಾರಿಗೆ ಪಾವತಿಸಬೇಕಿದೆ. ಶುಲ್ಕ ವಿಧಿಸಲು ಸರ್ಕಾರ ಒಪ್ಪಿದ್ದು, ಬಿಡಬ್ಲ್ಯುಎಸ್‌ಎಸ್‌ಬಿ ಮೇಲಿನ ಒತ್ತಡ ಕಡಿಮೆ ಮಾಡಲು ಕರ ವಸೂಲಿ ಮಾಡಲಾಗುತ್ತಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಹೇಳಿದೆ. ಈ ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಬಿಡಬ್ಲ್ಯುಎಸ್‌ಎಸ್‌ಬಿ 5,000 ಕೋಟಿ ರೂಪಾಯಿಗೂ ಅಧಿಕ ಹಣ ವೆಚ್ಚ ಮಾಡಿದೆ. ನೀರಿನ ವ್ಯವಸ್ಥೆ ಆರಂಭವಾಗಲು ಅಪಾರ ಪ್ರಮಾಣದ ಮೂಲಸೌಕರ್ಯ ಕಲ್ಪಿಸಬೇಕಿರುವುದನ್ನು ಪರಿಗಣಿಸಿ ಈ ಕರ ವಸೂಲಿ ಮಾಡಲಾಗುತ್ತಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಹೇಳಿದೆ.