[ಪಿಎಸ್‌ಐ ನೇಮಕಾತಿ ಹಗರಣ] ಆರ್‌ ಡಿ ಪಾಟೀಲ್‌ ಅಪರಾಧ ಚಳಿಯವ ಎಂದ ಹೈಕೋರ್ಟ್‌: ಜಾಮೀನು ನಿರಾಕರಣೆ

“ರುದ್ರೇಗೌಡ ಪಾಟೀಲ್‌ ಮೇಲ್ನೋಟಕ್ಕೆ ಹಲವು ನೇಮಕಾತಿ ಅಕ್ರಮಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ, ಆತನಿಗೆ ಅಕ್ರಮವೆಸಗುವುದೇ ಚಟವಾಗಿದೆ. ಹೀಗಾಗಿ, ಜಾಮೀನು ನೀಡಲು ಸಾಧ್ಯವಿಲ್ಲ” ಎಂದಿರುವ ಹೈಕೋರ್ಟ್‌ನ ಕಲಬುರ್ಗಿ ಪೀಠ.
R D Patil
R D Patil
Published on

ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣ ಸೇರಿದಂತೆ ಹಲವು ನೇಮಕಾತಿ ಅಕ್ರಮಗಳ ಹಿಂದಿನ ರೂವಾರಿ ಎನ್ನಲಾದ ಆರ್‌ ಡಿ ಪಾಟೀಲ್‌ ಅಲಿಯಾಸ್‌ ರುದ್ರಗೌಡ ಪಾಟೀಲ್‌ಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಜಾಮೀನು ನಿರಾಕರಿಸಿದೆ. ಹೀಗಾಗಿ, ಕೋಕಾ ಕಾಯಿದೆಯಡಿ 2023ರಲ್ಲಿ ಬಂಧನಕ್ಕೊಳಗಾಗಿ ಸದ್ಯ ಮೈಸೂರು ಕಾರಾಗೃಹದಲ್ಲಿರುವ ಪಾಟೀಲ್‌ಗೆ ಸದ್ಯಕ್ಕೆ ಜೈಲು ಕಾಯಂ ಆಗಿದೆ.

“ಅರ್ಜಿದಾರ ರುದ್ರೇಗೌಡ ಪಾಟೀಲ್‌ ಮೇಲ್ನೋಟಕ್ಕೆ ಹಲವು ನೇಮಕಾತಿ ಅಕ್ರಮಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ, ಆತನಿಗೆ ಅಕ್ರಮವೆಸಗುವುದೇ ಚಟವಾಗಿದೆ. ಹೀಗಾಗಿ, ಜಾಮೀನು ನೀಡಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಕೆ ರಾಜೇಶ್‌ ರೈ ಅವರ ಏಕಸದಸ್ಯ ಪೀಠ ಸ್ಪಷ್ಟವಾಗಿ ಹೇಳಿದೆ.

Justice K Rajesh Rai
Justice K Rajesh Rai

“ನೇಮಕಾತಿ ಪರೀಕ್ಷೆಗಳನ್ನು ತಿರುಚುವ, ಅಕ್ರಮ ಎಸಗುವ ಕ್ರಿಮಿನಲ್‌ ಪಿತೂರಿಗಳಲ್ಲಿ ಪಾಟೀಲ್‌ ಪಾತ್ರವನ್ನು ತೋರಿಸುವ ಪ್ರಾಥಮಿಕ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್‌ ಸಲ್ಲಿಸಿದೆ. ತನಿಖಾಧಿಕಾರಿಗಳು ಪಾಟೀಲ್‌ ಖರೀದಿಸಿದ ಮೊಬೈಲ್‌ ಫೋನ್‌ ಮತ್ತು ಸಿಮ್‌ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಂಚನೆಗೆ ಅವರನ್ನು ಲಿಂಕ್‌ ಮಾಡುವ ಕರೆ ವಿವರ ದಾಖಲೆ ಸಲ್ಲಿಸಿದ್ದಾರೆ. ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷೆಗಳ ಸಂಬಂಧ ಎಂಟು ಪ್ರಕರಣಗಳು ಮತ್ತು 2021ರ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ಸೇರಿದಂತೆ ಪರೀಕ್ಷಾ ದುಷ್ಕೃತ್ಯಕ್ಕಾಗಿ ಪಾಟೀಲ್‌ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ಹೀಗಾಗಿ, ಜಾಮೀನು ನೀಡಲಾಗದು” ಎಂದು ಆದೇಶಿಸಿದೆ.

ಪಾಟೀಲ್‌ ಪರ ಹಿರಿಯ ವಕೀಲ ಅಮೀತ್‌ ಕುಮಾರ್‌ ದೇಶಪಾಂಡೆ ಅವರು “ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಎಲ್ಲಾಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ. ಪಾಟೀಲ್‌ ಈಗಾಗಲೇ ಎರಡು ವರ್ಷಕ್ಕೂ ಅಧಿಕ ಕಾಲದಿಂದ ಸೆರೆವಾಸದಲ್ಲಿದ್ದಾರೆ. ಅವರನ್ನು ನ್ಯಾಯಾಂಗ ಬಂಧನದಲ್ಲಿ ಮುಂದುವರಿಸುವ ಅವಕಶ್ಯಕತೆ ಇಲ್ಲ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದ್ದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಾಸಿಕ್ಯೂಷನ್‌ ಪರ ವಿಶೇಷ ವಕೀಲ ಎಂ ಸುದರ್ಶನ್‌ ಅವರು “ಆರೋಪಿ ಪರೀಕ್ಷಾ ಅಕ್ರಮಗಳು ಸೇರಿದಂತೆ ಬೇರೆಬೇರೆ ಆರೋಪಕ್ಕೆ ಸಂಬಂಧಿಸಿದಂತೆ 26 ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಎಲ್ಲಾ ಪ್ರಕರಣಗಳಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಅದರಲ್ಲಿ ಪ್ರಮುಖವಾಗಿ 2021ರಲ್ಲಿ ನಡೆದಿದ್ದ ಪಿಎಸ್‌ಐ ನೇಮಕ ಹಗರಣವೂ ಸೇರಿದೆ” ಎಂದರು.

ಅಲ್ಲದೇ, “ಕಳೆದ ವರ್ಷ ಮೂರು ವಾರಗಳ ಮಧ್ಯಂತರ ಜಾಮೀನು ಪಡೆದಾಗ ಕಲಬುರಗಿಯಲ್ಲಿ ಜೈಲು ಅಧಿಕಾರಿಗಳೊಂದಿಗೆ ಪಾಟೀಲ್‌ ಜಗಳವಾಡಿದ್ದರು. ಇದರಿಂದಾಗಿ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ” ಎಂದು ನ್ಯಾಯಾಲಯದ ಗಮನಸೆಳೆದಿದ್ದರು.

ಪ್ರಕರಣದ ಹಿನ್ನೆಲೆ: ಹಣಕಾಸು ಗುಪ್ತಚರ ಘಟಕದ ಪೊಲೀಸ್‌ ವರಿಷ್ಠಾಧಿಕಾರಿ ರಾಘವೇಂದ್ರ ಹೆಗ್ಡೆ ನೇತೃತ್ವದ ಅಪರಾಧ ತನಿಖಾ ವಿಭಾಗದ (ಸಿಐಡಿ)ವಿಶೇಷ ತಂಡ ಪಾಟೀಲ್‌ರನ್ನು 2023ರ ನವೆಂಬರ್‌ನಲ್ಲಿ ಬಂಧಿಸಿತ್ತು. ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ (ಕೋಕಾ) ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ಹೂಡಲಾಗಿದೆ. ಸದ್ಯ ಆತ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ನೇಮಕ ಪರೀಕ್ಷೆಗಳಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಐಡಿ ಪಾಟೀಲ್‌ ಅವರನ್ನು ಬಂಧಿಸಿದೆ.

ಆರೋಪ ಪಟ್ಟಿಯ ಪ್ರಕಾರ ಕಲಬುರ್ಗಿಯ ಪ್ರಥಮ ದರ್ಜೆ ಸಿವಿಲ್‌ ಗುತ್ತಿಗೆದಾರ ಪಾಟೀಲ್‌, ಅಭ್ಯರ್ಥಿಗಳಿಗೆ ಪರೀಕ್ಷೆಗಳಲ್ಲಿ ನಕಲು ಮಾಡಲು ಸಹಾಯ ಮಾಡಲು ಬ್ಲೂಟೂತ್‌ ಸಾಧನಗಳು ಮತ್ತು ವಾಕಿ-ಟಾಕಿಗಳಂತಹ ಎಲೆಕ್ಟ್ರಾನಿಕ್‌ ಸಾಧನಗಳನ್ನು ಪೂರೈಸಿದ್ದಾರೆ. ತನಿಖಾಧಿಕಾರಿಗಳು ಅವರು ಹಲವು ನೇಮಕಾತಿ ಪರೀಕ್ಷೆಗಳಲ್ಲಿ ಇದೇ ರೀತಿಯ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

Attachment
PDF
R D Patil @ Rudragouda Vs State of Karnataka
Preview
Kannada Bar & Bench
kannada.barandbench.com