
ಆನ್‌ಲೈನ್-ಆಫ್‌ಲೈನ್ ಬೆಟ್ಟಿಂಗ್ ಆರೋಪದ ಮೇಲೆ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಕಾಂಗ್ರೆಸ್ ಶಾಸಕ ಕೆ ಸಿ ವೀರೇಂದ್ರ ಅಲಿಯಾಸ್ ಪಪ್ಪಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಎತ್ತಿ ಹಿಡಿದಿದೆ. ಇದರಿಂದ ವೀರೇಂದ್ರ ಅವರಿಗೆ ಹಿನ್ನಡೆಯಾಗಿದ್ದು, ಅವರ ಜೈಲುವಾಸ ಮುಂದುವರಿಯಲಿದೆ.
ಪಪ್ಪಿ ಅವರ ಬಂಧನ ಅಕ್ರಮ ಎಂದು ಘೋಷಿಸಬೇಕು ಎಂದು ಕೋರಿ ಅವರ ಪತ್ನಿ ಆರ್ ಡಿ ಚೈತ್ರಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ಇಂದು ವಜಾಗೊಳಿಸಿತು.
“ಅರ್ಜಿ ವಜಾಗೊಳಿಸಲಾಗಿದೆ” ಎಂದು ಪೀಠ ಹೇಳಿತು. ಆಗ ವೀರೇಂದ್ರ ಪಪ್ಪಿಯ ಪತ್ನಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಚಂದ್ರಮೌಳಿ ಅವರು “ನ್ಯಾಯಾಲಯದ ಅಬ್ಸರ್ವೇಶನ್ ಅಗತ್ಯವಿದೆ. ಏಕೆಂದರೆ ಈ ಪ್ರಕ್ರಿಯೆಯು ಬೇರೆ ಸಲ್ಲಿಕೆ ಮಾಡುವ ಅಥವಾ ಬಾಕಿ ಇರುವ ಪ್ರಕ್ರಿಯೆ ಮೇಲೆ ಪರಿಣಾಮ ಉಂಟು ಮಾಡಬಾರದು. ಜಾಮೀನು ಅರ್ಜಿಯು ಬಾಕಿ ಇದೆ..” ಎಂದರು.
“ವೀರೇಂದ್ರ ಪಪ್ಪಿ ಅವರ ವಿರುದ್ಧದ ನಾಲ್ಕು ಎಫ್‌ಐಆರ್‌ಗಳು ಮುಕ್ತಿ ಕಂಡಿರುವುದರಿಂದ ಜಾರಿ ನಿರ್ದೇಶನಾಲಯ ಬಂಧಿಸಲು ಸಾಧ್ಯವಿರಲಿಲ್ಲ. ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪೊಲೀಸರು ಸಕ್ಷಮ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದು, ಎಫ್‌ಐಆರ್ ಜೀವಂತವಾಗಿದೆ. ಪಿಎಂಎಲ್‌ಎ ಸೆಕ್ಷನ್ 2(1)(ಯು)ಗೆ ತಿದ್ದುಪಡಿ ಮಾಡಿರುವುದು ಜಾರಿ ನಿರ್ದೇಶನಾಲಯಕ್ಕೆ ಮುಂದುವರಿಯಲು ಅವಕಾಶ ಕಲ್ಪಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ತಿದ್ದುಪಡಿಯ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಮೌಖಿಕವಾಗಿ ಹೇಳಿದ ನ್ಯಾಯಾಲಯವು “ಹಾಲಿ ಅಬ್ಸರ್ವೇಷನ್ ಇಲ್ಲಿಗೆ ಮಾತ್ರ ಸೀಮಿತವಾಗಿದ್ದು, ಪಪ್ಪಿ ಅವರು ಸಲ್ಲಿಸುವ ಜಾಮೀನು ಮತ್ತಿತರರ ಅರ್ಜಿಗಳಿಗೆ ಅನ್ವಯಿಸುವುದಿಲ್ಲ. ಬಿ ವರದಿಯನ್ನು ಸಕ್ಷಮ ನ್ಯಾಯಾಲಯ ಒಪ್ಪಿಕೊಂಡರೆ ಪಪ್ಪಿ ಅವರು ಇಸಿಐಆರ್ ವಜಾಗೊಳಿಸಲು ಅರ್ಜಿ ಸಲ್ಲಿಸಲು ಅವಕಾಶ ಮುಕ್ತವಾಗಿರಲಿದೆ” ಎಂದು ಸ್ಪಷ್ಟಪಡಿಸಿತು.
ಇದನ್ನು ಆಲಿಸಿದ ಚಂದ್ರಮೌಳಿ ಅವರು “ಪ್ರಕರಣದ ಸಂಬಂಧ ನಾಳೆ ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗುತ್ತಿದೆ” ಎಂದರು. ವಿಸ್ತೃತ ಆದೇಶವನ್ನು ಇಂದೇ ಅಪ್‌ಲೋಡ್ ಮಾಡಿಸಲಾಗುವುದು ಎಂದು ಪೀಠ ಪ್ರತಿಕ್ರಿಯಿಸಿತು.
ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ಹಾರೋಹಳ್ಳಿ ಠಾಣೆಯಲ್ಲಿ ದೂರುದಾರ ಸುನೀಲ್ ಅವರು ಬೆಟ್ಟಿಂಗ್ ದಂಧೆ ಮತ್ತು ಅದರ ಸುತ್ತಲಿನ ಘಟನೆಗಳನ್ನು ಸವಿವರವಾಗಿ ದಾಖಲಿಸಿದ್ದಾರೆ. ಅದು 30 ಸಾವಿರ ರೂಪಾಯಿ ವಂಚನೆ ಪ್ರಕರಣವಾದರೂ ತನಿಖಾಧಿಕಾರಿಯೂ ಕೇವಲ 30 ಸಾವಿರ ರೂಪಾಯಿಗೆ ಸೀಮಿತವಾಗಿ ತನಿಖೆ ನಡೆಸುವುದಿಲ್ಲ. ಅದರ ಸುತ್ತಲಿನ ಘಟನೆಗಳನ್ನೂ ನೋಡುತ್ತಾರೆ. ಇದರಲ್ಲಿ ಫೋನ್ ಪೇನಲ್ಲಿ ನಡೆಸಿರುವ ಹಣ ವರ್ಗಾವಣೆಯು ತನಿಖೆಗೆ ವ್ಯಾಪ್ತಿಗೆ ಬಂದಿದೆ. ಹೀಗಾಗಿ, ಹಾರೋಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿರುವುದು, ಅದನ್ನು ಸಕ್ಷಮ ನ್ಯಾಯಾಲಯ ಒಪ್ಪದಿರುವುದು ವಿಚಾರವೇ ಅಲ್ಲ. ಇ ಡಿ ತನಿಖೆ ಮುಂದುವರಿಸಲು ಒಂದು ಪ್ರೆಡಿಕೇಟ್ ಅಪರಾಧ (ಅಕ್ರಮ ಗಳಿಕೆಗೆ ಕಾರಣವಾದ ಮೂಲ ಅಪರಾಧ) ಸಾಕು. ಅಲ್ಲದೇ, ಪಿಎಂಎಲ್‌ಎ ಸೆಕ್ಷನ್ 2(1) (ಯು)ಗೆ ತಿದ್ದುಪಡಿ ಮಾಡಿರುವುದು ಇ ಡಿ ಮುಂದುವರಿಯಲು ಅವಕಾಶ ಕಲ್ಪಿಸುತ್ತದೆ” ಎಂದಿದ್ದರು.