ಇಬ್ಬರು ಪ್ರಯಾಣಿಕರಿಗೆ ಟಿಕೆಟ್ ನೀಡದ ಆರೋಪ: ವಜಾಗೊಂಡಿದ್ದ ಬಸ್ ನಿರ್ವಾಹಕನ ಮರುನೇಮಕ ಆದೇಶ ಎತ್ತಿಹಿಡಿದ ಹೈಕೋರ್ಟ್

ನೌಕರನ ವಿವರಣೆ ಪಡೆದರೂ ಫಲಿತಾಂಶ ಬದಲಾಗುತ್ತಿರಲಿಲ್ಲ ಎಂಬ ಊಹೆಯ ಮೇಲೆ ಆತನಿಗೆ ತನ್ನ ಸಮರ್ಥನೆ ಮಂಡಿಸುವ ಅವಕಾಶ ನಿರಾಕರಿಸಲಾಗದು. ನ್ಯಾಯಸಮ್ಮತ ವಿಚಾರಣೆಯೇ ಮುಖ್ಯ ಎಂದ ವಿಭಾಗೀಯ ಪೀಠ.
KSRTC
KSRTC
Published on: 

ಇಬ್ಬರು ಪ್ರಯಾಣಿಕರಿಗೆ ಟಿಕೆಟ್ ನೀಡದ ಆರೋಪದ ಮೇಲೆ ಸೇವೆಯಿಂದ ವಜಾಗೊಂಡಿದ್ದ ಬಸ್ ನಿರ್ವಾಹಕ ಮಂಟಯ್ಯ ಅವರನ್ನು ಮರುನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್‌ನ ಏಕಸದಸ್ಯಪೀಠ ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡದ ವಿಭಾಗೀಯಪೀಠ ಎತ್ತಿಹಿಡಿದಿದೆ.

ನೌಕರನಿಗೆ ತನ್ನ ವಿರುದ್ಧದ ಆರೋಪಗಳಿಗೆ ವಿವರಣೆ ನೀಡುವ ಅವಕಾಶ ಕಲ್ಪಿಸಿದ್ದರೂ ವಿಚಾರಣೆಯ ಫಲಿತಾಂಶದಲ್ಲಿ ಬದಲಾವಣೆಯಾಗುತ್ತಿರಲಿಲ್ಲ ಎಂಬ ಊಹೆಯ ಆಧಾರದ ಮೇಲೆ ಆತನಿಗೆ ಸಮರ್ಥನೆ ಮಂಡಿಸುವ ಹಕ್ಕನ್ನು ನಿರಾಕರಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಏಕಸದಸ್ಯಪೀಠವು 2022ರ ನವೆಂಬರ್ 10ರಂದು ನೀಡಿದ್ದ ಆದೇಶ ಪ್ರಶ್ನಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಂ ನಾಗಪ್ರಸನ್ನ ಮತ್ತು ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ.

ಮಂಟಯ್ಯ ಅವರು ವಿಚಾರಣೆಯಲ್ಲಿ ಸ್ವತಃ ಸಾಕ್ಷ್ಯ ನೀಡಿರಲಿಲ್ಲ. ಅಲ್ಲದೆ, ಆಡಳಿತ ಮಂಡಳಿಯ ಸಾಕ್ಷ್ಯ ಮಂಡನೆ ಪೂರ್ಣಗೊಂಡ ಬಳಿಕ ತಮ್ಮ ಪರ ಸಾಕ್ಷ್ಯ ಮಂಡಿಸಲು ಅವರಿಗೆ ಅವಕಾಶವನ್ನೂ ನೀಡಿರಲಿಲ್ಲ ಎಂಬುದನ್ನು ವಿಭಾಗೀಯಪೀಠ ಗಮನಿಸಿದೆ.

Justices M Nagaprasanna & Hema Kulkarni
Justices M Nagaprasanna & Hema Kulkarni

ನಿರ್ವಾಹಕರನ್ನು ತಪ್ಪಿತಸ್ಥರೆಂದು ಘೋಷಿಸಿ ಸೇವೆಯಿಂದ ವಜಾಗೊಳಿಸುವ ಮೊದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ (ನಡತೆ ಮತ್ತು ಶಿಸ್ತು) ನಿಯಮಾವಳಿ, 1971ರ ನಿಯಮ 23(18)ರ ಅಡಿಯಲ್ಲಿ ಕಡ್ಡಾಯವಾಗಿ ನಡೆಸಬೇಕಿದ್ದ ಪ್ರಶ್ನಿಸುವ ಪ್ರಕ್ರಿಯೆಯನ್ನೂ ಅನುಸರಿಸಿರಲಿಲ್ಲ ಎಂದು ಪೀಠ ಹೇಳಿದೆ.

ತಮ್ಮ ಪರ ಸಾಕ್ಷ್ಯ ಮಂಡಿಸುವ ಅವಕಾಶ ಮತ್ತು ವಿರುದ್ಧದ ಸಾಕ್ಷ್ಯದಲ್ಲಿನ ಅಂಶಗಳಿಗೆ ವಿವರಣೆ ನೀಡುವ ಅಂತಿಮ ಶಾಸನಬದ್ಧ ಅವಕಾಶ ಎರಡನ್ನೂ ಮಂಟಯ್ಯ ಅವರಿಗೆ ನಿರಾಕರಿಸಲಾಗಿದೆ. ಇದರಿಂದ ಅವರ ಪ್ರತಿವಾದ ಮಂಡಿಸುವ ಹಕ್ಕಿಗೆ ಧಕ್ಕೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ನೌಕರನಿಗೆ ಅವಕಾಶ ನೀಡಿದ್ದರೆ ವಿಚಾರಣೆಯ ಫಲಿತಾಂಶ ಖಚಿತವಾಗಿ ಬದಲಾಗುತ್ತಿತ್ತೇ ಎಂಬುದಷ್ಟೇ ಮುಖ್ಯವಲ್ಲ. ಕಾನೂನು ಒದಗಿಸಿರುವ ಅರ್ಥಪೂರ್ಣ ಅವಕಾಶವನ್ನು ನಿರಾಕರಿಸಲಾಗಿದೆಯೇ ಎಂಬುದು ಮುಖ್ಯ” ಎಂದು ವಿಭಾಗೀಯ ಪೀಠ ಹೇಳಿದೆ.

ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರಕ್ಕಿಂತ ನ್ಯಾಯಸಮ್ಮತವಾಗಿ ನಡೆದುಕೊಳ್ಳುವ ಕರ್ತವ್ಯಕ್ಕೆ ಆದ್ಯತೆ ನೀಡಬೇಕು ಎಂದು ನ್ಯಾಯಾಲಯ ಒತ್ತಿಹೇಳಿದೆ.

ನಿಯಮ 23(18)ರ ಪಾಲನೆಯಾಗದಿರುವುದನ್ನು ಗುರುತಿಸಿದ್ದ ಏಕಸದಸ್ಯ ಪೀಠ, ಮಂಟಯ್ಯ ಅವರನ್ನು ಮರುನೇಮಕ ಮಾಡಿಕೊಳ್ಳುವಂತೆ ಆದೇಶಿಸಿತ್ತು. ಅಲ್ಲದೆ, ಸೇವೆಯಿಂದ ವಜಾಗೊಳಿಸುವ ಶಿಕ್ಷೆಯನ್ನು ಸಂಚಿತ ಪರಿಣಾಮದೊಂದಿಗೆ ಎರಡು ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯುವ ಶಿಕ್ಷೆಯಾಗಿ ಪರಿವರ್ತಿಸಿತ್ತು.

ಪ್ರಕರಣದ ಹಿನ್ನೆಲೆ: 2012ರ ಆಗಸ್ಟ್‌ನಲ್ಲಿ ಮಂಟಯ್ಯ ಕರ್ತವ್ಯದಲ್ಲಿದ್ದ ಬಸ್‌ನ್ನು ತನಿಖಾ ತಂಡ ತಪಾಸಣೆ ನಡೆಸಿದಾಗ ಇಬ್ಬರು ಪ್ರಯಾಣಿಕರಿಗೆ ಟಿಕೆಟ್ ನೀಡಿರಲಿಲ್ಲ ಮತ್ತು ಅವರಿಂದ ತಲಾ ₹146 ಪ್ರಯಾಣ ದರ ಸಂಗ್ರಹಿಸಿರಲಿಲ್ಲ ಎಂಬುದು ಪತ್ತೆಯಾಗಿತ್ತು.

ಈ ಸಂಬಂಧ ನಡೆದ ಶಿಸ್ತು ವಿಚಾರಣೆಯ ಬಳಿಕ 2014ರಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ವಜಾ ಆದೇಶ ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕಾರ್ಮಿಕ ನ್ಯಾಯಾಲಯ 2016ರಲ್ಲಿ ತಿರಸ್ಕರಿಸಿತ್ತು.

ಇದನ್ನು ಪ್ರಶ್ನಿಸಿ ಮಂಟಯ್ಯ ಹೈಕೋರ್ಟ್‌ನ ಏಕಸದಸ್ಯ ಪೀಠದ ಮೊರೆ ಹೋಗಿದ್ದರು. ಏಕಸದಸ್ಯ ಪೀಠವು ಅವರ ವಜಾ ಆದೇಶವನ್ನು ಮಾರ್ಪಡಿಸಿ ಮರುನೇಮಕಕ್ಕೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸಾರಿಗೆ ಸಂಸ್ಥೆ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.