ನಕಲಿ ರಸೀದಿ ಪ್ರಕರಣ: ದೇವಸ್ಥಾನದ ನೌಕರನ ವಜಾ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್

“ದುಷ್ಕೃತ್ಯದ ಗಂಭೀರತೆ ನಂಬಿಕೆಯ ಉಲ್ಲಂಘನೆಯಲ್ಲಿದೆಯೇ ವಿನಾ ರೂಪಾಯಿ ಮೌಲ್ಯದಲ್ಲಿ ಅಲ್ಲ. ಸಣ್ಣ ಮೊತ್ತವು ಅಪ್ರಾಮಾಣಿಕತೆಯನ್ನು ಸಣ್ಣ ವಿಷಯವನ್ನಾಗಿಸುವುದಿಲ್ಲ” ಎಂದಿರುವ ನ್ಯಾಯಾಲಯ.
Karnataka High Court
Karnataka High Court
Published on

ನಕಲಿ ರಸೀದಿಗಳನ್ನು ನೀಡಿ ದೇವಾಲಯದ ನಿಧಿಯನ್ನು ದುರ್ಬಳಕೆ ಮಾಡಿದ ಆರೋಪದ ಮೇಲೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ಪ್ರಸಿದ್ಧ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಸಿಬ್ಬಂದಿಯೊಬ್ಬರನ್ನು ವಜಾ ಮಾಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಎತ್ತಿಹಿಡಿದಿದೆ.

ನಕಲಿ ರಸೀದಿಗಳನ್ನು ನೀಡಿ ವಂಚಿಸಿದ ಆರೋಪದ ಮೇಲೆ ಅಮಾನತಾಗಿರುವ ದ್ವಿತೀಯ ದರ್ಜೆ ಸಹಾಯಕ ರಾಜೇಶ್ ನಾಯಕ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

Justice Suraj Govindraj
Justice Suraj Govindraj

“ದುಷ್ಕೃತ್ಯದ ಗಂಭೀರತೆ ನಂಬಿಕೆಯ ಉಲ್ಲಂಘನೆಯಲ್ಲಿದೆಯೇ ವಿನಾ ರೂಪಾಯಿ ಮೌಲ್ಯದಲ್ಲಿ ಅಲ್ಲ. ಸಣ್ಣ ಮೊತ್ತವು ಅಪ್ರಾಮಾಣಿಕತೆಯನ್ನು ಸಣ್ಣ ವಿಷಯವನ್ನಾಗಿಸುವುದಿಲ್ಲ” ಎಂದು ಪೀಠ ಹೇಳಿದೆ.

ರಾಜ್ಯದ ಮುಜರಾಯಿ ದೇವಾಲಯಗಳ ಆದಾಯ ಸೋರಿಕೆ ತಡೆಯಲು ಮತ್ತು ಪಾರದರ್ಶಕತೆ ತರಲು  ಡಿಜಿಟಲ್ ಲೆಕ್ಕಪತ್ರ ವ್ಯವಸ್ಥೆ ಜಾರಿ ಮಾಡುವಂತೆ  ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಹಲವು ಆಡಳಿತಾತ್ಮಕ ಮಾರ್ಗಸೂಚಿಗಳನ್ನು ಹೊರಡಿಸಿದೆ.

ದೇವಾಲಯಕ್ಕೆ ಬರುವ ಭಕ್ತರ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು ದೇವರಿಗೆ ಎಸಗುವ ವಂಚನೆಯಾಗಿದೆ. ನಂಬಿಕೆಯ ಹುದ್ದೆಯಲ್ಲಿದ್ದು ಭ್ರಷ್ಟಾಚಾರ ಎಸಗಿದಾಗ ವಜಾ ಶಿಕ್ಷೆ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದೆ.  ಪ್ರಕರಣ ಸಂಬಂಧ ಮುಜರಾಯಿ ಇಲಾಖೆಯ ಪರವಾಗಿ ವಕೀಲ ಹರೀಶ್ಚಂದ್ರ ಮೊವ್ವಾರ್ ವಾದ ಮಂಡಿಸಿದ್ದರು.

ಪ್ರಕರಣದ ವಿಚಾರಣೆ ವೇಳೆ ದೇವಾಲಯಗಳಲ್ಲಿ ನಡೆಯುವ ಆರ್ಥಿಕ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿದ ಪೀಠವು, ಭವಿಷ್ಯದಲ್ಲಿ ಇಂತಹ ಅಕ್ರಮಗಳು ನಡೆಯದಂತೆ ತಡೆಯಲು ಇ-ಆಡಳಿತ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಪೂಜೆ, ಸೇವಾ ಟಿಕೆಟ್, ಕಾಣಿಕೆ, ಹುಂಡಿ, ವಸತಿ ನಿಲಯ ಹಾಗೂ ಇತರೆ ಆದಾಯ ಸಂಗ್ರಹ ಮತ್ತು ವೆಚ್ಚಗಳನ್ನು ನೈಜ-ಸಮಯದಲ್ಲಿ ನಮೂದಿಸುವ ಹಾಗೂ ಪರಿಶೀಲನೆಗೊಳಪಡಿಸುವ ಕೇಂದ್ರೀಕೃತ ತಂತ್ರಾಂಶ ರೂಪಿಸಬೇಕು.

ಪ್ರತಿಯೊಂದು ರಸೀದಿಗೂ ಯಂತ್ರಚಾಲಿತ ವಿಶಿಷ್ಟ ಸರಣಿ ಸಂಖ್ಯೆ ಇರಬೇಕು. ರಸೀದಿಯ ಸತ್ಯಾಸತ್ಯತೆಯನ್ನು ಭಕ್ತರು ತಕ್ಷಣವೇ ತಮ್ಮ ಮೊಬೈಲ್ ಮೂಲಕ ಪರಿಶೀಲಿಸಲು ಕ್ಯೂಆರ್ ಕೋಡ್ ವ್ಯವಸ್ಥೆ ಇರಬೇಕು.

ಒಂದೇ ಸರಣಿ ಸಂಖ್ಯೆಯ ರಸೀದಿಯನ್ನು ಎರಡನೇ ಬಾರಿ ಮುದ್ರಿಸಲು ವ್ಯವಸ್ಥೆಯಲ್ಲಿ ಅವಕಾಶವಿರಬಾರದು. ಅನಿವಾರ್ಯ ಸಂದರ್ಭಗಳಲ್ಲಿ ಹಿರಿಯ ಅಧಿಕಾರಿಯ ಅನುಮೋದನೆ ಪಡೆದು ರಸೀದಿಯ ಎರಡನೇ ಬಾರಿ ಮುದ್ರಿಸಲು  ಅವಕಾಶ ನೀಡಬೇಕು.

ಯುಪಿಐ, ಕ್ಯೂಆರ್ ಕೋಡ್, ಡೆಬಿಟ್, ಕ್ರೆಡಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿ ಮಾಡುವುದನ್ನು ಉತ್ತೇಜಿಸುವ ಮೂಲಕ ನಗದು ನಿರ್ವಹಣೆಯನ್ನು ಮಿತಿಗೊಳಿಸಬೇಕು.

ಹುಂಡಿ ಎಣಿಕೆ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಿರಬೇಕು. ಎಣಿಕೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ 'ಬಾಡಿ ಕ್ಯಾಮೆರಾ' ಧರಿಸುವುದನ್ನು ಕಡ್ಡಾಯಗೊಳಿಸಬೇಕು.

ದೇವಾಲಯದ ಚಿನ್ನಾಭರಣ, ಬೆಳ್ಳಿ ಮತ್ತು ಅಮೂಲ್ಯ ವಸ್ತುಗಳ ತೂಕ, ವಿವರ ಹಾಗೂ ಉನ್ನತ ಗುಣಮಟ್ಟದ ಫೋಟೋಗಳನ್ನೊಳಗೊಂಡ ಡಿಜಿಟಲ್ ದಾಸ್ತಾನು ವ್ಯವಸ್ಥೆ ಜಾರಿ ಮಾಡಬೇಕು.

ಈ ಎಲ್ಲ ಮಾರ್ಗಸೂಚಿಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲಾ ದೇವಾಲಯಗಳಿಗೂ ಅನ್ವಯಿಸಲಿದ್ದು, ಸಾರ್ವಜನಿಕ ಆಸ್ತಿ ಮತ್ತು ಭಕ್ತರ ಕಾಣಿಕೆಯನ್ನು ರಕ್ಷಿಸಲು ಈ ಕ್ರಮ ಅಗತ್ಯ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ರಾಜೇಶ್ ನಾಯಕ್ 2018ರ ಆಗಸ್ಟ್ 23 ರಿಂದ 25ರ ಅವಧಿಯಲ್ಲಿ ಐಟಿ ಅಡ್ಮಿನ್‌ ಅವರ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ದುರ್ಬಳಕೆ ಮಾಡಿಕೊಂಡಿದ್ದರು. ದೇವಾಲಯದಲ್ಲಿನ ದೇವರ ಸರ್ವಾಲಂಕಾರ ಪೂಜೆ' ಹಾಗೂ 'ಹೂವಿನ ಪೂಜೆ'ಗೆ ಬಂದ ಭಕ್ತರಿಗೆ ನಕಲಿ ರಸೀದಿಗಳನ್ನು ನೀಡಿದ್ದರು. ಸಂಗ್ರಹವಾದ ಹಣವನ್ನು ದೇವಾಲಯದ ಖಾತೆಗೆ ಜಮಾ ಮಾಡದೆ ದುರುಪಯೋಗಪಡಿಸಿಕೊಂಡಿದ್ದರು ಎಂಬ ಆರೋಪ ಎದುರಾಗಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಉಪವಿಭಾಗಾಧಿಕಾರಿಗಳು (ಎಸಿ) ವರದಿ ನೀಡಿದ ಬಳಿಕ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯು ರಾಜೇಶ್ ನಾಯಕ್​  ಅವರನ್ನು ಸೇವೆಯಿಂದ ವಜಾಗೊಳಿಸಿದ್ದರು.

Attachment
PDF
Rajesh Nayak Vs Religious & Charitable Endowments
Preview
Kannada Bar & Bench
kannada.barandbench.com