ಎಡಪಂಥ ಉಗ್ರವಾದಕ್ಕೆ ಆರ್ಥಿಕ ನೆರವು: ಅಮೆರಿಕ ಮಿಷನರಿಯ 6 ಮಂದಿ ವಿರುದ್ಧ ಯುಎಪಿಎ ಪ್ರಕರಣ ಎತ್ತಿಹಿಡಿದ ಹೈಕೋರ್ಟ್

“ರಾಷ್ಟ್ರೀಯ ಭದ್ರತೆ ಎನ್ನುವುದು ಒಂದು ರಾಷ್ಟ್ರದ ಸಾರ್ವಭೌಮತ್ವ, ಸ್ಥಿರತೆ ‍‍& ಸಾಂವಿಧಾನಿಕ ಕ್ರಮದ ಮೇಲೆ ನಿಂತಿರುವ ಅಗೋಚರ ಸುಂದರ ವಾಸ್ತುಶಿಲ್ಪ. ಇದಕ್ಕೆ ಧಕ್ಕೆ ತರುವ ಹಣಕಾಸು ಮಾರ್ಗಗಳ ವಿರುದ್ಧ ಕಣ್ಣಿಡುವುದು ಅಗತ್ಯ” ಎಂದು ಪೀಠ ಹೇಳಿದೆ.
UAPA
UAPA
Published on

ಉಗ್ರವಾದವನ್ನು ಪ್ರೋತ್ಸಾಹಿಸುವ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುವುದನ್ನು ತಡೆಯದಿದ್ದರೆ ಉಗ್ರಗಾಮಿ ಚಳವಳಿಗಳು ಬದುಕುಳಿಯಲು ಅನುವು ಮಾಡಿಕೊಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಭದ್ರತೆಯನ್ನು ರಕ್ಷಣೆ ಮಾಡಬೇಕಿರುವುದು ಸಾಮೂಹಿಕವಾದ ಸಾಂವಿಧಾನಿಕ ಬಾಧ್ಯತೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಅಭಿಪ್ರಾಯಪಟ್ಟಿದೆ.

ಎಡಪಂಥೀಯ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡಿದ ಆರೋಪದಡಿ ಅಮೆರಿಕದ ‘ದಿ ತಿಮೋತಿ ಇನಿಷಿಯೇಟಿವ್’ (ಟಿಟಿಐ) ಕ್ರಿಶ್ಚಿಯನ್ ಮಿಷನರಿ ಸಂಸ್ಥೆಯ ಆರು ಮಂದಿ ಪದಾಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಿರಾಕರಿಸಿದೆ.

“ಪ್ರಸಕ್ತ ದಿನಗಳಲ್ಲಿ ಉಗ್ರವಾದಕ್ಕೆ ನೀರೆರೆಯಲು ರಹಸ್ಯ ಹಣಕಾಸಿನ ಮೂಲಗಳು ಕೆಲಸ ಮಾಡುತ್ತಿವೆ. ಇಂತಹ ನಿಧಿಯು ಸೈದ್ಧಾಂತಿಕ ಉಗ್ರವಾದವನ್ನು ಸಂಘಟಿತ ಹಿಂಸಾಚಾರವಾಗಿ ಪರಿವರ್ತಿಸಬಹುದು ಮತ್ತು ರಾಷ್ಟ್ರೀಯ ಏಕತೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಬೆದರಿಕೆ ತಂದೊಡ್ಡಬಲ್ಲದು” ಎಂದು ಪೀಠ ಆತಂಕ ವ್ಯಕ್ತಪಡಿಸಿದೆ.

“ಅಕ್ರಮ ಮಾರ್ಗಗಳಲ್ಲಿ ಹರಿದಾಡುವ ಹಣಕಾಸು ಚಟುವಟಿಕೆಗಳನ್ನು ನಿಗ್ರಹಿಸಲು ಪರಿಣಾಮಕಾರಿಯಾದ ಗುಪ್ತಚರ ನಿಗಾ ವ್ಯವಸ್ಥೆ, ಕಟ್ಟುನಿಟ್ಟಾದ ನಿಯಂತ್ರಣಾ ಮೇಲ್ವಿಚಾರಣೆ, ಹಣ ವರ್ಗಾವಣೆ ವಿರೋಧಿ ಕಾಯಿದೆಯ ಅಡಿಯಲ್ಲಿ ಬಿಗಿಯಾದ ಕಾನೂನು ಕ್ರಮಗಳು ಜಾರಿಯಾಗಬೇಕು. ಇದಕ್ಕಾಗಿ ತನಿಖಾ ಸಂಸ್ಥೆಗಳು ಹಣಕಾಸು ಮೇಲ್ವಿಚಾರಣೆ ಮತ್ತು ಭದ್ರತಾ ಜಾರಿ ನಿರ್ದೇಶನಾಲಯಗಳ ಜೊತೆ ಸಮನ್ವಯ ಕಾಯ್ದುಕೊಂಡು ಮುನ್ನಡೆಯಬೇಕು” ಎಂದು ಪೀಠ ಹೇಳಿದೆ.

“ರಾಷ್ಟ್ರೀಯ ಭದ್ರತೆ ಎನ್ನುವುದು ಒಂದು ರಾಷ್ಟ್ರದ ಸಾರ್ವಭೌಮತ್ವ, ಸ್ಥಿರತೆ ಮತ್ತು ಸಾಂವಿಧಾನಿಕ ಕ್ರಮದ ಮೇಲೆ ನಿಂತಿರುವ ಅಗೋಚರವಾದ ಸುಂದರ ವಾಸ್ತುಶಿಲ್ಪ. ಇದಕ್ಕೆ ಧಕ್ಕೆ ತರುವ ಹಣಕಾಸು ಮಾರ್ಗಗಳ ವಿರುದ್ಧ ಕಣ್ಣಿಡುವುದು ಅಗತ್ಯ” ಎಂದು ಪೀಠ ಹೇಳಿದೆ.

ಪ್ರಕರಣದ ಎರಡನೇ ಆರೋಪಿಯಾಗಿರುವ ಮತ್ತು ಅರ್ಜಿದಾರರೂ ಆದ ಮಿಕಾ ಮಾರ್ಕ್, ವಿದೇಶ ಪ್ರವಾಸದಿಂದ ಹಿಂದಿರುಗುವ ವೇಳೆಯಲ್ಲಿ ಹಲವು ವಿದೇಶಿ ಡೆಬಿಟ್​ ಕಾರ್ಡ್‌ ಹೊಂದಿದ್ದಾರೆ’ ಎಂಬ ಶಂಕೆಯಡಿ ಇ ಡಿ ಅಧಿಕಾರಿಗಳು ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು.

ವಿಚಾರಣೆ ವೇಳೆ ಅವರ ಬಳಿ 24 ಅಂತಾರಾಷ್ಟ್ರೀಯ ವಹಿವಾಟಿನ ವಿದೇಶಿ ಡೆಬಿಟ್​ ಕಾರ್ಡ್​ಗಳು ದೊರೆತಿದ್ದವು. ಈ ಹಿನ್ನೆಲೆಯಲ್ಲಿ ಇ ಡಿ ಅಧಿಕಾರಿಗಳು ‘ದಿ ತಿಮೋತಿ ಇನಿಷಿಯೇಟಿವ್‌ ಸಂಸ್ಥೆ’ ಹಾಗೂ ಇದರ ಮುಖ್ಯಸ್ಥರಾದ ಬೆಂಗಳೂರಿನ ಜೊನಾಥನ್‌ ಎಸ್‌.ರಾಜನ್‌, ಮಿಕಾ ಮಾರ್ಕ್‌, ಅಜಿತ್‌ ವರ್ಗಿಸ್‌ ಮಥಾಯಿ, ವರ್ಗಿ ಚಾಕೊ, ಬಲ್ಲು ಕುರ್ಮಿ ಮತ್ತು ಸುಪ್ರೀಂ ಜಾಯ್ ವಿರುದ್ಧ ಕೊತ್ತನೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿಗಳು ವಿದೇಶಿ ಡೆಬಿಟ್‌ ಕಾರ್ಡ್‌ಗಳನ್ನು ಬಳಸಿ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಅನುಮಾನಸ್ಪದ ನಗದು ವಹಿವಾಟು ನಡೆಸಿದ್ದಾರೆ. 2025ರ ನವೆಂಬರ್‌ನಿಂದ 2026ರ ಏಪ್ರಿಲ್ ನಡುವೆ ₹92.55 ಕೋಟಿ ಹಾಗೂ 2024ರ ಜನವರಿಯಿಂದ 2026ರ ಮಾರ್ಚ್ ನಡುವಿನ ಅವಧಿಯಲ್ಲಿ ಕರ್ನಾಟಕ, ಛತ್ತೀಸ್‌ಗಡ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ₹44 ಕೋಟಿಗೂ ಅಧಿಕ ಹಣವನ್ನು ಎಟಿಎಂ ಮೂಲಕ ಡ್ರಾ ಮಾಡಿಕೊಂಡಿದ್ದಾರೆ ಎಂದು ಆಪಾದಿಸಲಾಗಿದೆ.

ಆರೋಪಿಗಳ ವಿರುದ್ಧ; ಜಾರಿ ನಿರ್ದೇಶನಾಲಯ (ಇ ಡಿ), ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) ಹಾಗೂ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿ ತನಿಖೆ ಕೈಗೊಳ್ಳಲಾಗಿದೆ.

ಟಿಟಿಐ ಅಮೆರಿಕದ ಕ್ರಿಶ್ಚಿಯನ್ ಮಿಷನರಿ ಸಂಸ್ಥೆ. ಇದು ಬೈಬಲ್‌ ಬೋಧನೆಗಳ ಆಧಾರದಡಿ ಶಿಷ್ಯರನ್ನು ತಯಾರುಗೊಳಿಸಲು ಮತ್ತು ಹೊಸ ಚರ್ಚುಗಳನ್ನು ಸ್ಥಾಪಿಸಲು ಸ್ಥಳೀಯ ನಾಯಕರಿಗೆ ತರಬೇತಿ ನೀಡುತ್ತದೆ.

Attachment
PDF
Micah_Mark & Ors Vs State of Karnataka & Anr
Preview
Kannada Bar & Bench
kannada.barandbench.com